ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಪ್ಪೆ ಭಾಷಣ, ಸರ್ಕಾರದ ಗುಣಗಾನ

Rashmi Kasaragodu
Updated On : 27 Jan 2014, 1:44 am

ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬದಲಿಗೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ವಾರ್ತಾ ಇಲಾಖೆ ಸಚಿವ ರೋಷನ್ ಬೇಗ್ ತರಾತುರಿಯಲ್ಲಿ ತಮ್ಮ ಭಾಷಣ ಮುಗಿಸಿ ಸಪ್ಪೆ ಎನಿಸಿಕೊಂಡರು. ಅದೇ ರೀತಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗಣ್ಯರನ್ನು ಸನ್ಮಾನಿಸುವ ಕಾರ್ಯಕ್ರಮವು ಕೇವಲ ನೆಪಕ್ಕೆ ನಡೆಯಿತು.
ನಗರದ ಸರ್ ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಗಣರಾಜ್ಯೋತ್ಸವದಲ್ಲಿ ಸಚಿವ ರೋಷನ್ ಬೇಗ್ ಧ್ವಜಾರೋಹಣ ನೆರವೇರಿಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.ಪೊಲೀಸರು, ಎನ್ಸಿಸಿ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಆಕರ್ಷಕ ಬ್ಯಾಂಡ್ ಸೆಟ್ ಮತ್ತು ಪಥ ಸಂಚಲನವನ್ನು ನಡೆಸಿ ಎಂದಿನಂತೆ ಗಮನ ಸೆಳೆದರು.
ನಂತರ ಜನರನ್ನುದ್ದೇಶಿಸಿ ಮಾತನಾಡಿದ ಸಚಿವರ ಭಾಷಣದಲ್ಲಿ ಸ್ಪಷ್ಟವಾಗಿ ಜಿಲ್ಲೆ ಸಾಧಿಸಿರುವ ಅಭಿವೃದ್ಧಿ, ಮುಂದೆ ಕಾಣಬೇಕಾದ ಪ್ರಗತಿಯ ವಿಚಾರಗಳು ಕೇಳಿ ಬರಲೇ ಇಲ್ಲ. ರಾಜ್ಯ ಸರ್ಕಾರದ ಗುಣಗಾನದಲ್ಲೂ ಯಶಸ್ವಿಯಾಗಲಿಲ್ಲ. ಆತುರವಾಗಿಯೇ ತಯಾರಿಸಿದ್ದ ಸಚಿವರ ಸಂದೇಶ ಭಾಷಣದ ಪ್ರತಿ 5 ಪುಟಗಳಲ್ಲಿ ಕೇವಲ ಮೂರು ಪುಟಗಳನ್ನು ಓದಿ ಮುಗಿಸಿದರು. ಗಣರಾಜ್ಯೋತ್ಸವ ಶುಭಾಶಯ, ಸಂವಿಧಾನ ಜಾರಿಗೆ ಬಂದ ದಿನ ಸೇರಿದಂತೆ ಒಟ್ಟು 20 ಅಂಶಗಳಲ್ಲಿ 10 ಅಂಶಗಳನ್ನೇ ಪ್ರಸ್ತಾಪಿಸಿದ್ದು ಮಾತ್ರ ಅಸಮಾಧಾನಕ್ಕೆ ಕಾರಣವಾಯಿತು. ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಜಿಲ್ಲೆಗೆ ಸರ್ಕಾರ ಬಿಡುಗಡೆ ಮಾಡಿರುವ ಒಟ್ಟು ಅನುದಾನ, ಘೋಷಿಸಿರುವ ಯೋಜನೆಗಳು, ನಡೆಯುತ್ತಿರುವ ಮತ್ತು ಘೋಷಣೆಯಾಗಲಿರುವ ದೂರದೃಷ್ಟಿ ಅಭಿವೃದ್ಧಿ ಕೆಲಸಗಳು, ಜಿಲ್ಲೆಯ ಜಲ್ವಂತ ಸಮಸ್ಯೆಗಳು ಸಮಗ್ರ ರೀತಿಯಲ್ಲಿ ಪ್ರಸ್ತಾಪವಾಗುತ್ತಿದ್ದವು. ಆದರೆ, ಈ ಬಾರಿ ಏನೂ ಏನೇನು ಇರಲಿಲ್ಲ.
ವೇಗದಲ್ಲಿಯೇ ಸನ್ಮಾನ: ಸಾಂಸ್ಕೃತಿಕ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಗಣ್ಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ವೇಗದಲ್ಲಿಯೇ ನಡೆಯಿತು. ಜಿಲ್ಲಾ ಕಾರಗೃಹ ಅಧೀಕ್ಷಕ ಲಕ್ಷ್ಮೀನಾರಾಯಣ್, ಕ್ರೀಡಾಪಟು ವಿದ್ಯಾರ್ಥಿಗಳಾದ ಅಲ್ಫಾನ್( ಥ್ರೋಬಾಲ್), ಮಹಾಲಕ್ಷ್ಮೀ, ಅಮೃತ ಮತ್ತು ಶಿವರಂಜಿನಿ (ಕಬಡ್ಡಿ), ನಾಗೇಶ್ ಮತ್ತು ಸುನೀಲ್( ಖೋ-ಖೋ), ಅಲ್ತಾಸ್ ಸುಲ್ತಾನ, ಸುಪ್ರಿಯಾ, ಸಲ್ಮಾನ್ ಪಾಷಾ(ಕರಾಟೆ)ಗೆ ಸ್ಮರಣಾ ಫಲಕವನ್ನು ಕೊಟ್ಟು ಕಳುಹಿಸಲಾಯಿತು. ಸೆಂಟ್ ಜೋಸೆಫ್ ಕಾನ್ವೆಂಟ್, ಸರ್ಕಾರಿ ಪ್ರೌಢಶಾಲೆ(ಬಿ.ಬಿ.ರಸ್ತೆ) ಮತ್ತು ಪಿಪಿಹೆಚ್ಎಸ್ ಸೇರಿದಂತೆ ಕೇವಲ ಮೂರು ಶಾಲೆಯ ವಿದ್ಯಾರ್ಥಿಗಳು ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಸರ್ಕಾರದ ಗುಣಗಾನ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಯಶಸ್ವಿಯಾಗಿ ದಕ್ಷ ಮತ್ತು ಪಾರದರ್ಶಕ ಆಡಳಿತವನ್ನು ನೀಡುತ್ತಿದೆ ಎಂದು ಸಚಿವ ರೋಷನ್ ಬೇಗ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ. ಸುಧಾಕರ್, ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಜಿಲ್ಲಾಧಿಕಾರಿ ವಿಶಾಲ್, ಜಿಲ್ಲಾ ರಕ್ಷಣಾಧಿಕಾರಿ ದಿವ್ಯ, ಮಾಜಿ ಶಾಸಕಿ ಅನಸೂಯಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement