ಕುಡಿವ ನೀರು ಯೋಜನೆಯಲ್ಲಿ ರಾಜಕೀಯ ಮಾಡಬೇಡಿ
ಚಿಕ್ಕಬಳ್ಳಾಪುರ: ಈ ಭಾಗಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆ ಜಾರಿ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿಲ್ಲ. ಕಾವೇರಿ, ಶರಾವತಿ, ನೇತ್ರಾವತಿ ಸೇರಿದಂತೆ ವಿವಿಧ ಮೂಲಗಳಿಂದ ಕುಡಿಯುವ ನೀರನ್ನು ದೊರಕಿಸಿಕೊಡಲು ಶ್ರಮಿಸುತ್ತಿದ್ದೇನೆ ಎಂದು ಕೇಂದ್ರ ಇಂಧನ ಮತ್ತು ಪೆಟ್ರೋಲಿಯಂ, ಪರಿಸರ ಸಚಿವ ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ನಗರದಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಯಾರೇ ಆಗಲಿ ನೀರಾವರಿ ಸೌಲಭ್ಯವನ್ನು ಒದಗಿಸುವಲ್ಲಿ ರಾಜಕೀಯ ಮಾಡಬಾರದು. ಜನರ ಹಿತವನ್ನು ಕಾಪಾಡುವುದು ಮುಖ್ಯವಾಗಿದ್ದು ಜ.31ರಂದು ಜಿಲ್ಲಾ ಬಂದ್ಗೆ ಕರೆ ನೀಡಿರುವವರು ಹೋರಾಟ ಮಾಡಿಕೊಳ್ಳಲಿ. ನನ್ನ ಅಭ್ಯಂತರವಿಲ್ಲ ಎಂದರು.
ಎತ್ತಿನಹೊಳೆ ಯೋಜನೆಗೆ ಜ.31ರಂದು ಶಂಕುಸ್ಥಾಪನೆ ನೆರವೇರಿಸಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಆದರೆ, ಈ ಹಿಂದೆಯೇ ತಾವು ಕಾಮಗಾರಿಯ ಟೆಂಡರ್ ಒಪ್ಪಿಗೆಯಾದ ನಂತರ ಫೆ.15ರ ಮೇಲೆ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಲಹೆ ನೀಡಿದ್ದಕ್ಕೆ ರಾಜ್ಯ ಸರ್ಕಾರ ಒಪ್ಪಿಕೊಂಡು ದಿನಾಂಕವನ್ನು ಮುಂದೂಡಿದೆ. ಚಿಕ್ಕಬಳ್ಳಾಪುರದ ಬದಲಿಗೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಶಂಕುಸ್ಥಾಪನೆ ನೆರವೇರಿಸುವುದರ ಬಗ್ಗೆ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕೆಂದರು.
ಡಾ.ಪರಮಶಿವಯ್ಯ ಅವರ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸುವುದಕ್ಕೆ ತಾವು ವಿರೋಧಿಸುವುದಿಲ್ಲ. ಎತ್ತಿನಹೊಳೆ ಯೋಜನೆ ಜತೆಗೆ ಪರಮಶಿವಯ್ಯನವರ ವರದಿ ಎರಡೂ ಜಾರಿಯಾಗಲಿ. ಆದರೆ ಮೊದಲು ಕುಡಿಯುವ ನೀರಿನ ಸಲುವಾಗಿ ಎತ್ತಿನಹೊಳೆ ಯೋಜನೆಯನ್ನು ಎರಡೂವರೆ ವರ್ಷದಲ್ಲಿ ಪೂರ್ಣಗೊಳಿಸಬೇಕಾಗಿದೆ. ಕುಡಿಯುವ ನೀರಿನ ಯೋಜನೆಗೆ ಪರಿಸರ ಅಥವಾ ಅರಣ್ಯ ಇಲಾಖೆ ಅನುಮತಿಯನ್ನು ನೀಡಲು ನಿರಾಕರಿಸುವುದಿಲ್ಲ ಎಂದರು.
ಎತ್ತಿನಹೊಳೆ ಯೋಜನೆಗೆ ಯಾವ ಭಾಗದ ಜನರೂ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ, ಈ ಭಾಗದ ಜನರೇ ಸ್ವಯಂ ಅಪಸ್ವರ ತೆಗೆದು ಹೋರಾಟಗಳನ್ನು ನಡೆಸಿದರೆ ಆ ಭಾಗಕ್ಕೆ ಸೇರಿದವರು ಯಾರಾದರೂ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ತಡೆಯಾಜ್ಞೆ ತಂದು ಕಾಮಗಾರಿ ತ್ವರಿತವಾಗಿ ನಡೆಯದಂತೆ ಮಾಡುತ್ತಾರೆ. ಆಗ ನೀರಾವರಿ ಯೋಜನೆ ಅನುಷ್ಠಾನ ಇನ್ನೂ ಮುಂದಕ್ಕೆ ಹೋಗುತ್ತದೆ. ಇಲ್ಲಿನ ಜನ ಸಾಮಾನ್ಯರು ತೊಂದರೆ ಅನುಭವಿಸಬೇಕಾಗುತ್ತದೆ ಎಂದರು. ಡಾ. ಪರಮಶಿವಯ್ಯನವರ ವರದಿ ಮತ್ತು ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ನೀರಾವರಿ ತಜ್ಞರು, ಹಿರಿಯ ಅಧಿಕಾರಿಗಳು, ದಕ್ಷಿಣ ಕನ್ನಡ ಭಾಗದ ಮತ್ತು ಬಯಲು ಸೀಮೆ ಜಿಲ್ಲೆಯ ಪ್ರಮುಖ ಮುಖಂಡರನ್ನೊಳಗೊಂಡಂತೆ ನಾಲ್ಕೈದು ಸಭೆಗಳನ್ನು ನಡೆಸಿ ಚರ್ಚಿಸಿದ್ದು ನೀರಾವರಿ ತಜ್ಞ ಡಾ. ಪರಮಶಿವಯ್ಯನವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಮಿತಿಯೇ ಪರಮಶಿವಯ್ಯನವರ ಯೋಜನೆಗೆ ಸಂಬಂಧಪಟ್ಟಂತೆ ತಾಂತ್ರಿಕ ವರದಿಯನ್ನು ನೀಡಿಲ್ಲ. ಎತ್ತಿನಹೊಳೆ ಯೋಜನೆಗೆ ಈಗಾಗಲೇ ಡಿಪಿಆರ್ ತಯಾರಾಗಿದೆ ಎಂದರು.
ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯವನ್ನು ಒದಗಿಸಲು ಸರ್ಕಾರ ಬದ್ಧವಾಗಿದ್ದು ತಾವು ಸಹ ಈ ವಿಷಯದಲ್ಲಿ ವಿಶೇಷ ಕಾಳಜಿ ವಹಿಸಿ ಕಾವೇರಿ, ಶರಾವತಿ, ನೇತ್ರಾವತಿ ಮೂಲಗಳಿಂದ ನೀರನ್ನು ತರಲು ಶ್ರಮಿಸುತ್ತಿದ್ದೇನೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಇತರೆ ಕ್ಷೇತ್ರಗಳಿಂತ ಮಾದರಿ ಕ್ಷೇತ್ರವನ್ನಾಗಿಸಿದ್ದೇನೆ. ಇದರಲ್ಲಿ ಇನ್ನೂ ಪ್ರಗತಿಯನ್ನು ಸಾಧಿಸುವಲ್ಲಿದ್ದೇನೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಆಂಜಿನಪ್ಪ, ಮಾಜಿ ಶಾಸಕ ಎಂ.ಶಿವಾನಂದ್ ಮುಂತಾದವರು ಉಪಸ್ಥಿತರಿದ್ದರು.