ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೃಷಿ ಮಾಹಿತಿ ಆಂದೋಲನ ಪ್ರವಾಸಕ್ಕೆ ಚಾಲನೆ

Rashmi Kasaragodu
Updated On : 28 Jan 2014, 1:29 am

ಗುಡಿಬಂಡೆ: ಸಮಗ್ರ ಕೃಷಿ ಹಾಗೂ ತೋಟಗಾರಿಕೆ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್ ಬಳಿಯ ಪಿಆರ್ಎಸ್ ತೋಟಗಾರಿಕೆ ಕ್ಷೇತ್ರದಲ್ಲಿ ನಡೆದ ಫಲಪುಷ್ಪ ಪ್ರದರ್ಶನಕ್ಕೆ ಗುಡಿಬಂಡೆ ತಾಲೂಕಿನಿಂದ ಸುಮಾರು 200 ಜನ ರೈತರು ಭಾಗವಹಿಸಿ ಕೃಷಿಯಲ್ಲಿನ ಆಧುನಿಕ ತಂತ್ರಜ್ಞಾನ, ಕೃಷಿ ಯಾಂತ್ರೀಕರಣ, ಪಶು ಸಂಗೋಪನೆ, ತೋಟಗಾರಿಕೆ ಕೃಷಿಯ ಬಗ್ಗೆ ಸಮಗ್ರ ಮಾಹಿತಿ ಪಡೆದರು. ಜಂಟಿ ಕೃಷಿ ನಿರ್ದೇಶಕ ರಾಮದಾಸ್ ನೇತೃತ್ವದಲ್ಲಿ ಕೈಗೊಂಡ ಅಧ್ಯಯನ ಪ್ರವಾಸಕ್ಕೆ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಚಾಲನೆ ನೀಡಿದರು. ಈ ವೇಳೆ ವಾಹಿನಿ ಅಭಿವೃದ್ಧಿಸಂಸ್ಥೆಯ ಎಚ್.ಆರ್. ಸುರೇಶ್, ವಾಹಿನಿ ಸಂಸ್ಥೆಯ ಕ್ಷೇತ್ರಾಧಿಕಾರಿ ಚಲಪತಿ, ಕೃಷಿ ಅಧಿಕಾರಿ ಶಂಕರಯ್ಯ, ಭೂ ಚೇತನ ಅನುವುಗಾರರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಸಚಿವರ ಭೇಟಿ
ಮುಳಬಾಗಿಲು: ದಲಿತರಿಗೆ ಬಹಿಷ್ಕಾರ ಹಾಕುವುದನ್ನು ಸಹಿಸಲು ಸಾಧ್ಯವಿಲ್ಲ. ಗ್ರಾಮದ ಪ್ರತಿಯೊಬ್ಬರೂ ಸಾಮರಸ್ಯದಿಂದ ಜೀವನ ಸಾಗಿಸಲು ಮುಂದಾಗಬೇಕು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್.ಆಂಜನೇಯಲು ಹೇಳಿದರು.
ತಾಲೂಕಿನ ಕಗ್ಗನಹಳ್ಳಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಅವರು, ದಲಿತ ಕುಟುಂಬದವರೊಂದಿಗೆ ಮಾತನಾಡಿ ಅವರ ಸಮಸ್ಯೆಗಳನ್ನು ಅಲಿಸಿದರು. ಬಹಿಷ್ಕಾರಕ್ಕೊಳಗಾದ 4 ಕುಟುಂಬಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಹಾರ ಧಾನ್ಯ ವಿತರಿಸಲು ಸೂಚಿಸಿದರು. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ ಎಂದು ಗ್ರಾಮಸ್ಥರು ದೂರಿದರು. ಕೊಳವೆ ಬಾವಿ ಕೊರೆದರೂ ಪಂಪ್ ಮೋಟಾರ್ ಅಳವಡಿಸದ ಕಾರಣ ಕುಡಿಯುವ ನೀರಿನ ಸಮಸ್ಯೆ ತಕ್ಷಣ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು. ಮುಳಬಾಗಲು ಶಾಸಕ ಕೊತ್ತೂರು ಜಿ.ಮಂಜುನಾಥ್ ಗ್ರಾಮದ ಎಲ್ಲ ಪರಿಶಿಷ್ಟ ಜಾತಿ ಕುಟುಂಬಕ್ಕೂ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆ ಬಾವಿ ಮಂಜೂರು ಮಾಡಿಸಿಕೊಡುವುದಾಗಿ ಹೇಳಿದರು. ಕೋಲಾರ ಜಿಲ್ಲಾಧಿಕಾರಿ ಡಿ.ಕೆ.ರವಿ, ಡಿಐಜಿ ನಂಜುಂಡಸ್ವಾಮಿ, ಕೋಲಾರ ಎಸ್ಪಿ ರಾಮ್ನಿವಾಸ್ ಸಪೆಟ್, ಉಪವಿಭಾಗಾಧಿಕಾರಿ ಮಂಜುನಾಥ್, ಡಿವೈಎಸ್ಪಿ ಸಿದ್ದಯ್ಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement