ಕೆ.ಜಿ.ಹಳ್ಳಿ ಗುಚ್ಛ ಸಂಪನ್ಮೂಲ ಕೇಂದ್ರಕ್ಕೆ ಶಾಸಕ ದಿಢೀರ್ ಭೇಟಿ
ಟೇಕಲ್: ಶಾಸಕ ಕೆ.ಎಸ್.ಮಂಜುನಾಥಗೌಡರು ಟೇಕಲ್ನ ಸರ್ಕಾರಿ ಪಪೂ ಕಾಲೇಜಿನ ಆವರಣದಲ್ಲಿರುವ ಕೆ.ಜಿ.ಹಳ್ಳಿ ಗುಚ್ಛ ಸಂಪನ್ಮೂಲ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸುಮಾರು 10 ವರ್ಷಗಳಿಂದ ಕಟ್ಟಡ ಕಟ್ಟಿ ಅದನ್ನು ಉಪಯೋಗಿಸದೆ ಅದರಲ್ಲಿ ಹಳೆ ಚೇರು, ಡೆಸ್ಕ್, ಇತರೆ ಸಾಮಾನುಗಳನ್ನು ಹಾಕಿದ್ದು ಧೂಳು ತುಂಬಿ ಹೋಗಿತ್ತು. ಇದನ್ನು ಗಮನಿಸಿದ ಶಾಸಕರು ಸ್ಥಳದಲ್ಲಿದ್ದ ಬಿಇಒ ಸುಬ್ರಮಣ್ಯಂ ಅವರಿಗೆ ಇದನ್ನು ಸ್ವಚ್ಛಗೊಳಿಸಿ ಉಪಯೋಗಿಸಲು ಸೂಚಿಸಿ, ಇಷ್ಟು ದಿನಗಳವರೆಗೆ ಇದನ್ನು ಈ ರೀತಿ ಬಿಡಲು ಕಾರಣವೇನು ಎಂದು ಕೇಳಿದರು. ಇದನ್ನು ಸಿಆರ್ಸಿ ಕೇಂದ್ರದವರು ಬಳಸಿಕೊಳ್ಳಬೇಕೆಂದು ತಾಕೀತು ಮಾಡಿದರು.
ತಾಲೂಕು ಶಿಕ್ಷಣ ಇಲಾಖೆಯ ಅನುದಾನದಡಿಯಲ್ಲಿ ಸುಮಾರು 8ರಿಂದ 10 ವರ್ಷಗಳ ಹಿಂದೆ ಕೆ.ಜಿ.ಹಳ್ಳಿಯ ಸಿಆರ್ಸಿ ಕೇಂದ್ರವಾಗಿ ಕಟ್ಟಡ ಕಟ್ಟಲಾಗಿತ್ತು. ಈ ಕಟ್ಟಡದಲ್ಲಿ ಸಿಆರ್ಸಿ ವ್ಯಾಪ್ತಿಯ ಮಾಸಿಕ ಸಭೆ, ತರಬೇತಿ, ಶಿಕ್ಷಕರಿಗೆ ಮಾಹಿತಿ ಒದಗಿಸುವ ಕೇಂದ್ರವಾಗಿತ್ತು. ಆದರೆ ಸ್ಥಳೀಯರ ನಿರ್ಲಕ್ಷ್ಯದಿಂದ ಈ ಕಟ್ಟಡ ಮೂಲೆಗುಂಪಾಗಿತ್ತು. ಶಾಸಕರ ಭೇಟಿಯಿಂದ ಕೆ.ಜಿ.ಹಳ್ಳಿ ಸಿಆರ್ಸಿ ಕೇಂದ್ರಕ್ಕೆ ಹೊಸ ಚೇತನ ಮೂಡಿದಂತಾಗಿದೆ.
ತಾಪಂ ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡ, ಮಾಜಿ ಜಿಪಂ ಸದಸ್ಯರಾದ ಆರ್.ರಾಜಣ್ಣ, ಆನೇಪುರದ ಹನುಮಂತಪ್ಪ, ಎಸ್ಬಿಸಿ ಸಮಿತಿ ಅಧ್ಯಕ್ಷ ಕೆ.ಬಿ.ನಾರಾಯಣಸ್ವಾಮಿ, ಪ್ರಾಂಶುಪಾಲ ಎ.ಕೆ.ಪಾಪಣ್ಣ, ಉಪಪ್ರಾಂಶುಪಾಲೆ ಪುಷ್ಪಾ ಇದ್ದರು.