ಗಿಡ ನೆಟ್ಟು ಭೂಮಿ ಋಣ ತೀರಿಸಿ: ನವೀನ್
ಚಿಕ್ಕಬಳ್ಳಾಪುರ: ಭಾರತ ದೇಶದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು ಜ್ಯಾತ್ಯತೀತ ತತ್ವಗಳ ಮೇಲೆ ರೂಪಿತಗೊಂಡಿರುವ ಸಂವಿಧಾನ ನಮ್ಮದು ಎಂದು ಶ್ರೀ ಕೆ.ವಿ. ಮತ್ತು ಪಂಚಗಿರಿ ದತ್ತಿಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ತಿಳಿಸಿದರು.
ನಗರದ ಹೊರ ವಲಯದ ಸಿವಿವಿ ಕ್ಯಾಂಪಸ್ನ ಕೆವಿಟಿ ಅನುದಾನಿತ ಪಾಲಿಟೆಕ್ನಿಕ್ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ 65ನೇ ಗಣರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ರತಿಯೊಬ್ಬ ಭಾರತೀಯನೂ ಕೇವಲ ಆ.15 ಮತ್ತು ಜ.26ರಂದು ಮಾತ್ರ ರಾಷ್ಟ್ರಪ್ರೇಮ ತೋರಿದರೆ ಸಾಲದು, ಪ್ರತಿದಿನ, ಪ್ರತಿಕ್ಷಣ ಭಾರತೀಯರಲ್ಲಿ ರಾಷ್ಟ್ರಪ್ರೇಮವಿರಬೇಕೆಂದರು.
ಇಂದು ನಾನಾ ಕಾರಣಗಳಿಂದಾಗಿ ಅತ್ಯಧಿಕ ತಾಪಮಾನದಿಂದ ಭೂಮಿಯಲ್ಲಿ ಪ್ರಾಕೃತಿಕ ಸಮಸ್ಯೆಗಳು ಕಂಡು ಬರುತ್ತಿವೆ. ಈ ಭೂಮಿಯನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದ ಕಾರಣ ಪ್ರತಿಯೊಬ್ಬರು ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಅದನ್ನು ಹೆಮ್ಮರವನ್ನಾಗಿಸಿದರೆ ಭೂಮಿಯ ಋಣ ತೀರಿಸಿದಂತಾಗಲಿದೆ ಎಂದರು. ಕಾಲೇಜಿನ ಪ್ರಾಂಶುಪಾಲ ಜಿ.ನರಸಿಂಹಯ್ಯ ಮಾತನಾಡಿ, ಸಂಸದೀಯ ಪ್ರಜಾಪ್ರಭುತ್ವವನ್ನು ಹೊಂದಿರುವ ಜ್ಯಾತ್ಯತೀತ ತತ್ವಕ್ಕೆ ಒತ್ತು ನೀಡುವ ನಮ್ಮ ಸಂವಿಧಾನ ಅರ್ಥಪೂರ್ಣವಾದುದು ಎಂದರು.
ಸಾಹಿತಿ ಟಿ.ಎಸ್.ನಾಗೇಂದ್ರಬಾಬು ಮಾತನಾಡಿ, ಆರ್ಥಿಕ ಸ್ವಾವಲಂಬನೆ ಮತ್ತು ಸದೃಢ ಸಮಾಜದ ನಿರ್ಮಾಣ ನಮ್ಮೆಲ್ಲರ ಗುರಿಯಾಗಬೇಕು. ನಮ್ಮ ಜಿಲ್ಲೆಯವರೇ ಆದ ಡಾ.ಸಿ.ಎನ್.ಆರ್.ರಾವ್ ಅವರಿಗೆ ವೈಜ್ಞಾನಿಕ ಕ್ಷೇತ್ರದಲ್ಲಿ ಮಾಡಿರುವ ಅನುಪಮ ಸೇವೆಗಾಗಿ ಭಾರತ ರತ್ನ ಪ್ರಶಸ್ತಿ ದೊರೆತಿದೆ. ಈ ಜಿಲ್ಲೆಗೆ ಸರ್.ಎಂ.ವಿಶ್ವೇಶ್ವರಯ್ಯನವರ ನಂತರ ಭಾರತ ರತ್ನ ಪ್ರಶಸ್ತಿಗೆ ಭಾಜನರಾದವರು ಸಿ.ಎನ್.ಆರ್.ರಾವ್. ಇದು ನಮ್ಮ ಜಿಲ್ಲೆಗೆ ಸಂದ ಗೌರವವಾಗಿದೆ ಎಂದರು. ಕೆವಿಟಿ ವಿದ್ಯಾ ಸಂಸ್ಥೆಯ ಆರ್.ಎನ್.ಜಯದೇವ್ ಮುಂತಾದವರು ಹಾಜರಿದ್ದರು.