ಜನರ ಸಮಸ್ಯೆಗೆ ಸ್ಪಂದಿಸಲು ಕರೆ
ಚಿಂತಾಮಣಿ: ಜನಸಾಮಾನ್ಯರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡಬೇಕೆಂದು ಚಿಕ್ಕಬಳ್ಳಾಪುರ ಲೋಕಾಯುಕ್ತ ಅಧಿಕಾರಿ ಮಂಜೇಗೌಡ ಕರೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಸಭೆಯಲ್ಲಿ ಅಹವಾಲುಗಳನ್ನು ಸ್ವೀಕರಿಸಿದ ನಂತರ ಮಾತನಾಡಿದರು. ತಾಲೂಕಿನ ಕೋರ್ಲಪರ್ತಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳು ಜನರಿಗೆ ಪಂಚಾಯ್ತಿ ಕಚೇರಿಯಲ್ಲಿ ದೊರೆಯದೆ ನಗರದ ಖಾಸಗಿ ಕೊಠಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಬಂದ ದೂರುಗಳನ್ನು ಆಲಿಸಿದ ಲೋಕಾಯುಕ್ತ ಅಧಿಕಾರಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕೆಂದು ಖಡಕ್ಕಾಗಿ ಎಚ್ಚರಿಸಿದರು.
ತಾಲೂಕಿನ ವಿವಿಧ ವ್ಯಾಪ್ತಿಯಲ್ಲಿ ಬರುವ ಬಡಜನರನ್ನು ಕಚೇರಿಗಳ ಸುತ್ತ ಪರದಾಡಿಸದಂತೆ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡಬೇಕೆಂದು ಹೇಳಿದರು.
ಖಾಸಗಿ ನ್ಯಾಯಾಲಯದಲ್ಲಿರುವ ಪ್ರಕರಣಗಳು ಲೋಕಾಯುಕ್ತರಿಗೆ ಒಳಪಡುವುದಿಲ್ಲ. ಅದು ಕಾನೂನು ಅಡಿಯಲ್ಲಿ ತೆಗೆದುಕೊಳ್ಳುವ ತೀರ್ಪಿಗೆ ಬದ್ಧವಾಗಿರಬೇಕೆಂದು ಮಂಜೇಗೌಡರು ಸಭೆಯಲ್ಲಿ ವಿವರಿಸಿದರು. ತಾಲೂಕು ದಂಡಾಧಿಕಾರಿಗಳಾದ ಕೆ.ಟಿ.ಕೃಷ್ಣಸ್ವಾಮಿ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಂಬಂಧಿಸಿ ಬಂದ 25ಕ್ಕೂ ಹೆಚ್ಚು ಅರ್ಜಿಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.