ಡಬ್ಬಿಂಗ್ ನಿಷೇಧಕ್ಕೆ ಕಸಾಪ ಬೆಂಬಲ
ಚಿಂತಾಮಣಿ: ಕನ್ನಡ ಚಲನಚಿತ್ರರಂಗ ನಡೆಸುತ್ತಿರುವ ಡಬ್ಬಿಂಗ್ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗೆ ತಾಲೂಕು ಕಸಾಪ ಅಧ್ಯಕ್ಷ ಎ.ಎಸ್.ನಾಗರಾಜ್ ಬೆಂಬಲ ಸೂಚಿಸಿದ್ದಾರೆ.
ಅವರು ನಗರದ ಕಸಾಪ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಬ್ಬಿಂಗ್ ಎಂಬ ಭೂತ ಕನ್ನಡ ಚಿತ್ರರಂಗವನ್ನು ಅವನತಿ ಅಂಚಿಗೆ ತೆಗೆದುಕೊಂಡು ಹೋಗುತ್ತದೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ತತ್ವ ಸಿದ್ಧಾಂತವನ್ನು ಒಪ್ಪಿ ರಾಜ್ಯ ಸರ್ಕಾರ ಡಬ್ಬಿಂಗ್ ನಿಷೇಧಿಸಬೇಕು. ಡಬ್ಬಿಂಗ್ನ್ನು ಕಸಾಪ ಖಂಡಿಸುತ್ತದೆ ಎಂದರು.
ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಅವರು, ಇದೇ ತಿಂಗಳು 31ರಂದು ಕರೆ ನೀಡಿದ್ದ ಬಂದ್ಗೆ ತಾಲೂಕು ಕಸಾಪ ಬೆಂಬಲಿಸಿದೆ ಎಂದು ತಿಳಿಸಿದರು.
ಬಾಗೇಪಲ್ಲಿಯಲ್ಲಿ ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಶೆ.ಷು.ಶಾಸ್ತ್ರಿ ತಳಗವಾರ ಅವರ ಆಯ್ಕೆಯನ್ನು ಎ.ಎಸ್.ನಾಗರಾಜ್ ಸ್ವಾಗತಿಸಿದರು.