ನೊಂದವರ ಸೇವೆಗೆ ಬದ್ಧ: ಹೊನ್ನೇಗೌಡ
ಚಿಂತಾಮಣಿ: ಸಮಾಜದಲ್ಲಿ ತುಳಿತಕ್ಕೊಳಗಾದ ಹಾಗೂ ನೊಂದ ಜನರಿಗೆ ಕಾನೂನು ಚೌಕಟ್ಟಿನಲ್ಲಿ ಸೇವೆಯನ್ನು ಮಾಡುತ್ತೇನೆಂದು ಗ್ರಾಮಾಂತರ ಠಾಣೆಯ ಸಬ್ಇನ್ಸ್ಪೆಕ್ಟರ್ ಹೊನ್ನೇಗೌಡ ಭರವಸೆ ನೀಡಿದ್ದಾರೆ. ನೂತನವಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ಪಕ್ಷಭೇದ ಮರೆತು, ಸಮಾಜದಲ್ಲಿ ತುಳಿತಕ್ಕೊಳಗಾದ ಹಾಗೂ ನೊಂದ ಜನರಿಗೆ ಕಾನೂನು ಚೌಕಟ್ಟಿನಲ್ಲಿ ಸೇವೆಯನ್ನು ಮಾಡುತ್ತೇನೆಂದು ತಿಳಿಸಿದರು. ಮುಸ್ಲಿಂ ಹಿತರಕ್ಷಣೆ ವೇದಿಕೆಯ ಪದಾಧಿಕಾರಿಗಳಾದ ಮುದಾಸೀರ್,ಇಮ್ರಾನ್ ಪಾಷಾ ಸೇರಿದಂತೆ ಇತರರು ಹೊನ್ನೇಗೌಡ ಅವರನ್ನು ಹೂಮಾಲೆ ಹಾಕಿ ಸ್ವಾಗತಿಸಿದರು.
ಅರ್ಹರ ಆಯ್ಕೆಗಾಗಿ ಮತ ಚಲಾಯಿಸಿ
ಚಿಕ್ಕಬಳ್ಳಾಪುರ: ದೇಶದ ಅಭಿವೃದ್ಧಿಗೆ ಶ್ರಮಿಸುವ ಅರ್ಹರನ್ನು ಜನಪ್ರತಿನಿಧಿಯನ್ನಾಗಿ ಆಯ್ಕೆ ಮಾಡುವ ಸಲುವಾಗಿ ಸಂವಿಧಾನ ನೀಡಿರುವ ಮತದಾನದ ಜವಾಬ್ದಾರಿಯನ್ನು ಪ್ರತಿಯೊಬ್ಬರು ಪ್ರಾಮಾಣಿಕವಾಗಿ ನಿರ್ವಹಿಸಬೇಕೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ.ಎಸ್. ಬೆಳ್ಳುಂಕೆ ತಿಳಿಸಿದರು. ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಉತ್ತಮ ಆಡಳಿತ ನೀಡುವ ಸರ್ಕಾರದಿಂದ ಮಾತ್ರ ದೇಶ ಮತ್ತು ರಾಜ್ಯದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ ಎಂದರು.