ಬಾಲ್ಯ ವಿವಾಹ ತಡೆಗೆ ಜಾಗೃತಿ ಜಾಥಾ
ಬಂಗಾರಪೇಟೆ: ಬಾಲ್ಯ ವಿವಾಹ ಒಂದು ದೊಡ್ಡ ಪಿಡುಗಾಗಿದ್ದು ಇದನ್ನು ದೇಶದಿಂದಲೇ ಸಂಪೂರ್ಣವಾಗಿ ತೊಲಗಿಸಲು ಪ್ರತಿಯೊಬ್ಬ ಪೋಷಕರು ಸಹಕಾರ ನೀಡುವ ಮೂಲಕ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟಬೇಕೆಂದು ಸಿಡಿಪಿಒ ಸಿ.ವಿ.ರಾಮನ್ ಹೇಳಿದರು.
ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೋಕಸ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ತಡೆಗಟ್ಟುವ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಹಲವು ಮಂದಿ ತಮ್ಮ ಹೆಣ್ಣು ಮಕ್ಕಳಿಗೆ 18 ತುಂಬುವ ಮೊದಲೇ ಬಾಲ್ಯ ವಿವಾಹ ಮಾಡಿಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ. ಇದು ಕಾನೂನು ಬಾಹಿರವಾದ ಕೃತ್ಯವಾಗಿದ್ದು, ಇದರಿಂದ ಬಾಲಕಿಯರು ಸಂಸಾರದ ಬಂಧನಕ್ಕೆ ತಳ್ಳುವ ಮೂಲಕ ಅವರ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಪೋಷಕರಲ್ಲಿ ಅರಿವು ಮೂಡಿಸಲು ಸರ್ಕಾರಗಳು ಹತ್ತಾರು ಕಾನೂನುಗಳನ್ನು ತಂದಿದ್ದರೂ ಪ್ರಚಾರದ ಕೊರತೆಯಿಂದಾಗಿ ಬಾಲ್ಯ ವಿವಾಹಗಳು ನಿಯಂತ್ರಣಕ್ಕೆ ಬಂದಿಲ್ಲ ಎಂದರು.
ಆದ್ದರಿಂದ ಬಾಲಕಿಯರಿಂದಲೇ ಪೋಷಕರಿಗೆ ಜಾಗೃತಿ ಮೂಡಿಸಲು ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ತಮ್ಮ ಕರ್ತವ್ಯಗಳ ಬಗ್ಗೆ ತಿಳಿದು ಕಾನೂನು ಪಾಲನೆ ಮಾಡುವ ಮೂಲಕ ದೇಶ ಪ್ರಗತಿಗೆ ಶ್ರಮಿಸಬೇಕೆಂದು ಕೋರಿದರು.
ಮಕ್ಕಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಾಲ್ಯ ವಿವಾಹ ತಡೆಗಟ್ಟಲು ಘೋಷಣೆಗಳನ್ನು ಕೂಗಿದರು. ಪೋಕಸ್ ಟ್ರಸ್ಟ್ ಅಧ್ಯಕ್ಷ ಎ.ಹರೀಶ್, ಕಾಲೇಜಿನ ಪ್ರಾಂಶುಪಾಲ ವೆಂಕಟರಾಜು, ಉಪ ಪ್ರಾಂಶುಪಾಲ ಶಂಕರಪ್ಪ ಮತ್ತಿತರರು ಇದ್ದರು.