ಮೂಲಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಚಿಂತಾಮಣಿ: ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಸೋಮವಾರ ನೂರಾರು ಮಂದಿ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
27ನೇ ವಾರ್ಡ್ನ ನೂರಾರು ನಿವಾಸಿಗಳು ಪಾಲ್ಗೊಂಡು ನಗರದ ವಾರ್ಡಿನ ಶಾಂತಿನಗರ, ಹೈದರಾಲಿ ನಗರ, ಅಯೋಧ್ಯನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಮುಖ್ಯರಸ್ತೆಯನ್ನು ದುರಸ್ತಿ ಪಡಿಸಲು ಆಗ್ರಹಿಸಿ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.
ಹಲವು ತಿಂಗಳಿಂದ 27ನೇ ವಾರ್ಡಿನಲ್ಲಿ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದ್ದರೂ ನಗರಸಭೆ ಆಯುಕ್ತರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದೂರಿದರು.
ಸುದ್ದಿ ತಿಳಿದ ತಕ್ಷಣ ನಗರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಟಿ.ಮುರಳಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ ಮಾಡಿದರು. ನಂತರ ನಗರಸಭಾ ಆಯುಕ್ತ ಚನ್ನೇಗೌಡ ಮತ್ತು ನಗರಸಭಾ ಸದಸ್ಯ ಡಿ.ಸಾದಪ್ಪ ಶೀಘ್ರವೇ ಸಮಸ್ಯೆಗಳನ್ನು ಈಡೇರಿಸಲಾಗುವುದೆಂದು ಭರವಸೆ ನೀಡಿದರು.
ಮುಖಂಡರಾದ ಸುಬ್ರಮಣಿ, ಅನಿಲ್, ಆರುಮುಗಂ, ಮಾಣಿಕ್ಯಮ್ಮ, ಚಲುವಿ, ವೇಲ್ಮಣಿ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.