ಹುದುಕುಳ ಗ್ರಾಮದ ಬಳಿ ರೈಲು ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ
ಬಂಗಾರಪೇಟೆ: ಹುದುಕುಳ ಗ್ರಾಮದ ಬಳಿ ನೂತನವಾಗಿ ರೈಲು ನಿಲ್ದಾಣ ನಿರ್ಮಾಣಕ್ಕೆ ಹಾಗೂ ಗ್ರಾಮದಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆಗಾಗಿ ಸೋಮವಾರ ದಕ್ಷಿಣ ರೈಲ್ವೆ ವಿಭಾಗಿಯ ಅಭಿಯಂತರ ಸನ್ನಿ ಅವರು ಭೇಟಿ ನೀಡಿ ಹಸಿರು ನಿಶಾನೆ ನೀಡಿದರು.
ಹುದುಕುಳ ಗ್ರಾಮದಲ್ಲಿರುವ ರೇಲ್ವೆ ಲೆವೆಲ್ ಕ್ರಾಸಿಂಗ್ ಮುಚ್ಚಿ ಅಂಡರ್ಪಾಸ್ ರಸ್ತೆ ಕಾಮಗಾರಿ ನಿರ್ಮಾಣಕ್ಕೆ ಈಗಾಗಲೇ ಇಲಾಖೆ ಸಿದ್ಧವಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಅಂಡರ್ಪಾಸ್ ನಿರ್ಮಾಣದಿಂದ ಈ ಮಾರ್ಗದಲ್ಲಿ ಲಾರಿ, ಟೆಂಪೊ ಮತ್ತು ಬಸ್ ಸಂಚರಿಸಲು ಆಗುವುದಿಲ್ಲ. ಸಣ್ಣ ವಾಹನಗಳು ಮಾತ್ರ ಸಂಚರಿಸಬುಹುದು.
ಆದ್ದರಿಂದ ಉದ್ದೇಶಿಸಿರುವ ಕಾಮಗಾರಿಯ ಅಳತೆಯನ್ನು ಮಾರ್ಪಡಿಸಿ ರೈತರು ಬೆಳೆದ ತರಕಾರಿ ಮತ್ತಿತರೆ ವಾಣಿಜ್ಯ ಬೆಳೆಗಳನ್ನು ದೊಡ್ಡ ವಾಹನಗಳಲ್ಲಿ ಸಾಗಿಸಲು ಅನುಕೂಲವಾಗುವಂತೆ ಕಾಮಗಾರಿಯ ವಿಸ್ತೀರ್ಣವನ್ನು ವಿಸ್ತರಿಸುವಂತೆ ಗ್ರಾಮಸ್ಥರು ಪ್ರತಿಭಟಿಸಿ ಕಾಮಗಾರಿ ಪ್ರಾರಂಭಕ್ಕೆ ಅಡ್ಡಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುವಂತೆ ಅಂಡರ್ಪಾಸ್ ಕಾಮಗಾರಿಯ ವಿವರವನ್ನು ನೀಡಿ ಅವರ ಮನವರಿಕೆ ಮಾಡಿಕೊಡಲು ಹಾಗೂ ಪಟ್ಟಣದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಒತ್ತಾಯದ ಮೇರೆಗೆ ರೇಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಹೋಗಲು ಸಬ್ ವೇ ನಿರ್ಮಾಣಕ್ಕೂ ಸ್ಥಳ ಪರಿಶೀಲನೆ ಮಾಡಲು ವಿಭಾಗಿ ಅಭಿಯಂತರ ಸನ್ನಿ ಅವರು ಆಗಮಿಸಿ ಸ್ಥಳ ವೀಕ್ಷಣೆ ಮಾಡಿ ಹುದುಕುಳ ಬಳಿ ಅಂಡರ್ಪಾಸ್ ಕಾಮಗಾರಿಯಲ್ಲಿ ರೈತರಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಮಾಡುವುದಾಗಿ ಅಧಿಕಾರಿ ಭರವಸೆ ನಂತರ ಕಾಮಗಾರಿ ಪ್ರಾರಂಭಕ್ಕೆ ಅನುಮತಿ ನೀಡಿದರು. ಅಲ್ಲದೆ ನೂತನ ರೈಲು ನಿಲ್ದಾಣವನ್ನು ಗ್ರಾಮಕ್ಕೆ ಅಂಟಿಕೊಂಡೇ ನಿರ್ಮಿಸಿಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಅರ್ಧ ಎಕರೆ ಜಮೀನು ಉಚಿತವಾಗಿ ನೀಡಿದರೆ ಗ್ರಾಮಸ್ಥರ ಬೇಡಿಕೆಯಂತೆ ನಿರ್ಮಿಸುವುದಾಗಿ ಹೇಳಿದರು. ಇದೇ ವೇಳೆ ಚಿಕ್ಕಬಳ್ಳಾಪುರದಿಂದ ಕೋಲಾರಕ್ಕೆ ಬರುವ ರೈಲನ್ನು ಪಟ್ಟಣದವರೆಗೂ ವಿಸ್ತರಿಸಲು ಇರುವ ಹಲವು ಅಡೆತಡೆಗಳನ್ನು ಶಾಸಕ ನಾರಾಯಣಸ್ವಾಮಿ ಬಗೆಹರಿಸಿಕೊಡುವ ಭರವಸೆಯನ್ನು ಅಧಿಕಾರಿಗೆ ನೀಡಿದರು. ತ್ವರಿತವಾಗಿ ಕಾಮಗಾರಿಯನ್ನು ಕೈಗೊಳ್ಳುವುದಾಗಿ ಅಧಿಕಾರಿ ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಸದಸ್ಯರಾದ ಶಫಿ, ರಮೇಶ್, ವೆಂಕಟೇಶಗೌಡ, ಕುಮಾರ್, ಭಾಗ್ಯಮ್ಮ, ಕುಂಬಾರಪಾಳ್ಯ ಮಂಜುನಾಥ್, ರಂಗರಾಮಯ್ಯ ಮತ್ತಿತರರು ಇದ್ದರು.