31 ರಂದು ಚಿಕ್ಕಬಳ್ಳಾಪುರ ಜಿಲ್ಲಾ ಬಂದ್
ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆಗೆ ತರಾತುರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲು ಮುಂದಾಗಿದ್ದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ವಿರುದ್ಧ ಕಿಡಿಕಾರುತ್ತಿರುವ ಶಾಶ್ವತ ನೀರಾವರಿ ಹೋರಾಟಗಾರರು ಮೊದಲು ನೀರಾವರಿ ಯೋಜನೆ ಜಾರಿಯ ಗೊಂದಲ ಬಗೆಹರಿಸಿ, ಪರಮಶಿವಯ್ಯನವರ ವರದಿ ಕಾರ್ಯ ರೂಪಕ್ಕೆ ತರಬೇಕೆಂದು ಒತ್ತಾಯಿಸಿ ಜ.31 ರಂದು ಚಿಕ್ಕಬಳ್ಳಾಪುರ ಜಿಲ್ಲಾ ಬಂದ್ಗೆ ಕರೆ ನೀಡಿದ್ದಾರೆ.
ರಾಜ್ಯ ಸರ್ಕಾರ ಜ.31 ರಂದು ತಾಲೂಕಿನ ಮುದ್ದೇನಹಳ್ಳಿಯಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಮುಂದಾಗಿದ್ದನ್ನು ವಿರೋಧಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಡಿಪಿಆರ್ ಆಗಿಲ್ಲ, ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ಪತ್ರ ಸಿಕ್ಕಿಲ್ಲ, ಟೆಂಡರ್ಗೆ ಅನುಮೋದನೆಯೇ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಬೇಕೆಂದು ಚಿಕ್ಕಬಳ್ಳಾಪುರ ಜಿಲ್ಲಾ ಬಂದ್ಗೆ ಕರೆ ನೀಡಿದ್ದು ಈ ನಡುವೆ ಜ.31 ರಂದು ನಡೆಯಬೇಕಾಗಿದ್ದು ಕಾರ್ಯಕ್ರಮ ಮುಂದೂಡಿದ್ದು ಮುಂದಿನ ಫೆಬ್ರವರಿ ತಿಂಗಳ 2 ನೇ ವಾರದಲ್ಲಿ ಕಾರ್ಯಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ತಿಳಿಸಿರುವ ಹಿನ್ನೆಲೆಯಲ್ಲಿ ಬಂದ್ ನಡೆಯುತ್ತದೆಯೋ ಇಲ್ಲವೋ ಎಂಬ ಬಗ್ಗೆ ಗೊಂದಲ ಮೂಡಿತ್ತು. ಇದಕ್ಕೆ ತೆರೆ ಎಳೆದಿರುವ ಹೋರಾಟಗಾರರು ಜನರ ಅಭೂತಪೂರ್ವ ಬೆಂಬಲದೊಂದಿಗೆ ನಡೆಯಲಿರುವ ಬಂದ್ ಯಶಸ್ವಿಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ, ನೀರಾವರಿ ವಿಷಯದಲ್ಲಿ ಹೋರಾಟಗಾರರು ರಾಜಕಾರಣ ಮಾಡುತ್ತಿಲ್ಲ. ಈ ಭಾಗಕ್ಕೆ ನೀರನ್ನು ಪಡೆಯುವುದೇ ಉದ್ದೇಶ ಹೊಂದಲಾಗಿದೆ. ಆದರೆ, ರಾಜಕಾರಣವನ್ನು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮಾಡುತ್ತಿರುವುದು ಎಂದರು.
ಪರಮಶಿವಯ್ಯನವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿ ಈಗಾಗಲೇ ಡಿಪಿಆರ್ ತಯಾರಿಸಿ ವರದಿ ಕೊಟ್ಟಿದೆ. ಆದರೆ, ಮೊಯ್ಲಿ ಅವರು ಇನ್ನೂ ಕೊಟ್ಟಿಲ್ಲ ಎಂದಿದ್ದಾರಲ್ಲದೇ ಶಂಕುಸ್ಥಾಪನೆ ನೆರವೇರಿಸುವ ವಿಷಯದಲ್ಲೂ ಗೊಂದಲ ಮೂಡಿಸಿರುವುದು ಖಂಡನೀಯ ಎಂದು ಟೀಕಿಸಿದರು.
ಈ ಹಿಂದೆ ಲೋಕಸಭಾ ಚುನಾವಣೆ ನಡೆಯುವ ಸಂದರ್ಭದಲ್ಲಿ ವೀರಪ್ಪ ಮೊಯ್ಲಿ ಪರಮಶಿವಯ್ಯನವರ ವರದಿ ಮೂಲಕ ನೀರಾವರಿ ಸೌಲಭ್ಯ ಕೊಡಿಸುವುದಾಗಿ ಭರವಸೆ ನೀಡಿ ಇದೀಗ ನಾನು ಪರಮಶಿವಯ್ಯನವರ ವರದಿ ಬಗ್ಗೆ ಪ್ರಸ್ತಾಪಿಯೇ ಇಲ್ಲ ಎನ್ನುತ್ತಿದ್ದಾರೆ.ಅಲ್ಲದೇ ಎತ್ತಿನಹೊಳೆ ಯೋಜನೆಯನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ನೀರಾವರಿ ಹೋರಾಟಗಾರ ಕೆ.ಸಿ. ರಾಜಾಕಾಂತ್ ಮಾತನಾಡಿ, ಸುಳ್ಳು ಭರವಸೆ ನೀಡುವುದರ ಬದಲಿಗೆ ಈ ಭಾಗಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಿದರೆ ಜನರು ಮೆಚ್ಚಿಕೊಳ್ಳುತ್ತಾರೆ, ಆದರೆ, ದಿನಕ್ಕೊಂದು ಹೇಳಿಕೆ ಕೊಡುತ್ತ ಬಂದು ಈಗ ಚುನಾವಣೆ ಸಂದರ್ಭದಲ್ಲಿ ಆ ಮೂಲಗಳಿಂದ ಈ ಮೂಲಗಳಿಂದ ನೀರನ್ನು ತರುತ್ತೇವೆ ಎಂದರೆ ಯಾರೂ ನಂಬುವುದಿಲ್ಲ ಎಂದು ವ್ಯಂಗ್ಯವಾಡಿದ ಅವರು, ಪರಮಶಿವಯ್ಯನವರ ವರದಿ ಜಾರಿಗೊಳಿಸಲು ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಮುಂದಾಗಬೇಕೆಂದು ಒತ್ತಾಯಿಸಿ ಜ.31 ರಂದು ಜಿಲ್ಲಾ ಬಂದ್ಗೆ ಕರೆ ನೀಡಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಎಚ್. ನರಸಿಂಹಯ್ಯ,ಅಗಲಗುರ್ಕಿ ಚಲಪತಿ, ಯಲುವಹಳ್ಳಿ ಸೊಣ್ಣೇಗೌಡ, ಸುಷ್ಮಾ ಶ್ರೀನಿವಾಸ್, ಪ್ರೇಮಲೀಲಾ ವೆಂಕಟೇಶ್, ಪೃಥ್ವಿ, ಮಂಚನಬಲೆ ಶ್ರೀನಿವಾಸ್ ಇದ್ದರು.