ಆಟೋಗಳಿಗೆ ವಿಶೇಷ ಸಂಖ್ಯೆ ಸ್ಟಿಕರ್ ವಿತರಣೆ
ಚಿಕ್ಕಬಳ್ಳಾಪುರ: ನಗರದ ಆಟೋ ಚಾಲಕರ ಮೇಲೆ ನಿಗಾಯಿಡಲು ಪೊಲೀಸ್ ಇಲಾಖೆ ಪ್ರತಿ ಆಟೋ ವಾಹನಕ್ಕೂ ವಿಶೇಷ ಸಂಖ್ಯೆಯನ್ನು ನೀಡಿದೆ.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಪ್ರಯುಕ್ತ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸಂಚಾರಿ ಪೊಲೀಸ್ ಠಾಣೆಯಿಂದ ಸಂಖ್ಯೆಯ ವಿಶೇಷ ಸ್ಟಿಕರ್‌ಗಳನ್ನು ವಿತರಿಸಲಾಯಿತು.
ಇನ್ನು ಮುಂದೆ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ವಾಹನದ ಸಂಖ್ಯೆಯನ್ನು ಗುರುತಿಸಿಕೊಳ್ಳಬೇಕಾಗಿಲ್ಲ. ಸಂಚಾರಿ ಠಾಣೆ ಪೊಲೀಸರು ನೀಡಿರುವ ಸರಳ ಸಂಖ್ಯೆಯನ್ನು ತಿಳಿದುಕೊಂಡು ಸಂಬಂಧಪಟ್ಟವರ ಗಮನಕ್ಕೆ ತಂದರೆ ಸಾಕು, ಪೊಲೀಸರು ಆ ಸಂಖ್ಯೆಯನ್ನಾಧಾರಿಸಿ ಸಂಬಂಧಪಟ್ಟ ಆಟೋ ಚಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.
ಆಟೋದಲ್ಲಿ ಪ್ರಯಾಣಿಸುವಾಗ ಚಾಲಕರು ದುಬಾರಿ ಹಣವನ್ನು ಕೇಳುವುದು, ಇದರಿಂದ ಆಗಾಗ ಚಾಲಕರು ಮತ್ತು ಪ್ರಯಾಣಿಕರ ನಡುವೆ ಗಲಾಟೆ ನಡೆಯುತ್ತಿರುತ್ತದೆ. ಮತ್ತೊಂದು ಸಂದರ್ಭದಲ್ಲಿ ಪ್ರಯಾಣಿಕರು ವಾಹನದಲ್ಲಿ ತಮ್ಮ ವಸ್ತುಗಳನ್ನು ಕಳೆದುಕೊಂಡರೆ, ಇಲ್ಲವೇ ಚಾಲಕರು ದೂರ ಕರೆದುಕೊಂಡು ಹೋಗಿ ದೌರ್ಜನ್ಯವೆಸಗಿದ ಸಂದರ್ಭದಲ್ಲಿ ಪೊಲೀಸರಿಗೆ ದೂರು ಕೊಡುವ ಪ್ರಯಾಣಿಕರಿಗೆ ಆ ವಾಹನದ ಸಂಖ್ಯೆಯೇ ತಿಳಿಯುವುದಿಲ್ಲ. ಕೆಎ 40- ಜೊತೆಗೆ ಎರಡ್ಮೂರು ಸಂಖ್ಯೆಯನ್ನು ಗುರುತಿಟ್ಟುಕೊಳ್ಳಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪ್ರತಿ ಆಟೋ ವಾಹನಕ್ಕೂ 1,2,3,4,5, ಹೀಗೆ ಅನುಕ್ರಮವಾಗಿ ಸರಳವಾದ ಸಂಖ್ಯೆಗಳನ್ನು ಅಧಿಕೃತವಾಗಿ ನೀಡಿದೆ. ಇದರಿಂದ ನಗರದಲ್ಲಿ ಎಷ್ಟು ವಾಹನಗಳು ಸಂಚರಿಸುತ್ತಿವೆ ಎನ್ನುವುದು ಸುಲಭವಾಗಿ ಲೆಕ್ಕಕ್ಕೆ ಸಿಗುವುದಲ್ಲದೇ ಈ ಸರಳ ಸಂಖ್ಯೆಯನ್ನು ತಿಳಿಸಿದರೆ ಸಾಕು ಸುಲಭವಾಗಿ ವಾಹನ ಮತ್ತು ಚಾಲಕರ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.