ಠಾಣೆ ಮೆಟ್ಟಿಲೇರಿದ ಮಾಟ - ಮಂತ್ರ ಪ್ರಕರಣ
ಚಿಕ್ಕಬಳ್ಳಾಪುರ: ಕಳೆದ ಏಳು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿ ದೆವ್ವವಾಗಿ ಕಾಡುತ್ತಿದ್ದಾನೆ ಎಂಬ ಭ್ರಮೆಯಲ್ಲಿ ಸ್ಮಶಾನದಲ್ಲಿನ ಮೃತನ ಸಮಾಧಿ ಮುಂದೆ ಮತ್ತು ಗ್ರಾಮದಲ್ಲಿ ಮಾಟ ಮಂತ್ರ ಕೈಗೊಂಡು ಗ್ರಾಮಸ್ಥರಲ್ಲಿ ಭಯದ ವಾತಾವರಣವನ್ನುಂಟು ಮಾಡುತ್ತಿರುವ ಪ್ರಕರಣವೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ತಾಲೂಕಿನ ಅಂಗಟ್ಟ ಗ್ರಾಮದಲ್ಲಿ ಮಾಟ ಮಂತ್ರ ನಡೆಯುತ್ತಿರುವುದು ಮೃತನ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮದ ಭೈರಪ್ಪ ಮತ್ತು ಮುನಿಯಪ್ಪರ ನಡುವೆ ಆಸ್ತಿ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರತಿದಿನ ನಡೆಯುತ್ತಿದ್ದ ಜಗಳದಿಂದ ಬೇಸತ್ತ ಮುನಿಯಪ್ಪನ ಮಗ ನಾರಾಯಣಸ್ವಾಮಿ ಕಳೆದ ಏಳು ವರ್ಷಗಳ ಹಿಂದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಇದಾದ ನಂತರ ರಾಜಿ ಪಂಚಾಯಿತಿ ನಡೆದು ಎರಡು ಕುಟುಂಬದವರು ಬೇರೆ ಬೇರೆಯಾಗಿದ್ದು ಕಳೆದ ಮೂರು ತಿಂಗಳಿಂದ ಮೃತ ನಾರಾಯಣಸ್ವಾಮಿ ಸಮಾಧಿಯ ಬಳಿ ಮಾಟ ಮಂತ್ರಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಸಮಾಧಿ ಸುತ್ತಲು ಕರಿಎಳ್ಳು, ವಿಭೂತಿ, ಅರಿಶಿಣ ಕುಂಕುಮ ಹಾಕಿ ಪೂಜೆ ಮಾಡಿದ್ದು ತಲೆಯ ಕಡೆ ಕಟ್ಟಿಗೆಗಳನ್ನು ಚುಚ್ಚಲಾಗಿದೆ. ಜೊತೆಗೆ ಕೋಳಿ ಮತ್ತು ಕುರಿಯನ್ನು ಬಲಿ ಕೊಡಲಾಗಿದೆ. ಕತಮ್ಮ ಪತಿಯ ಸಮಾಧಿಯ ಮುಂದೆ ಮಾಟ ಮಂತ್ರ ಮಾಡಲಾಗುತ್ತಿದೆ. ನಮ್ಮ ಮಾವನವರ ತಮ್ಮ ಭೈರಪ್ಪ, ಅವರ ಮಕ್ಕಳಾದ ಪ್ರವೀಣ್, ಪ್ರಕಾಶ್ ಮತ್ತಿತರರು ತೊಂದರೆಯನ್ನುಂಟು ಮಾಡುತ್ತಿದ್ದಾರೆ ಎಂದು ಮೃತನ ಪತ್ನಿ ಶಾಂತಾ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಸ್ಮಶಾನದಲ್ಲಿ ಮಾಟ ಮಂತ್ರ ಮಾಡಿರುವ ಕುರುಹುಗಳ ಪರಿಶೀಲನೆ ನಡೆಸಿದ್ದು ತನಿಖೆ ಕೈಗೊಂಡಿದ್ದಾರೆ.