ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದಲಿತ ಮುಖಂಡರಿಗೆ ನೀತಿ ಪಾಠ

Mainashree
Updated On : 28 Jan 2014, 11:12 am

ಕ.ಪ್ರ.ವಾರ್ತೆ  ಕೋಲಾರ ಜ. 28
ದಲಿತ ಚಳವಳಿಯ ಕೇಂದ್ರ ಸ್ಥಾನವಾಗಿರುವ ಕೋಲಾರ ಜಿಲ್ಲೆಯಲ್ಲಿ ಹತ್ತಾರು ದಲಿತ ಸಂಘಟನೆಗಳು ಹುಟ್ಟಿಕೊಂಡಿವೆ. ಆದರೆ, ಈ ಸಂಘಟನೆಗಳು ಸ್ವಾರ್ಥ ಬದಿಗೊತ್ತಿ ಸೇವಾ ಮನೋಭಾವನೆಯಿಂದ ಕೆಲಸ ಮಾಡದಿದ್ದರೆ ಸಮುದಾಯದ ಕಲ್ಯಾಣಕ್ಕೆ ಮಾರಕವಾಗುತ್ತದೆ ಎಂದು ಅನುಸೂಚಿತ ಮತ್ತು ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಇ. ಅಶ್ವತ್ಥನಾರಾಯಣ ದಲಿತ ಮುಖಂಡರಿಗೆ ಕಿವಿಮಾತು ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಅವರು ಜಿಲ್ಲೆಯ ವಿವಿಧ ದಲಿತ ಸಂಘಟನೆಗಳ ಮುಖಂಡರೊಂದಿಗೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಮಾಹಿತಿ, ಅಹವಾಲು ಪಡೆದ ನಂತರ ಮಾತನಾಡಿ, ನಾನು ದಲಿತ ಚಳವಳಿಯಿಂದ ಬಂದವನಾಗಿದ್ದೇನೆ, ಶೋಷಿತ ಸಮುದಾಯದ ಪರ ಕೆಲಸ ಮಾಡಲು ಹುಟ್ಟಿಕೊಂಡ ದಲಿತ ಸಂಘರ್ಷ ಸಮಿತಿ ಈಗ ಹತ್ತಾರು ಸಂಘಟನೆಗಳಾಗಿವೆ. ಬಡವರ ಬಗ್ಗೆ ಕಾಳಜಿಯಿಂದ, ಸಾಮಾಜಿಕ ಬದ್ಧತೆಯಿಂದ ಕೆಲಸ ನಿರ್ವಹಿಸಿದಾಗ ಮಾತ್ರ ಸಂಘಟನೆಗಳಿಗೆ ಒಳ್ಳೆ ಹೆಸರು ಬರುತ್ತದೆ ಎಂದು ಮುಖಂಡರಿಗೆ ನೀತಿ ಪಾಠ ಹೇಳಿದರು.
ಜಿಲ್ಲೆಯಲ್ಲಿ ಈಗ ದಲಿತರ ಮೇಲಿನ ದೌರ್ಜನ್ಯಗಳು ಕಡಿಮೆ ಆಗುತ್ತಿದೆ, ಅಂಬೇಡ್ಕರ್ ಅವರು ಜಾರಿಗೆ ತಂದ ಸಂವಿಧಾನದಿಂದ ಸಮಾಜದಲ್ಲಿ ಬದಲಾವಣೆ ಕಾಣುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಂಘಟನೆಗಳು ತಾಳ್ಮೆ, ಸಹನೆಯಿಂದ ವರ್ತಿಸಿ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಾಗಿದೆ ಎಂದರು.
ತಾಲೂಕಿನ ಶ್ಯಾನಭೋಗನ ಹಳ್ಳಿಯ ಶಂಕರಪ್ಪ ಪ್ರಕರಣವನ್ನು ಜಿಲ್ಲಾಧಿಕಾರಿಯೇ ಬಗೆಹರಿಸಬೇಕೆಂದಿಲ್ಲ, ಸಂವಿಧಾನ ಬಿಕ್ಕಟ್ಟು ಎದುರಾದಾಗ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಬೇಕಾಗುತ್ತದೆ, ಜಿಲ್ಲೆಯ ದಲಿತ ಸಂಘಟನೆಗಳ ಮುಖಂಡರು ತಮ್ಮಲ್ಲಿನ ಭಿನ್ನಾಭಿಪ್ರಾಯ ಮರೆತು ಶ್ಯಾನಭೋಗನಹಳ್ಳಿಗೆ ಭೇಟಿ ನೀಡಿ ಸತ್ಯಾಸತ್ಯತೆಗಳ ಬಗ್ಗೆ ಅಧ್ಯಯನ ಮಾಡಿ ಸಮಸ್ಯೆಗೆ ಪರಿಹಾರ ಹುಡುಕಲು ಯತ್ನಿಸಬಹುದಾಗಿತ್ತು. ಈಗಲೂ ಕಾಲ ಮಿಂಚಿಲ್ಲ, ದಲಿತ ಸಂಘಟನೆಗಳ ಮುಖಂಡರು ಗ್ರಾಮಕ್ಕೆ ಭೇಟಿ ನೀಡಿ ಶಂಕರಪ್ಪ ಹೇಳುತ್ತಿರುವುದು ಸರಿಯೇ ತಪ್ಪೇ ಎಂಬುದನ್ನು ವಿಚಾರಿಸಿ ಸೂಕ್ತ ಮಾಹಿತಿ ನೀಡಿದಲ್ಲಿ ಅಧಿಕಾರಿಗಳು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ, ಒಂದು ವೇಳೆ ಅಧಿಕಾರಿಗಳು ತಪ್ಪು ಮಾಡಿದ್ದರೆ ಆಯೋಗ ಕೈಕಟ್ಟಿ ಕೂರುವುದಿಲ್ಲವೆಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಕೆಲ ಹಾಸ್ಟೆಲ್‌ಗಳು ಬಂದ್ ಆಗಿರುವ ಬಗ್ಗೆ ಕೇಳಿ ಬೇಸರವಾಯಿತು. ಇದಕ್ಕೆ ನಿಜವಾದ ಕಾರಣಗಳು ಏನೆಂಬುದನ್ನು ದಲಿತ ಮುಖಂಡರು ಒಂದು ಕಡೆ ಸೇರಿ ಆತ್ಮಾವಲೋಕನೆ ಮಾಡಿಕೊಳ್ಳಬೇಕು, ಅನೇಕ ಹಾಸ್ಚೆಲ್‌ಗಳಿಗೆ ದಲಿತ ಸಂಘಟನೆಗಳ ಮುಖಂಡರೇ ಸರಬರಾಜು ಮಾಡುವ ಗುತ್ತಿಗೆದಾರರಾಗಿರುವುದು ಸಂತೋಷ. ಆದರೆ, ದಲಿತ ಹಿತ ಕಾಪಾಡಬೇಕಾದ ದಲಿತರೇ ಸಮಾಜಕ್ಕೆ ಶತ್ರುಗಳಾದರೆ ಹೇಗೆ ಎಂದು ಪ್ರಶ್ನಿಸಿರದಲ್ಲದೆ, ಸಂಘಟನೆಗಳಲ್ಲಿನ ವ್ಯತ್ಯಾಸಗಳಿಂದ ಸಮಾಜದ ಕಲ್ಯಾಣಕ್ಕೆ ಧಕ್ಕೆಯಾಗಬಾರದೆಂದು ಬುದ್ಧಿವಾದ ಹೇಳಿದರು.
ದಲಿತ ಸಂಘಟನೆಗಳ ಮುಖಂಡರು ಕನಿಷ್ಠ ತಿಂಗಳಿಗೆ ಒಮ್ಮೆ ಸಭೆ ಸೇರಿ ಜಿಲ್ಲೆಯ ಬಡ ದಲಿತರ ಪರಿಸ್ಥಿತಿ ಬಗ್ಗೆ ಚರ್ಚಿಸಬೇಕು, ವಾರಕ್ಕೆ ಒಮ್ಮೆ ಯಾವುದಾದರೊಂದು ಹಳ್ಳಿಗೆ ಹೋಗಿ ದಲಿತ ಕಷ್ಟ ವಿಚಾರಿಸಬೇಕು, ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳು ಆರ್ಹರಿಗೆ ಸಿಕ್ಕಿದೆಯೇ ಇಲ್ಲವೆಂಬುದನ್ನು ತಿಳಿದು ಒಂದು ವೇಳೆ ಯಾರಿಗಾದರೂ ಅನ್ಯಾಯವಾಗಿದ್ದರೆ ಅಧಿಕಾರಿಗಳ ಗಮನಕ್ಕೆ ತಂದು ಬಡವರಿಗೆ ನ್ಯಾಯ ಸಿಗುವಂತೆ ಮಾಡಿದಲ್ಲಿ ಸಂಘಟನೆಗಳ ಬಗ್ಗೆ ಜನತೆಗೆ ವಿಶ್ವಾಸ ಹೆಚ್ಚಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಎಲ್ಲಾ ವರ್ಗದ ಜನತೆ ಸಾಮರಸ್ಯದಿಂದ ಬದುಕುವಂತಾಗಲು ದಲಿತ ಸಂಘಟನೆಗಳ ಪಾತ್ರ ಮುಖ್ಯ, ಒಕ್ಕೂಟ ಮಾಡಿಕೊಂಡು ಸಮುದಾಯದ ಹಿತ ಕಾಪಾಡುವಂತೆ ಹಾಗೂ ಅಂಬೇಡ್ಕರ್ ರೂಪಿಸಿರುವ ಸಂವಿಧಾನದ ಬಗ್ಗೆ ಅರಿವು ಮೂಡಿಸುವಂತೆ ತಿಳಿಸಿದರು. ಸಭೆಯಲ್ಲಿ ಆಯೋಗದ ಸದಸ್ಯ ಸತ್ಯೇಂದ್ರ ಕುಮಾರ್, ಕಾರ್ಯದರ್ಶಿ ಎಂ.ಎಸ್. ಪದ್ಮ, ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಪಂ ಸಿಇಒ ವಿನೋತ್ ಪ್ರಿಯ, ಕೋಲಾರ ಎಸ್ಪಿ ಡಾ. ರಾಮ್‌ನಿವಾಸ್ ಸಪೆಟ್, ಕೆಜಿಎಫ್ ಎಸ್ಪಿ ಡಾ. ರೋಹಿಣಿ ಕಚೋಟ್ ಸಪೆಟ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement