ಮಂಜೂರಾದ ಸಾಲ ನೀಡದೆ ವಂಚನೆ
ಕೋಲಾರ: ರೆಡಿಮೇಡ್ ಗಾರ್ಮೆಂಟ್ಸ್ ಉದ್ದೇಶಕ್ಕಾಗಿ ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಾಲ ಮಂಜೂರಾತಿ ಆಗಿ 7 ವರ್ಷ ಕಳೆದರೂ ವಿಜಯ ಬ್ಯಾಂಕಿನ ಅಧಿಕಾರಿಗಳು ಸಾಲ ನೀಡದೆ ವಂಚಿಸಿದ್ದಾರೆಂದು ಅಂಬೇಡ್ಕರ್ ನಗರದ ನಿವಾಸಿ ಎಂ. ಮುನಿಯಪ್ಪ ದೂರಿದ್ದಾರೆ. ಆಯೋಗದ ಅಧ್ಯಕ್ಷ ಅಶ್ವತ್ಥನಾರಾಯಣ ಅವರಿಗೆ ಲಿಖಿತ ದೂರು ನೀಡಿ, ಪರಿಶಿಷ್ಟ ಜಾತಿಗೆ ಸೇರಿದ ನಾನು ಸ್ವಯಂ ಉದ್ಯೋಗಕ್ಕಾಗಿ ಸಾಲ ಕೋರಿ ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಹಾಕಿಕೊಂಡಿದ್ದೆ. ವಿಜಯ ಬ್ಯಾಂಕಿನವರು 2066ರ ನವೆಂಬರ್ 16 ರಂದು ನನಗೆ 1.80 ಲಕ್ಷ ರು.ಸಾಲ ನೀಡುವುದಾಗಿ ಕ್ಲೈಮ್ ಅರ್ಜಿಯನ್ನು ನೀಡಿದ್ದರು. ಅದರ ಮೇರೆಗೆ ಅಂಬೇಡ್ಕರ್ ನಿಗಮದ ಮೂಲಕ 2006 ಡಿಸೆಂಬರ್ 5 ರಂದು ಚೆಕ್ ನಂ.1792086ರ ಮೂಲಕ 36 ಸಾವಿರ ರು.ಗಳನ್ನು ಸಹಾಯಧನವಾಗಿ ವಿಜಯ ಬ್ಯಾಂಕ್, ಕೋಲಾರ ಶಾಖೆಗೆ ಕಳುಹಿಸಿಕೊಟ್ಟಿದ್ದರೂ ಬ್ಯಾಂಕಿನವರು ಸಾಲ ನೀಡದೆ ವಂಚಿಸಿದ್ದಾರೆಂದು ಆರೋಪಿಸಿದರು. ಮಂಜೂರಾದ ಸಾಲ ನೀಡದಿರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುನಿಯಪ್ಪ ಆಯೋಗದ ಅಧ್ಯಕ್ಷರಿಗೆ ಲಿಖಿತ ದೂರು ನೀಡಿದರು.