ಮಾಹಿತಿ ಕೊರತೆ: ಜನರೇ ಇಲ್ಲದೆ ನಡೆದ ಅಹವಾಲು ಸ್ವೀಕಾರ ಸಭೆ
ಬಾಗೇಪಲ್ಲಿ: ಸಾರ್ವಜನಿಕರ ಕುಂದುಕೊರತೆ ಸಭೆಗೆ ಅಧಿಕಾರಿಗಳು ಹಾಜರ್, ಸಾರ್ವಜನಿಕರು ಚಕ್ಕರ್. ಇದರ ಪರಿಣಾಮ ಲೋಕಾಯುಕ್ತ ಅಹವಾಲು ಸ್ವೀಕಾರ ಸಭೆ ಪ್ರಾರಂಭವಾದ ಕೆಲ ಸಮಯದಲ್ಲಿಯೇ ಮುಕ್ತಾಯಗೊಂಡಿತು.
ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಲೋಕಾಯುಕ್ತ ಡಿ.ವೈ.ಎಸ್.ಪಿ ಬೂಪಯ್ಯರವರ ನೇತೃತ್ವದಲ್ಲಿ ಸಮಯಕ್ಕೆ ಸರಿಯಾಗಿಯೇ ಸಾರ್ವಜನಿಕರ ಕುಂದುಕೊರತೆ ಸಭೆ ಮಂಗಳವಾರ ಪ್ರಾರಂಭವಾಯಿತು. ಬಹುತೇಕ ಅಧಿಕಾರಿಗಳು ತಮ್ಮ ತಮ್ಮ ಆಸನಗಳಲ್ಲಿ ಆಸೀನರಾಗಿದ್ದರು. ಆದರೆ ಯಾರಿಗಾಗಿ ಈ ಸಭೆಯನ್ನು ಆಯೋಜಿಸಲಾಗಿತ್ತೋ ಅವರೇ ಇರಲಿಲ್ಲ.
ಸಾರ್ವಜನಿಕರಿಗೆ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ವಿವಿಧ ರೀತಿಯ ಕೆಲಸಗಳನ್ನು ಮಾಡಿಕೊಡಲು ಕಚೇರಿಯ ಸುತ್ತಾ ತಿರುಗಿಸಿಕೊಳ್ಳುವುದು, ಲಂಚ ನೀಡುವಂತೆ ಪೀಡಿಸುವುದು ಸೇರಿದಂತೆ ನ್ಯಾಯಯುತವಾಗಿ ಕೆಲಸ ಮಾಡಿಕೊಡಲು ನಿರ್ಲಕ್ಷ್ಯ ವಹಿಸುವವರ ವಿರುದ್ಧ ದೂರು ಸ್ವೀಕರಿಸಲು ಲೋಕಾಯುಕ್ತರು ಅಹವಾಲು ಸಭೆಗಳನ್ನು ಕೈಗೊಳ್ಳುತ್ತಿದ್ದು ಮಾಹಿತಿ ಕೊರತೆಯಿಂದ ಮಂಗಳವಾರ ನಡೆದ ಕುಂದುಕೊರತೆ ಸಭೆಗೆ ಜನ ಬಂದಿಲ್ಲ ಎಂಬ ಆರೋಪ ಕೇಳಿ ಬಂತು.
ಈ ಬಗ್ಗೆ ಕೇಳಿದ ಪತ್ರಕರ್ತರ ಪ್ರಶ್ನೆಗೆ ಸಿಡಿಮಿಡಿಗೊಂಡ ಲೋಕಾಯುಕ್ತ ಅಧಿಕಾರಿ, ಸಾರ್ವಜನಿಕರು ಜಿಲ್ಲಾ ಕೇಂದ್ರಗಳಿಗೆ ಬಂದು ದೂರು ನೀಡಲು ತೊಂದರೆಯಾಗುತ್ತದೆ ಎಂಬ ಭಾವನೆಯಲ್ಲಿ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿಯೇ ಸಭೆಯನ್ನು ನಡೆಸುತ್ತಿದ್ದು ಈ ಸಂಬಂಧ ಸಭೆ ಇರುವ ದಿನಕ್ಕೆ 2-3 ದಿನ ಮುಂಚೆಯೇ ಎಲ್ಲಾ ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆ ನೀಡಲಾಗುತ್ತಿದೆ. ಆದರೂ ಸಾರ್ವಜನಿಕರು ಸಭೆಗೆ ಬರಲ್ಲಿಲ್ಲವೆಂದರೆ ನಾವು ಮಾಡುವುದಾರೂ ಏನು ಎಂದು ಪ್ರಶ್ನಿಸಿದರು.
ವಿವಿಧ ಇಲಾಖೆಗಳ ಅಧಿಕಾರಿಗಳ ಮತ್ತು ಸಿಬ್ಬಂದಿ ವರ್ಗದವರಿಂದ ತೊಂದರೆಗೆ ಒಳಗಾಗಿರುವಂತಹ ಸಾರ್ವಜನಿಕರು ಇಂತಹ ಸಭೆಗೆ ಬಂದು ದೂರು ಸಲ್ಲಿಸಿದರೆ ನಾವು ಸಂಬಂಧಪಟ್ಟ ಅಧಿಕಾರಿಯೊಂದಿಗೆ ಸಭೆಯಲ್ಲಿಯೇ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದರು.
ಕೊನೆಗೆ ಸಾರ್ವಜನಿಕರಿಂದ ದೂರುಗಳು ಬಾರದ ಕಾರಣ ಈ ಹಿಂದಿನ ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟ ದೂರುಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು. ತಾಲೂಕಿನ ಪಾತಪಾಳ್ಯ, ಯಲ್ಲಂಪಲ್ಲಿ ಮತ್ತು ಗೂಳೂರು ಮುಂತಾದ ಕಡೆಗಳಲ್ಲಿ ರಸ್ತೆ ಒತ್ತುವರಿ, ಅಂಗನವಾಡಿ ಕಟ್ಟಡ ಕಳಪೆ ಕಾಮಗಾರಿ, ಕೆರೆ ಒತ್ತುವರಿ ಮುಂತಾದ ಸಾರ್ವಜನಿಕರ ದೂರುಗಳ ಬಗ್ಗೆ ಚರ್ಚೆ ನಡೆಯಿತು.