ಸುದ್ದಿ ಸಂಕ್ಷೇಪ
ಟೊಮೇಟೊ ಬೆಲೆ: ರೈತರ ಕಂಗಾಲು
ಶ್ರೀನಿವಾಸಪುರ: ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಪಾತಳಕ್ಕೆ ಕುಸಿದು ವಿದ್ಯುತ್ತಿನ ಅಭಾವದಿಂದ ರೈತರು ಬೆಳೆದ ಟೊಮೇಟೊ ಬೆಲೆ ಕುಸಿತದಿಂದ ರೈತರು ಕಂಗಲಾಗಿದ್ದಾರೆ. ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಸತತವಾಗಿ ಬರ ಕಾಡುತ್ತಿದ್ದು, ಸರ್ಕಾರ ಬರ ಪೀಡಿತ ತಾಲೂಕೆಂದು ಘೋಷಣೆ ಮಾಡಿದ್ದರೂ ಬರ ಕಾಮಗಾರಿಗಳು ಜಾರಿಯಾಗದೆ ಕೃಷಿ ಕಾರ್ಮಿಕರು ಪರದಾಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಲಕ್ಷಾಂತರ ರು. ಬಂಡವಾಳ ಹಾಕಿ ಬೆಳೆದ ಟೊಮೇಟೊಗೆ ಬೆಲೆ ಸಿಗದೆ ರೈತರು ಅತ್ಮಹತ್ಯೆ ಹಾದಿ ಹಿಡಿಯುವ ಸ್ಥಿತಿ ಎದುರಾಗಿದೆ. ಆದ್ದರಿಂದ ರೈತರಿಗೆ ವಿಶೇಷ ರೀತಿಯಲ್ಲಿ ಬೆಂಬಲ ಬೆಲೆ ನೀಡಬೇಕೆಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.ಜನ ಜಾಗೃತಿ ಶಿಬಿರ
ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲೂಕಿನ ವರ್ಲಕೊಂಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಜ.29 ರ ಮಧ್ಯಾಹ್ನ 2 ಗಂಟೆಗೆ ಅಂತರ್ಜಲ ಜನ ಜಾಗೃತಿ ಶಿಬಿರ ಆಯೋಜಿಸಲಾಗಿದೆ. ಹಿರಿಯ ಭೂವಿಜ್ಞಾನಿಗಳ ಕಚೇರಿ, ಅಂತರ್ಜಲ ವಿಭಾಗ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಜಿಪಂ ಸಹಯೋಗದೊಂದಿಗೆ ಕೈಗೊಂಡಿರುವ 2013-14ನೇ ಸಾಲಿನಲ್ಲಿ ಅಂತರ್ಜಲ ಜನ ಜಾಗೃತಿ ಶಿಬಿರದಲ್ಲಿ ಅಂತರ್ಜಲ ಸದ್ಭಳಕೆ, ಸಂರಕ್ಷಣೆ, ಅತಿಬಳಕೆ, ದುಷ್ಪರಿಣಾಮಗಳು, ಮಳೆ ನೀರಿನ ಬಳಕೆ ಮಹತ್ವ ಹಾಗೂ ಅಂತರ್ಜಲ ಅಧಿನಿಯಮದ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಅಹವಾಲು ಸ್ವೀಕಾರ
ಚಿಕ್ಕಬಳ್ಳಾಪುರ: ಇಲ್ಲಿನ ತಾಪಂ ಕಚೇರಿಯಲ್ಲಿ ಜ.29 ರ ಮಧ್ಯಾಹ್ನ 3 ಗಂಟೆಗೆ ಲೋಕಾಯುಕ್ತ ಪೊಲೀಸರು ಚಿಕ್ಕಬಳ್ಳಾಪುರ ತಾಲೂಕು ವ್ಯಾಪ್ತಿಗೆ ಸೇರಿದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಕೊಡಲು ವಿಳಂಬ, ನಿರ್ಲಕ್ಷ್ಯ ಮಾಡುತ್ತಿದ್ದಲ್ಲಿ ಮತ್ತು ಹಣಕ್ಕೆ ಒತ್ತಾಯಿಸುತ್ತಿದ್ದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿ ವಿರುದ್ಧ ಸಾರ್ವಜನಿಕರು ದೂರು ನೀಡಬಹುದು ಎಂದು ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್ ಎಂ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಂದಿ ಕಾಟ ತಪ್ಪಿಸಲು ಸೂಚನೆ
ಶ್ರೀನಿವಾಸಪುರ: ಪಟ್ಟಣದಲ್ಲಿ ಹಂದಿಗಳ ನಿರ್ವಹಣೆಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರರು ಪುರಸಭೆ ಮುಖ್ಯಾಧಿಕಾರಿಗೆ ತಾಕೀತು ಮಾಡಿದರು. ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕುಂದು ಕೊರತೆ ಸಭೆಯಲ್ಲಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಹಂದಿಗಳ ಹಾವಳಿಯಿಂದ ಜನ ತತ್ತರಿಸಿದ್ದು,ಸಾಂಕ್ರಾಮಿಕ ರೋಗಳು ಹರಡುವುದಕ್ಕಿಂತ ಮೊದಲು ಹಂದಿ ಸಾಕಾಣಿಕೆದಾರರಿಗೆ ನೋಟಿಸ್ ನೀಡಿ ಹಂದಿ ನಿಗ್ರಹಕ್ಕೆ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಕೆ ನೀಡಿದ್ದಾರೆ.
'ಸವಲತ್ತು ಸದ್ಬಳಕೆಯಾಗಲಿ'
ಬಂಗಾರಪೇಟೆ: ಸರ್ಕಾರದ ಸವಲತ್ತುಗಳ ಸದ್ಬಳಕೆಯಲ್ಲಿ ಜಿಲ್ಲೆಯಲ್ಲೇ ಪಟ್ಟಣ ಪುರಸಭೆ ಪ್ರಥಮ ಸ್ಥಾನದಲ್ಲಿದ್ದು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು. ಇಲ್ಲಿನ ಪುರಸಭೆಯಲ್ಲಿ ಎಸ್ಎಪ್ಸಿ ಯೋಜನೆಯಲ್ಲಿ 36ಮಂದಿ ಫಲಾನುಭವಿಗಳಿಗೆ ಉಚಿತವಾಗಿ ಅನಿಲ ಸಂಪರ್ಕ ವಿತರಿಸಿ ಮಾತನಾಡಿ, ಸರ್ಕಾರ ಆರ್ಥಿಕವಾಗಿ ಹಿಂದುಳಿದಿರುವ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಲವು ಜನಪರ ಯೋಜನೆಗಳನ್ನು ರೂಪಿಸುತ್ತಿದೆ ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ತಾರತಮ್ಯವಿಲ್ಲದೆ ಆಯ್ಕೆ ಮಾಡಿ ಅವರೂ ಸಮಾಜದಲ್ಲಿ ಸ್ವಾವಲಂಭಿಗಳಾಗಿ ಬದುಕುವಂತೆ ಸಹಕರಿಸಬೇಕು ಎಂದು ಹೇಳಿದರು.
ಭದ್ರತೆ ಇಲ್ಲದ ಎಟಿಎಂಗಳು
ಬಂಗಾರಪೇಟೆ: ಇತ್ತೀಚಿಗೆ ಬೆಂಗಳೂರಿನ ಎಟಿಎಂನಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣದ ನಂತರ ರಾಜ್ಯ ಸರ್ಕಾರ ಎಲ್ಲಾ ಎಟಿಎಂಗಳಿಗೆ ಭದ್ರತೆಯನ್ನು ಕಡ್ಡಾಯವಾಗಿ ಒದಗಿಸಬೇಕೆಂದು ಸೂಚನೆ ನೀಡಿದ್ದರೂ ಪಟ್ಟಣದಲ್ಲಿರುವ 8ಎಟಿಎಂಗಳಿಗೆ ಭದ್ರತೆಯನ್ನು ಬ್ಯಾಂಕುಗಳು ಈವರೆಗೂ ಕಲ್ಪಿಸಿಲ್ಲ. ಎಲ್ಲಾ ಎಟಿಎಂಗಳಿಗೆ ಆಯಾ ಬ್ಯಾಂಕುಗಳೇ ಭದ್ರತೆ ಕಲ್ಪಿಸದಿದ್ದರೆ ಬ್ಯಾಂಕುಗಳೇ ನೇರ ಹೊಣೆ ಎಂದು ಗೃಹ ಸಚಿವರು ಎಚ್ಚರಿಕೆ ನೀಡಿ ಎರಡು ತಿಂಗಳಾದರೂ ಸಿಸಿ ಕ್ಯಾಮರ ಸಹ ಇಲ್ಲದಿರುವುದನ್ನು ನೋಡಿದರೆ ಬ್ಯಾಂಕ್ಗಳು ಸರ್ಕಾರದ ಆದೇಶವನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತಿದೆ ಎಂಬುದು ತಿಳಿಯುತ್ತದೆ.