ಅಪಘಾತದಲ್ಲಿ ವಿದ್ಯಾರ್ಥಿ ದುರ್ಮರಣ
ಚಿಂತಾಮಣಿ: ವಿದ್ಯಾರ್ಥಿಯೊಬ್ಬ ಬೈಕಿನಲ್ಲಿ ಹೋಗುತ್ತಿರುವಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೈಲುಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಕೆಂಚಾರ್ಲಹಳ್ಳಿ ಠಾಣೆ ವ್ಯಾಪ್ತಿಯ ಗೊಲ್ಲಪಲ್ಲಿಗಡ್ಡ ಗ್ರಾಮದ ಬಳಿ ನಡೆದಿದೆ. ಶಿಡ್ಲಘಟ್ಟ ಸಿದ್ದಾರ್ಥನಗರ ನಿವಾಸಿ ನಾರಾಯಣಸ್ವಾಮಿ ಎಂಬವರ ಮಗ ಎನ್. ನಟರಾಜ್(18) ಮೃತ ವಿದ್ಯಾರ್ಥಿಯಾಗಿದ್ದು, ಕೆಂಚಾರ್ಲಹಳ್ಳಿ ಸಬ್ಇನ್ಸ್ಪೆಕ್ಟರ್ ರಾಜಣ್ಣ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹರಾಜು ಪ್ರಕ್ರಿಯೆ ನಿಲ್ಲಿಸಿ ಪ್ರತಿಭಟನೆ
ಶಿಡ್ಲಘಟ್ಟ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪಟ್ಟಣದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಬುಧವಾರ ರೈತರು ಸುಮಾರು ಒಂದು ಗಂಟೆ ಕಾಲ ಹರಾಜು ಪ್ರಕ್ರಿಯೆ ನಿಲ್ಲಿಸಿ ಸಾಂಕೇತಿಕವಾಗಿ ಪ್ರತಿಭಟಿಸಿದರು.
ಚೀನಾ ರೇಷ್ಮೆ ಆಮದು ಸುಂಕದ ಕರಾರು ಒಪ್ಪಂದ ಮುಂದುವರೆಸಬೇಕು. ವರ್ಗಾವಣೆಗೊಂಡಿರುವ ರೇಷ್ಮೆ ಇಲಾಖೆ ನೌಕರರನ್ನು ಕೂಡಲೇ ವಾಪಸ್ಸು ಕರೆಸಿಕೊಳ್ಳಬೇಕು. ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯಲ್ಲಿ ವಿಲೀನಗೊಳಿಸಬಾರದೆಂದು ಒತ್ತಾಯಿಸಿ ರೈತರು ಜಂಟಿ ನಿದರ್ದೇಶಕ ಪ್ರಭಾಕರ್ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಜಂಟಿ ನಿರ್ದೇಶಕ ಪ್ರಭಾಕರ್ ಮಾತನಾಡಿ, ಈಗಾಗಲೇ ಇಲಾಖೆ ಕೇಂದ್ರ ಸರ್ಕಾರಕ್ಕೆ ಚೀನಾ ರೇಷ್ಮೆ ಆಮದು ಸುಂಕದ ಕರಾರು ಒಪ್ಪಂದ ಮುಂದುವರೆಸಬೇಕು ಎಂಬ ಪ್ರಸ್ತಾವನೆ ಸಲ್ಲಿಸಿದೆ. ಉಳಿದ ಬೇಡಿಕೆಗಳನ್ನೂ ಸರ್ಕಾರದ ಮುಂದಿಟ್ಟು ಶೀಘ್ರವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಭಕ್ತರಹಳ್ಳಿ ಬೈರೇಗೌಡ, ಯಲುವಳ್ಳಿ ಸೊಣ್ಣೇಗೌಡ, ಮಳ್ಳೂರು ಹರೀಶ್, ರಾಮಕೃಷ್ಣಪ್ಪ, ರಾಮಚಂದ್ರ, ಚಂದ್ರಶೇಖರ್, ಎಂ. ದೇವರಾಜ್, ಕೃಷ್ಣಪ್ಪ, ನಂಜಪ್ಪ ಇದ್ದರು.