ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ
ಚಿಕ್ಕಬಳ್ಳಾಪುರ: ವೇತನ ತಾರತಮ್ಯ ಹಾಗೂ ಕಾಯಂಗೆ ಒತ್ತಾಯಿಸಿ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಗುತ್ತಿಗೆ ನೌಕರರ ಸಂಘ ಜ.30 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದೆ ಎಂದು ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಗುತ್ತಿಗೆ ನೌಕರರ ಸಂಘದ ಜಿಲ್ಲಾದ್ಯಕ್ಷ ಎನ್. ಗಂಗಾಧರಯ್ಯ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸೊಸೈಟಿ ನೌಕರರ ಸಂಘಟನೆ ಎನ್ಎಸಿಪಿ 4 ಕ್ಕೆ ಸಂಬಂಧಿಸಿ ಇತ್ತೀಚೆಗೆ ಹೊರಡಿಸಿರುವ ಆದೇಶದಂತೆ ಅವೈಜ್ಞಾನಿಕ ಪರಿಷ್ಕೃತ ಹೊಸ ವೇತನ ಮತ್ತು ಬಡ್ತಿ ವೇತನ ನಿಗದಿ ತಾರತಮ್ಯ ವಿರೋಧಿಸಿ ಮುಷ್ಕರ ಕೈಗೊಳ್ಳಲಾಗುತ್ತಿದೆ ಎಂದರು.
ಬೆಂಗಳೂರಿನ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಕಚೇರಿಯಿಂದ ಬೆಳಿಗ್ಗೆ 9.30 ಗಂಟೆಗೆ ಜಾಥಾ ನಡೆಸುತ್ತಿದ್ದು ರಾಜ್ಯಾದ್ಯಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಬರುವ ಕೆಸಾಪ್ ನೌಕರರು ಜಾಥಾದಲ್ಲಿ ಪಾಲ್ಗೊಳ್ಳಲಿದ್ದು, ಕೆಲಸ ಸ್ಥಗಿತಗೊಳಿಸಲಿದ್ದಾರೆ ಎಂದರು.
ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸೌಮ್ಯ ಮಾತನಾಡಿ, ಗುತ್ತಿಗೆಯಾಧಾರಿತ ನೌಕರರನ್ನು ಕಾಯಂ ಮಾಡಬೇಕು. ಸರ್ಕಾರಿ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮೂಲವೇತನಕ್ಕೆ ಸಮಾನ ವೇತನ ನಿಗದಿಗೊಳಿಸಬೇಕು ಎನ್ನವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಔಷಧ ವಿತರಕ ಮಧುಕಿರಣ್, ಆಪ್ತ ಸಮಾಲೋಚಕ ಮಹೇಶ್ ಪಾಟೀಲ್, ಪ್ರಸನ್ನಕುಮಾರ್, ಪ್ರಯೋಗಶಾಲ ತಂತ್ರಜ್ಞ ವಿದ್ಯಾಸಾಗರ್, ರಘು, ಲಕ್ಷ್ಮಿ, ಶುಶ್ರೂಷಕಿ ಹನ್ನಾಸಹನಾ, ರಕ್ತನಿಧಿಯ ರವಿಲಂಬಾಣಿ, ಸಂಘದ ನಿರ್ದೇಶಕ ಚಂದ್ರಶೇಖರ್, ಮಂಜುನಾಥ್ ಯತೀಶ್ ಇದ್ದರು.