ಎಸ್ಎಫ್ಐನಿಂದ ವಿಚಾರ ಸಂಕಿರಣ
ಕೋಲಾರ: ಎಸ್ಎಫ್ಐ 13ನೇ ರಾಜ್ಯ ಸಮ್ಮೇಳನ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹುತಾತ್ಮ ದಿನಾಚರಣೆ ಅಂಗವಾಗಿ ಶಾಂತಿ ಸೌಹಾರ್ದತೆಯಲ್ಲಿ ವಿದ್ಯಾರ್ಥಿಗಳ ಪಾತ್ರ ವಿಚಾರ ಸಂಕಿರಣವನ್ನು ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಜ.30 ರಂದು ಬೆಳಿಗ್ಗೆ 11ಗಂಟೆಗೆ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್ಎಫ್ಐ ರಾಜಾಧ್ಯಕ್ಷ ಎನ್. ಅನಂತ್ ನಾಯಕ ನೆರವೇರಿಸಲಿದ್ದಾರೆ.
ಉಮಾದೇವಿ ವಿಧಿವಶ
ಕೋಲಾರ: ಜಿಲ್ಲೆಯ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿ, ನಗರದ ಶಂಕರ ವಿದ್ಯಾಲಯದ ಸಂಸ್ಥಾಪಕಿ ಉಮಾದೇವಿ ದೀರ್ಘಕಾಲದ ಅನಾರೋಗ್ಯದ ನಂತರ ಇಂದು ಬೆಂಗಳೂರಿನಲ್ಲಿ ವಿಧಿವಶರಾದರು.
ನಗರದಲ್ಲಿ ಚಿನ್ಮಯ ವಿದ್ಯಾಲಯದ ಪ್ರಾಂಶುಪಾಲರಾಗಿ ಹಲವಾರು ವರ್ಷಗಳ ಕಾಲ ಶೈಕ್ಷಣಿಕ ಸಾಧನೆ ಮಾಡಿದ ಅವರು, ನಂತರ ಶಂಕರ ವಿದ್ಯಾಲಯ ಸ್ಥಾಪಿಸಿದ್ದರು. ಶಿಕ್ಷಕರಿಗೆ ಸಂಬಳ ನೀಡಲು ಹಣವಿಲ್ಲದಿದ್ದಾಗ ತಮ್ಮ ಬಳೆ, ಒಡವೆ ಅಡವಿಟ್ಟು ಸಂಬಳ ನೀಡಿ ಸಂಸ್ಥೆಯನ್ನು ಬೆಳೆಸಿದ್ದ ಅವರ ಹೋರಾಟದ ಜೀವನ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರಕ್ಕೆ ಆದರ್ಶವಾಗಿದೆ. ಅವರ ನಿಧನಕ್ಕೆ ಜಿಲ್ಲಾ ಖಾಸಗಿ ಶಾಲೆಗಳ ಸಂಘದ ಸದಾನಂದ್, ಮುನಿಯಪ್ಪ, ನಗರಸಭೆ ಸದಸ್ಯ ಮುಬಾರಕ್, ಹಿರಿಯ ಛಾಯಾಗ್ರಾಹಕ ಹಾಬಿ ರಮೇಶ್, ಉಪನ್ಯಾಸಕ ಜೆ.ಎನ್. ರಾಮಕೃಷ್ಣ ಮತ್ತಿತರರು ಕಂಬನಿ ಮಿಡಿದಿದ್ದಾರೆ.
ಶಿಕ್ಷಕ ಗುಡಿಯಪ್ಪ ನಿಧನಕ್ಕೆ ಕಂಬನಿ
ಕೋಲಾರ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ, ಮುಖ್ಯ ಶಿಕ್ಷಕ ಗುಡಿಯಪ್ಪ(59) ಅವರ ನಿಧನಕ್ಕೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್ ಕಂಬನಿ ಮಿಡಿದಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಬುಧವಾರ ಬೆಳಗ್ಗೆ ಮೃತಪಟ್ಟಿದ್ದು, ಅವರ ಸ್ವ ಗ್ರಾಮ ಮಾರ್ಜೇನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.
ಎಪಿಎಂಸಿಯಲ್ಲಿ ಕಾನೂನು ಶಿಬಿರ
ಕೋಲಾರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೋಲಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾರ್ಮಿಕ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬಾಲಕಾರ್ಮಿಕ ನಿರ್ಮೂಲನಾ ಪ್ರಚಾರ ಸಂಘ, ಜಾಗೃತಿ ಸೇವಾ ಸಂಸ್ಥೆ ಕೋಲಾರ ಆಶ್ರಯದಲ್ಲಿ ಕೂಲಿ ಕಾರ್ಮಿಕರಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಬೈಪಾಸ್ನಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಜ.30ರಂದು ಗುರುವಾರ ಮಧ್ಯಾಹ್ನ 1.30ಕ್ಕೆ ಹಮ್ಮಿಕೊಳ್ಳಲಾಗಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೇಣಿಕಾ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಎಪಿಎಂಸಿ ಅಧ್ಯಕ್ಷೆ ಕೆ.ಆರ್. ರಾಜೇಶ್ವರಿ, ಅಧ್ಯಕ್ಷತೆ ವಹಿಸುವರು. ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಕಿಣಿಕೇರಿ, ಪ್ರಧಾನ ಸಿವಿಲ್ನ್ಯಾಯಾಧೀಶ ಕೆಂಗಬಾಲಯ್ಯ, ವಿ. ರಾಮು, ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಜಿ. ಶಿವಣ್ಣ, ವಕೀಲರ ಸಂಘದ ಅಧ್ಯಕ್ಷ ಎ.ವಿ. ಆನಂದ್, ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಜಿ. ನಾರಾಯಣರಾಜು ಉಪಸ್ಥಿತರಿರುವರು.
ರಾಸುಗಳ ಸಾವು
ಕೋಲಾರ: ತಾಲೂಕಿನ ತುರಾಂಡಹಳ್ಳಿ ಗ್ರಾಮದಲ್ಲಿ 3 ಜಾನುವಾರುಗಳ ಕಾಲುಬಾಯಿ ಜ್ವರದಿಂದ ಸತ್ತಿವೆ. ಸುಗಟೂರು ಹೋಬಳಿಯ ತುರಾಂಡಹಳ್ಳಿ ಗ್ರಾಮದ ವೆಂಕಟೇಶ್ ಎಂಬವರಿಗೆ ಸೇರಿದ ಹಸು ಸೇರಿದಂತೆ ಕಳೆದ 15 ದಿನಗಳಿಂದ 3 ಹಸುಗಳು ಸಾವಿಗೀಡಾಗಿದ್ದು, ಸಂಬಂಧಪಟ್ಟ ರೈತರಿಗೆ ಪರಿಹಾರ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಟಿ.ಎಂ. ವೆಂಕಟೇಶ್ ಜಿಲ್ಲಾ ಆಡಳಿತವನ್ನು ಒತ್ತಾಯಿಸಿದ್ದಾರೆ.
ಪರಿಸರ ನಾಶ; ಮೌನವಹಿಸಿದ ಆಡಳಿತ
ಚಿಂತಾಮಣಿ: ಸಾರ್ವಜನಿಕ ಸ್ವತ್ತಾದ ಬೆಟ್ಟಗುಡ್ಡಗಳಿಂದ ಜೆಸಿಬಿ ಮೂಲಕ ಅಕ್ರಮವಾಗಿ ಮಣ್ಣನ್ನು ತೆಗೆದು ಪರಿಸರ ಮಾಲಿನ್ಯ ಹಾಳು ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನವಹಿಸಿರುವದಕ್ಕೆ ಗ್ರಾಮಸ್ಥರು ಖಂಡಿಸಿದ್ದಾರೆ.
ಕಸಬಾ ಹೋಬಳಿಯ ಚಿನ್ನಸಂದ್ರ ಗ್ರಾಪಂಗೆ ಸೇರಿದ ಸರ್ವೇ ನಂ. 17 ಹಾಗೂ ದೊಡ್ಡಹಳ್ಳಿ ಸರ್ವೇ ನಂ. 28 ರ ಸರ್ಕಾರಿ ಸ್ವತ್ತಾದ ಬೆಟ್ಟಗುಡ್ಡಗಳನ್ನು ಗುತ್ತಿಗೆದಾರರು ರಾಜಕೀಯ ಕುಮ್ಮಕ್ಕಿನಿಂದ ರಾಜಾರೋಷವಾಗಿ ಮಣ್ಣು ಸಾಗಿಸುತ್ತಿದ್ದರು ತಾಲೂಕು ಆಡಳಿತ ಮೌನವಹಿಸಿದೆ.
ಪರಿಸರ ದಿನಾಚರಣೆಯಂದು ನಾಮಕಾವಸ್ಥೆ ಗಿಡನೆಟ್ಟು ವೇದಿಕೆಗಳ ಮೇಲೆ ಪರಿಸರದ ಬಗ್ಗೆ ಭಾಷಣ ಮಾಡುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಿಸರ ನಾಶಮಾಡಿ ಸುತ್ತಮುತ್ತಲಿನ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕೆಟ್ಟ ದೂಳಿನಿಂದ ಕಿರಿ ಕಿರಿ ಉಂಟಾಗುತ್ತಿದ್ದರು ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಇನ್ನು ಮುಂದಾದರು ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಪಕೃತಿಯ ಮೇಲೆ ದೌರ್ಜನ್ಯ ಎಸಗುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಪರಿಸರ ಉಳಿಸುವರೆ ಎಂಬುದನ್ನು ಕಾದು ನೋಡಬೇಕಿದೆ.