ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಲ್ಲೆಗೆ ನೀರು ತರಲು ರಾಜಕೀಯ ಇಚ್ಛಾಶಕ್ತಿ ಕೊರತೆ

Rashmi Kasaragodu
Updated On : 30 Jan 2014, 1:51 am

ಕೋಲಾರ: ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗೂಡಿ ಕೆಲಸ ಮಾಡಿದಲ್ಲಿ ನೀರಿನ ಸಮಸ್ಯೆ ನಿವಾರಣೆ ಮಾಡಬಹುದು, ಜಿಲ್ಲೆಗೆ ನೀರು ತರಲು ರಾಜಕೀಯ ಇಚ್ಛಾಶಕ್ತಿ ಇಲ್ಲದಂತೆ ಕಾಣಬರುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್. ರೇಣುಕಾ ಪ್ರಸಾದ್ ವಿಷಾಧಿಸಿದರು.
ತೋಟಗಾರಿಕಾ ಇಲಾಖೆಯಿಂದ ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ ಹಮ್ಮಿಕೊಂಡಿದ್ದ 3 ದಿನಗಳ ಫಲಪುಷ್ಪ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇದ್ದರೂ ರೈತರು ಮಳೆಯನ್ನು ನಂಬಿ ಕೃಷಿ ಮಾಡಿ ಬೇರೆಯವರಿಗೆ ಮಾದರಿ ಆಗಿದ್ದಾರೆ, ಶಾಶ್ವತ ನೀರಾವರಿ ಸೌಕರ್ಯ ಸಿಕ್ಕಲ್ಲಿ ವಿಶ್ವಕ್ಕೆ ಅನ್ನ ನೀಡಬಲ್ಲರು ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯ ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂದು ಸೂಚ್ಯವಾಗಿ ಹೇಳಿದ ಅವರು ಮೈಸೂರಿನಲ್ಲಿ ತನ್ನ ಹಿರಿಯ ವಿದ್ಯಾರ್ಥಿಯಾಗಿ ಕಾನೂನು ಪದವಿ ಮುಗಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಜನತೆಗೆ ನೀರು ಹರಿಸಲು ವರುಣಾ ನಾಲೆ ಕಟ್ಟಲು ಅವರು ಸಹ ಪ್ರಮುಖ ಪಾತ್ರ ವಹಿಸಿದ್ದಾರೆ. ಭೂಮಿಯಿಂದ ಸುಮಾರು 80 ಅಡಿ ಮೇಲ್ಭಾಗದಲ್ಲಿ ಕಾಲುವೆ ನಿರ್ಮಿಸಿ, ನೀರಾವರಿ ಯೋಜನೆ ರೂಪಿಸಲಾಗಿದೆ. ಅದೇ ರೀತಿ ಕೋಲಾರಕ್ಕೂ ಸಿದ್ದರಾಮಯ್ಯನವರು ನೀರು ಕೊಟ್ಟಲ್ಲಿ ಜಿಲ್ಲೆಯ ಜನತೆ ಋಣಿಗಳಾಗಿರುತ್ತಾರೆಂದರು.
ಕೈಗಾರಿಕೆಗಳ ಸ್ಥಾಪನೆಗಾಗಿ ರೈತರು ತಮ್ಮ ಭೂಮಿಯನ್ನು ಕಳೆದುಕೊಂಡಿದ್ದಾರೆ. ಅಭಿವೃದ್ಧಿಗಾಗಿ ಕೈಗಾರಿಕೆಗಳು ಅಗತ್ಯ. ಆದರೆ, ಹಣಕ್ಕಾಗಿ ಕೃಷಿ ಭೂಮಿ ಮಾರಾಟವಾದಲ್ಲಿ ಆಹಾರ ಸಮಸ್ಯೆ ಎದುರಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ತಾನು ಇಲ್ಲಿಗೆ ಬರುವ ಮೊದಲು ಕೋಲಾರ ಜಿಲ್ಲೆಯ ಬಗ್ಗೆ ಕೇಳಿದ್ದೆ ಬೇರೆ ಇಲ್ಲಿಗೆ ಬಂದಾಗ ಕಂಡಿದ್ದೇ ಬೇರೆ, ಜಿಲ್ಲೆಯ ರೈತರು ಶ್ರಮಜೀವಿಗಳು ಹನಿ ನೀರನ್ನು ಸದುಪಯೋಗ ಮಾಡಿಕೊಂಡು ಕಷ್ಟ ಪಟ್ಟು ದುಡಿದು ಜೀವಿಸುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀನಿವಾಸಪುರ ಹೊಗಳಗೆರೆ ಫಾರಂನ ಸಹಸಂಶೋಧನಾ ನಿರ್ದೇಶಕ ಡಾ. ಹೊನ್ನಬೈರಯ್ಯ ಇದ್ದರು. ರೇಣುಕಾ ನಿರೂಪಿಸಿ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಂ.ಆರ್. ಚಂದ್ರಶೇಖರ್, ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement