ನಾಳೆ ಬಂದ್ ನಡೆದೆ ನಡೆಯುತ್ತೆ: ಜ್ಯೋತಿರೆಡ್ಡಿ
ಗೌರಿಬಿದನೂರು: ಬಯಲುಸೀಮೆಗೆ ಶಾಶ್ವತ ನೀರಾವರಿ ಯೋಜನೆ, ಪರಮಶಿವಯ್ಯ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ 31ರಂದು ಚಿಕ್ಕಬಳ್ಳಾಪುರ ಬಂದ್ಗೆ ಕರೆ ಕೊಟ್ಟಿದ್ದು ಯಾವುದೇ ಕಾರಣಕ್ಕೂ ಬಂದ್ ಕೈಬಿಡಲ್ಲ. ಅಂದು ಜಿಲ್ಲೆಗೆ ಭೇಟಿ ನೀಡುವ ಮುಖ್ಯಮಂತ್ರಿ, ರಾಜ್ಯಪಾಲರಿಗೆ ನೀರಾವರಿ ಯೋಜನೆ ಅನುಷ್ಠಾನ ಕೋರಿ ಮನವಿ ಸಲ್ಲಿಸಲಾಗುವುದು ಎಂದು ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ, ಮಾಜಿ ಶಾಸಕಿ ಎನ್. ಜ್ಯೋತಿರೆಡ್ಡಿ ಹೇಳಿದ್ದಾರೆ.
ಪಟ್ಟಣ ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ನಾನು ಜೆಡಿಎಸ್ ಪಕ್ಷದವಳಾಗಿದ್ದರೂ ನೀರಿನ ವಿಚಾರದಲ್ಲಿ ರಾಜಕೀಯ ಮಾಡಲ್ಲ. ಅದೇ ರೀತಿ ಎಲ್ಲಾ ರಾಜಕೀಯ ಪಕ್ಷಗಳೂ ನೀರಿನ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದರು.
ಹಿಂದೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಪರಮಶಿವಯ್ಯ ವರದಿಯನ್ನಾಧರಿಸಿ ನೀರಾವರಿ ಯೋಜನೆಯನ್ನು ಜಾರಿಗೆ ತರಲು ಆಗ್ರಹಿಸಿದ್ದೆವು. ಆಗ ಅವರು ಸುಮಾರು 15 ಕೋಟ ರು. ಬಿಡುಗಡೆ ಮಾಡಿ ಸ್ಯಾಟಲೈಟ್ ಸರ್ವೆ ಮಾಡಿಸಿದ್ದರು. ಆದರೆ ಈವರೆಗೂ ಅದರ ವರದಿಯನ್ನು ಸರ್ಕಾರ ತರಿಸಿಕೊಂಡು ಯೋಜನೆಯ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದರು.
ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರಿಗೆ ಶಾಶ್ವತ ನೀರಾವರಿ ಯೋಜನೆಯ ಅನುಷ್ಠಾನದ ಬಗ್ಗೆ ಯಾವುದೇ ರೀತಿಯ ಕಳಕಳಿಯಿಲ್ಲ ಅವರು ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತರಾತುರಿಯಲ್ಲಿ ಎತ್ತಿನಹೊಳೆ ಯೋಜನೆ ಶಂಕುಸ್ಥಾಪನೆಗೆ ಹೊರಟಿದ್ದಾರೆ. ಈ ಯೋಜನೆಗೆ 3ಹಂತದಲ್ಲಿ ನೀರೆತ್ತಲು 400 ಮೆಗಾವ್ಯಾಟ್ ವಿದ್ಯುತ್ ಬೇಕು ಅದನ್ನು ಎಲ್ಲಿಂದ ತರುತ್ತಾರೆ ಅದರ ವೆಚ್ಚ ಹೇಗೆ ಭರಿಸುತ್ತಾರೆ. ಮುಂಬರುವ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ನವರು ಎತ್ತಿನಹೊಳೆ ಪ್ರಸ್ತಾಪಿಸುತ್ತಿದ್ದಾರೆ. ನೇತ್ರಾವತಿ ಯೋಜನೆಯನ್ನು ಏಕೆ ಮೊಯ್ಲಿ ಅವರು ತರುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದರು.
ಪರಿಸರವಾದಿ ಚೌಡಪ್ಪ ಮಾತನಾಡಿ ಮಂತ್ರಿಗಳು, ಶಾಸಕರಿಗೆ ಇಚ್ಚಾಶಕ್ತಿಯಿಲ್ಲ. ಅವರಿಗೆ ಯಾವುದೇ ನೀರಾವರಿ ಯೋಜನೆಯನ್ನು ತರುವಂತಹ ಆಸಕ್ತಿಯೂ ಇಲ್ಲ. ಆಂಧ್ರ ಪ್ರದೇಶ ಸರ್ಕಾರ ಕೇಂದ್ರ ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೆ ಸುಮಾರು 2500 ಕೋಟಿ ವೆಚ್ಚ ಶ್ರೀಶೈಲಂ ಪ್ರಾಜೆಕ್ಟನ್ನು ತಂದು ನಮ್ಮ ಪಕ್ಕದ ಆಂಧ್ರದ ಗಡಿ ಹಿಂದೂಪುರ ತಾಲೂಕು ಮಾನಂಪಲ್ಲಿವರೆಗೆ ತಂದಿದ್ದಾರೆ. ಆದರೆ ರಾಜ್ಯ ಸರ್ಕಾರ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನರಿಗೆ ಯಾವುದೇ ನೀರಾವರಿ ಯೋಜನೆಯನ್ನು ಈವರೆಗೂ ತಾರದೆ ವಂಚನೆ ಮಾಡುತ್ತಿದೆ. ಈಗಲಾದರೂ ಎಲ್ಲಾ ರಾಜಕೀಯ ಪಕ್ಷಗಳು ಓಟಿನ ರಾಜಕಾರಣ ಮಾಡದೆ ನೀರಿಗಾಗಿ ಪಕ್ಷಾತೀತವಾಗಿ ಹೋರಾಟ ಮಾಡಬೇಕು. ಬಂದ್ ಬೆಂಬಲಿಸಬೇಕು ಎಂದರು.
ಮಾಜಿ ಶಾಸಕ ಎಸ್.ವಿ. ಅಶ್ವತ್ಥನಾರಾಯಣರೆಡ್ಡಿ,
ಮುಖಂಡರಾದ ಎಸ್.ಎಚ್. ಲಕ್ಷ್ಮೀನಾರಾಯಣ, ಬಿಜೆಪಿ ಅಧ್ಯಕ್ಷ ಗೋಪಿನಾಥ್, ಬಿಜೆಪಿ ಮುಖಂಡ ಹನುಮೇಗೌಡ, ಪುರಸಭೆ ಮಾಜಿ ಅಧ್ಯಕ್ಷ ವೇಣುಗೋಪಾಲ್, ಜಿಲ್ಲಾ ರೈತಸಂಘ ಪ್ರಧಾನ ಕಾರ್ಯದರ್ಶಿ ಎಂ.ಆರ್.ಲಕ್ಷ್ಮೀನಾರಾಯಣ್, ದಲಿತ ಮುಖಂಡರಾದ ಚನ್ನಪ್ಪ, ಅಂಜನಮೂರ್ತಿ ಸನಂದಕುಮಾರ್, ಸಮಾಜಸೇವಕ ಎಸ್.ಎಸ್. ರೆಡ್ಡಿ, ವಿವೇಕಾನಂದರೆಡ್ಡಿ ಜೆಡಿಎಸ್ ಮುಖಂಡ ಅನಂತ್ರಾಜ್, ಹೊಸೂರು ಹರಿ ಮಾತನಾಡಿದರು.
ಬಂದ್ ಕೈಬಿಡಲು ಮನವಿ
ರಾಜ್ಯಪಾಲರು, ಮುಖ್ಯಮಂತ್ರಿ ಆಗಮಿಸುತ್ತಿರುವ ಜ.31ರಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಚಿಕ್ಕಬಳ್ಳಾಪುರ ಜಿಲ್ಲಾ ಬಂದ್ಗೆ ಕರೆ ನೀಡಿದ್ದು ಶಾಸಕ ಶಿವಶಂಕರ ರೆಡ್ಡಿ ಅವರು ಎತ್ತಿನಹೊಳೆಯ ಶಂಕುಸ್ಥಾಪನೆಗೆ ತರಾತುರಿ ಬೇಡ ಎಂಬ ಕಾರಣಕ್ಕೆ ಅದರ ಶಂಕುಸ್ಥಾಪನೆಯನ್ನು ಫೆಬ್ರವರಿಗೆ ಮುಂದೂಡಿರುವುದರಿಂದ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಬಂದ್ ನಡೆಸಬೇಡಿ ಎಂದು ಮನವಿ ಮಾಡಿದ್ದು ಒಂದು ವೇಳೆ ಮಾಡಿದರೆ ಜಿಲ್ಲಾಡಳಿತ ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ. ಎತ್ತಿನಹೊಳೆ ಯೋಜನೆ ಮುಂದಿಟ್ಟುಕೊಂಡು ಕೆಲವರು ರಾಜಕೀಯ ಮಾಡುತ್ತಿದ್ದಾರೆ, ಎತ್ತಿನಹೊಳೆ ಕುಡಿಯುವ ನೀರಿನಯೋಜನೆ ಅದನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದರು.
ಜಿಲ್ಲಾಧಿಕಾರಿ ಡಾ. ವಿಶಾಲ್ ಬಂದ್ ವಿಷಯದಲ್ಲಿ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ನಿರ್ವಹಿಸಲಿದೆ ಎಂದರು.