ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮುಂದುವರಿದ ರಾಸುಗಳ ಮಾರಣಹೋಮ

Rashmi Kasaragodu
Updated On : 30 Jan 2014, 1:43 am

ಚಿಕ್ಕಬಳ್ಳಾಪುರ: ರಾಸುಗಳು ಸೋಂಕಿನಿಂದ ಅಸ್ವಸ್ಥಗೊಂಡು ಈಗಲೂ ಮೃತಪಡುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ಸಂಭವಿಸುತ್ತಲೇ ಇದ್ದು ಹೈನೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿರುವ ಹಾಲು ಉತ್ಪಾದಕರು ಕಣ್ಣೀರು ಸುರಿಸುತ್ತಿದ್ದಾರೆ.
ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹರಡುತ್ತದೆ ಎನ್ನಲಾದ ಕಾಲುಬಾಯಿ ಜ್ವರ ಸೋಂಕು ಕಳೆದ ವರ್ಷ ರಾಜ್ಯಾದ್ಯಂತ ಸುಮಾರು 20 ಸಾವಿರಕ್ಕೂ ಹೆಚ್ಚು ರಾಸುಗಳಿಗೆ ತಗುಲಿ 3 ಸಾವಿರಕ್ಕೂ ಹೆಚ್ಚು ಜಾನುವಾರುಗಳು ಬಲಿಯಾದ ಹಿನ್ನೆಲೆಯಲ್ಲಿ ರೈತರು ಲಕ್ಷಾಂತರ ರು. ನಷ್ಟ ಅನುಭವಿಸಿದ್ದಾರೆ. ರಾಮನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಅನೇಕ ಕಡೆ ಕಾಲುಬಾಯಿ ಅಟ್ಟಹಾಸಕ್ಕೆ ಜಾನುವಾರುಗಳು ತತ್ತರಿಸಿದವು. ಈ ನಡುವೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಮೃತಪಟ್ಟ ಹಸುವಿಗೆ ತಲಾ 25 ಸಾವಿರ ರು. ಮತ್ತು ಕರುವಿಗೆ ತಲಾ 10 ಸಾವಿರ ರು. ಪರಿಹಾರ ವಿತರಣೆ ಮಾಡಿದ್ದರ ಜೊತೆಗೆ ಕಾಲುಬಾಯಿ ಜ್ವರ ಲಸಿಕೆ ಹಾಕಿಸುವ ಕ್ರಮ ಕೈಗೊಂಡಿದ್ದು ಪಶು ಸಂಗೋಪನಾ ಇಲಾಖೆ ಮತ್ತು ಕೆಎಂಎಫ್ ನೇತೃತ್ವದಲ್ಲಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿದ್ದಲ್ಲದೇ ಗ್ರಾಮಗಳಿಗೆ ಖುದ್ದು ತೆರಳಿ ಲಸಿಕೆ ಹಾಕಿಸುವ ಕೆಲಸವನ್ನು ಕೈಗೊಳ್ಳಲಾಯಿತು.
ಇದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಇಂದಿಗೂ ರೈತರ ಸಂಕಷ್ಟ ದೂರವಾಗಿಲ್ಲ ಎನ್ನುವುದು ವಾಸ್ತವಾಂಶ. ಈಗಲೂ ಕಾಲುಬಾಯಿ ಸೋಂಕಿನ ಜೊತೆಗೆ ಇತರೆ ಕಾಯಿಲೆಗಳಿಗೆ ರಾಸುಗಳು ಸಾಯುತ್ತಲೇ ಇವೆ. ಅನೇಕ ಗ್ರಾಮಗಳಲ್ಲಿ ಇದ್ದಕ್ಕಿದ್ದಂತೆ ರಾಸುಗಳು ಮೇವು ತಿನ್ನದೇ ಅಸ್ವಸ್ಥಗೊಂಡು ನೋವನ್ನು ಅನುಭವಿಸುತ್ತಿರುವುದರಿಂದ ರೈತರು ಸಂಬಂಧಪಟ್ಟ ಪಶು ವೈದ್ಯರನ್ನು ಕರೆಸಿ ಸೂಕ್ತ ಚಿಕಿತ್ಸೆಯನ್ನು ಕೊಡಿಸುತ್ತ ಅವರ ಸಲಹೆ, ಮಾರ್ಗದರ್ಶನದಂತೆ ನಡೆದುಕೊಂಡು ಔಷಧಿಗಳನ್ನು ಕೊಡಿಸುತ್ತಿದ್ದಾರೆ. ಆದರೆ, ಹೀಗೆ 20 ದಿನಗಳವರೆಗೂ ಆರೈಕೆ ಮಾಡಿದರೂ ರಾಸುಗಳು ಚೇತರಿಸಿಕೊಳ್ಳುತ್ತಿಲ್ಲ.
ಕಳೆದ ಎರಡು ತಿಂಗಳ ಹಿಂದೆ ತಾಲೂಕಿನ ಅಗಲಗುರ್ಕಿ ಗ್ರಾಮವೊಂದರಲ್ಲಿಯೇ ಸುಮಾರು 10 ಕ್ಕೂ ಹೆಚ್ಚು ಹಸುಗಳು ದೇಹದ ಹಿಂಭಾಗದ ಕಾಲುಗಳ ಸ್ವಾಧೀನ ಕಳೆದುಕೊಂಡು ಮೇವು ತಿನ್ನುವುದನ್ನು ಬಿಟ್ಟು ಸಾವನ್ನಪ್ಪಿದ್ದವು. ಕಳೆದೊಂದು ವಾರದಲ್ಲಿ ಚಿಕ್ಕಬಳ್ಳಾಪುರ ವ್ಯಾಪ್ತಿಯ ಮಂಚನಬಲೆ, ವಾಪಸಂದ್ರ, ಚಾಮಜರಾಜಪೇಟೆ, ಮಂಡಿಕಲ್, ಪೆರೇಸಂದ್ರ ಸೇರಿದಂತೆ ವಿವಿಧೆಡೆ 6 ಕ್ಕೂ ಹೆಚ್ಚು ಹಸುಗಳು ಮೃತಪಟ್ಟಿದ್ದು, ಚಿಂತಾಮಣಿ, ಬಾಗೇಪಲ್ಲಿ, ಗುಡಿಬಂಡೆ ಮತ್ತು ಗೌರಿಬಿದನೂರು ತಾಲೂಕುಗಳಲ್ಲಿ ಹಸುಗಳು ಸಾವಿನ ಪ್ರಕರಣಗಳು ವರದಿಯಾಗುತ್ತಿವೆ.
ಅಧಿಕೃತ ಲೆಕ್ಕವಿಲ್ಲ: ಗ್ರಾಮಗಳಲ್ಲಿ ರಾಸುಗಳು ಸೋಂಕಿನಿಂದ ಸಾಯುತ್ತಲೇ ಇವೆಯಾದರೂ ರೈತರ ನಿರ್ಲಕ್ಷ್ಯದಿಂದ ಅಧಿಕೃತ ಲೆಕ್ಕ ಸಿಗುತ್ತಿಲ್ಲ. ಬಹಳಷ್ಟು ಮಂದಿ ರೈತರು ರಾಸುಗಳಿಗೆ ವಿಮೆ ಮಾಡಿಸಿಲ್ಲ. ವೈದ್ಯರಿಂದ ಚಿಕಿತ್ಸೆ ಕೊಡಿಸುತ್ತಾರೆಯಾದರೂ ಹಸುಗಳು ಮೃತಪಟ್ಟಾಗ ಸಂಬಂಧಪಟ್ಟವರನ್ನು ಕರೆಸಿ ರಾಸುವಿನ ಸಾವಿಗೆ ಕಾರಣ ತಿಳಿಯಲು ಮುಂದಾಗುತ್ತಿಲ್ಲ. ಜಿಲ್ಲಾಡಳಿತ ದನ ಸಂತೆಗಳನ್ನು ನಿಷೇಧಿಸಿದ್ದರೂ ಸೋಂಕಿನ ಭಯದಿಂದ ರಾಸುಗಳನ್ನು ಅನಧಿಕೃತವಾಗಿ ನಡೆಯುವ ಸಂತೆಗಳಿಗೆ ಹೋಗಿ ಮಾರಾಟ ಮಾಡಲು ಯತ್ನಿಸುತ್ತಿದ್ದು ಇದರಿಂದ ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ಸೋಂಕಿನ ನಿಯಂತ್ರಣ ಮತ್ತು ರಾಸುಗಳ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ಹಿಂದೆ ಜಿಲ್ಲೆಯಲ್ಲಿ 1 ಸಾವಿರ ಕ್ಕೂ ಹೆಚ್ಚು ಹಸುಗಳು ಕಾಲುಬಾಯಿ ಜ್ವರಕ್ಕೆ ಮೃತಪಟ್ಟಿದ್ದರೂ ಇಲಾಖೆಯ ಲೆಕ್ಕ ನೂರರಲ್ಲಿದೆ. ಮತ್ತೊಂದೆಡೆ ಸೋಂಕು ಹರಡುವ ಪ್ರಮಾಣವೂ ದಿನೇ ದಿನೇ ಕುಸಿಯುತ್ತಿದೆ ಎಂಬ ಭಾವನೆಯಲ್ಲಿ ಎಲ್ಲರೂ ನಿರ್ಲಕ್ಷ್ಯ ವಹಿಸುತ್ತಿರುವುದು ರಾಸುಗಳು ಬಲಿಯಾಗಲು ಪ್ರಮುಖ ಕಾರಣವಾಗಿದೆ.


ಈಗಲೂ ಸೋಂಕು ಜಾನುವಾರುಗಳಿಗೆ ಹರಡುತ್ತಿದೆ. ನಾವು ರಾಸುಗಳಿಗೆ ಚಿಕಿತ್ಸೆ ಕೊಡಿಸಿದರೂ ಸೋಂಕಿನ ತೀವ್ರತೆಯಿಂದ ಏನೂ ಪ್ರಯೋಜನವಾಗುತ್ತಿಲ್ಲ. ಕಸಾಯಿಖಾನೆಗೆ ಮಾರಾಟ ಮಾಡದೇ ಬೇರೆ ವಿಧಿಯಿಲ್ಲ.
ಟಿ  ಶ್ರೀನಿವಾಸ್, ರೈತ, ಚಿಕ್ಕಬಳ್ಳಾಪುರ

ಕಾಲುಬಾಯಿ ಜ್ವರವನ್ನು ಈಗಾಗಲೇ ನಿಯಂತ್ರಣಕ್ಕೆ ತರಲಾಗಿದೆ. ಆದರೂ ಅಲ್ಲಲ್ಲಿ ರಾಸುಗಳು ಸೋಂಕಿಗೆ ತುತ್ತಾಗಿರುವುದು ಕಂಡು ಬಂದಿದ್ದು ಪಶು ವೈದ್ಯರು ಚಿಕಿತ್ಸೆ ಕೊಡುತ್ತಿದ್ದಾರೆ.
ಟಿ  ಪ್ರಕಾಶ್, ಉಪ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement