ದೂರುಗಳೇ ಇಲ್ಲದ ಅಹವಾಲು ಸಭೆ
ಚಿಕ್ಕಬಳ್ಳಾಪುರ: ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಕೊಡಲು ನಿರ್ಲಕ್ಷ್ಯ ವಹಿಸುವ, ಲಂಚಕ್ಕಾಗಿ ಪೀಡಿಸುವ ಅಧಿಕಾರಿಗಳ ವಿರುದ್ಧ ದೂರು ನೀಡಲು ಸಹಕಾರಿಯಾಗಲು ಲೋಕಾಯುಕ್ತರು ನಡೆಸುತ್ತಿರುವ ಅಹವಾಲು ಸಭೆಗಳಿಗೆ ನೀರಸ ಪ್ರತಿಕ್ರಿಯೆ ದೊರೆಯುವುದು ಇತ್ತೀಚೆಗೆ ಸಾಮಾನ್ಯವಾಗುತ್ತಿದೆ.
ಇದರರ್ಥ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದಲ್ಲ. ಸಮಸ್ಯೆಗಳನ್ನು ಗಮನಕ್ಕೆ ತಂದರೂ ಇತ್ಯರ್ಥವಾಗದೇ ಇರುವುದು, ವಿಳಂಬ, ಕೇವಲ ದಾಖಲೆಗಳಲ್ಲಿ ಮಾತ್ರ ಪ್ರಗತಿ ಕಾಣುತ್ತಿರುವುದು, ಸಭೆಗಳ ಬಗ್ಗೆ ಪ್ರಚಾರದ ಕೊರತೆ ಇದಕ್ಕೆ ಪ್ರಮುಖ ಕಾರಣಗಳು ಎಂಬ ಆರೋಪಗಳು ಕೇಳಿ ಬರುತ್ತಿವೆ.
ಜಿಲ್ಲೆಯ ಲೋಕಾಯುಕ್ತರು ಪ್ರತಿ ತಿಂಗಳು ವಿವಿಧ ತಾಲೂಕುಗಳಲ್ಲಿ ಸಾರ್ವಜನಿಕ ಅಹವಾಲು ಸಭೆಗಳನ್ನು ನಡೆಸಿ ದೂರು ಆಲಿಸುತ್ತಿದ್ದು ಪ್ರಾರಂಭದಲ್ಲಿ ಅಧಿಕಾರಿಗಳು ಸಭೆಯಲ್ಲಿ ನಡುಗಿಸುವ ಆರೋಪಗಳು ಹೆಚ್ಚಿಗೆ ಕೇಳಿ ಬರುತ್ತಿದ್ದವು. ಲೋಕಾಯುಕ್ತರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆದರೆ, ಇತ್ತೀಚೆಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಗಳಿಗೆ ಬಂದು ಸುಮ್ಮನೆ ಕುಳಿತು ಲೋಕಾಯುಕ್ತರಿಂದ ಕೇವಲ ನೀತಿ ಪಾಠ ಕೇಳಿ ಹೋಗುವಂತಹುದು ನಡೆಯುತ್ತಿದೆ. ಗಂಭೀರವಲ್ಲದ ಒಂದೋ ಅಥವಾ ಎರಡೋ ಅರ್ಜಿಗಳು ಮಾತ್ರ ಸ್ವೀಕಾರವಾಗುತ್ತಿವೆ. ಇತ್ತೀಚೆಗೆ ಬಾಗೇಪಲ್ಲಿ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಅಹವಾಲು ಸಭೆಯಲ್ಲಿ ಲೋಕಾಯುಕ್ತರು ಮತ್ತು ಅಧಿಕಾರಿಗಳು ಸ್ವಲ್ಪ ಸಮಯ ಕುಳಿತು ಎದ್ದು ಹೋಗಬೇಕಾಯಿತು.
ದೂರುಗಳೇ ಇಲ್ಲ: ಪ್ರತಿ ಸಭೆಯಲ್ಲೂ ಕೇಳಿ ಬರುವ ದೂರುಗಳಲ್ಲಿ ಬಹುತೇಕವು ಚಿಕ್ಕಬಳ್ಳಾಪುರ ನಗರಸಭೆಗೆ ಸಂಬಂಧಪಟ್ಟಿರುತ್ತವೆ. ಆದರೆ, ಇಂದು ನಗರಸಭೆಯ ವಿರುದ್ಧ ದೂರು ಕೊಡುವವರೇ ಇಲ್ಲವಲ್ಲ ಎಂದು ಲೋಕಾಯುಕ್ತ ನಿರೀಕ್ಷಕ ಮಂಜೇಗೌಡ ಅಶ್ಚರ್ಯ ವ್ಯಕ್ತಪಡಿಸಿದರು.
ತಾಪಂ ಸಭಾಂಗಣದಲ್ಲಿ ನಡೆದ ಅಹವಾಲು ಸಭೆಯಲ್ಲಿ ಕೇವಲ 4 ಅರ್ಜಿಗಳನ್ನು (ಪಡಿತರ ಚೀಟಿ ವಿತರಣೆ ಸಂಬಂಧ)ಸ್ವೀಕರಿಸಿದ ಅವರು, ದೂರುಗಳು ಕಮ್ಮಿಯಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದರು.
ಸಾರ್ವಜನಿಕರು ಸಭೆಗೆ ಬಂದು ದೂರು ಕೊಡುತ್ತಿಲ್ಲ ಎಂದರೆ ಸಮಸ್ಯೆಗಳು ಇಲ್ಲ ಎಂಬರ್ಥವಲ್ಲ. ಕೆಲ ಅಧಿಕಾರಿಗಳು ದೂರುದಾರರ ಮನವೊಲಿಸಿ ಅವರು ಸಭೆಗೆ ಬಾರದಂತೆ ನೋಡಿಕೊಳ್ಳುತ್ತಿರುವುದು ನಡೆಯುತ್ತಿದೆ ಎಂದು ಆರೋಪಿಸಿರು.
ಸಾರ್ವಜನಿಕರು ಕಚೇರಿಗಳಿಗೆ ಬಂದ ಸಂದರ್ಭದಲ್ಲಿ ಅಧಿಕಾರಿಗಳು ಮಾನವೀಯತೆಯಿಂದ ಸ್ಪಂದಿಸಿ ಕೆಲಸ ಮಾಡಿಕೊಡಬೇಕು. ಜನರ ಜೀವನ ಹಾಳಾಗುತ್ತದೆ ಎನ್ನುವ ಸಂದರ್ಭದಲ್ಲಿ ಸಣ್ಣ ಪ್ರಮಾಣದಲ್ಲಿ ಕಾನೂನು ಉಲ್ಲಂಘನೆಯಾದರೂ ಪರವಾಗಿಲ್ಲ, ಕೆಲಸ ಮಾಡಿಕೊಟ್ಟು ಅವರ ಕಷ್ಟವನ್ನು ಬಗೆಹರಿಸಿ, ಮನೆಯಿಲ್ಲದೇ ಬೀದಿ ಬದಿಯಲ್ಲಿ ಅನೇಕರು ಮೈ ನಡುಗಿಸುವ ಚಳಿಯಲ್ಲೂ ಮಲಗಿರುತ್ತಾರೆ.
ಅವರ ಪಾಡು ಹೇಗಿರುತ್ತದೆ ಎನ್ನುವುದನ್ನು ಸ್ವಯಂ ಅನುಭವಿಸಿದರೇನೇ ಗೊತ್ತಾಗುವುದು ಎಂದರು. ಸುಮ್ಮನೆ ಕಾಟ ಕೊಡಲು ಬರುವವರ ವಿರುದ್ಧ ಅಧಿಕಾರಿಗಳು ನಿರ್ಭಯವಾಗಿ ತಿಳಿಸಬೇಕು. ಆಗ ಲೋಕಾಯುಕ್ತರು ನೆರವಿಗೆ ಬರುತ್ತಾರೆ ಎಂದು ಭರವಸೆ ನೀಡಿದರು.