ರೈತರ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ
ಕೋಲಾರ: ಸ್ವಾಮಿನಾಥ ವರದಿಯನ್ನು ಕೂಡಲೇ ಜಾರಿ ಮಾಡಬೇಕು, ರಾಸಾಯನಿಕ ಗೊಬ್ಬರ ಬೆಲೆ ಕಡಿಮೆ ಮಾಡಿ ಅವೈಜ್ಞಾನಿಕ ಸಬ್ಸಿಡಿ ಪದ್ಧತಿ ರದ್ದು ಮಾಡಬೇಕು, ಬರಪೀಡಿತ ತಾಲೂಕುಗಳಲ್ಲಿ ರೈತರ ಸಮಸ್ಯೆ ನಿವಾರಣೆ ಮಾಡಲು ಮಹಾರಾಷ್ಟ್ರ ರಾಜ್ಯದ ವಿದರ್ಭ ಮಾದರಿಯಲ್ಲಿ ಪರಿಹಾರ ಘೋಷಣೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾದಿಂದ ಗುರುವಾರ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ್ದ ಕಾರ್ಯಕರ್ತರು ಭಾಗವಹಿಸಿದ್ದರು. ಕೆಜಿಪಿ ಬಿಜೆಪಿಯೊಂದಿಗೆ ವಿಲೀನವಾಗಿರುವುದರಿಂದ ಇತ್ತೀಚೆಗೆ ತಾನೇ ಬಿಜೆಪಿ ಮರು ಸೇರ್ಪಡೆಯಾದ ಮುಖಂಡರು ಪಾಲ್ಗೊಂಡಿದ್ದರು.
ಕಾಲುಬಾಯಿ ರೋಗದಿಂದ ಸತ್ತಿರುವ ರಾಸುಗಳಿಗೆ ಪರಿಹಾರ ನೀಡಬೇಕು, ಕಬ್ಬು ಬೆಳೆಗಾರರಿಗೆ ಸರ್ಕಾರ ನಿಗಧಿ ಮಾಡಿರುವ ಬೆಲೆಯನ್ನು ಕಾರ್ಖಾನೆಗಳ ಮಾಲೀಕರು ಸಕಾಲಕ್ಕೆ ನೀಡುವಂತೆ ಕ್ರಮ ಕೈಗೊಳ್ಳಬೇಕು, ಕೋಲಾರ ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿ ತೆರವು ಮಾಡಿಸಬೇಕು, ಎತ್ತಿನ ಹೊಳೆ ಯೋಜನೆಗೆ ಏಕಾಏಕಿ ಗುದ್ದಲಿ ಪೂಜೆ ಮಾಡುವ ಬದಲು ಸಮಗ್ರ ಯೋಜನೆಗೆ ಸಂಬಂಧಿಸಿದ ಟೆಂಡರ್ ಕರೆದ ನಂತರ ಕಾಮಗಾರಿಗೆ ಚಾಲನೆ ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಬಿಜೆಪಿ ಕಾರ್ಯಕರ್ತರು ಘೋಷಣೆಗಳ ಮೂಲಕ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಶಂಕರನಾರಾಯಣರೆಡ್ಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೃಷ್ಣಾರೆಡ್ಡಿ, ಪ್ರಧಾನ ಕಾರ್ಯದರ್ಶಿ ವಕೀಲ ಮಾಗೇರಿ ನಾರಾಯಣಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಮು. ರಾಘವೇಂದ್ರ, ಜಿಲ್ಲಾಧ್ಯಕ್ಷ ಕೆಂಬೋಡಿ ನಾರಾಯಣಸ್ವಾಮಿ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ರಾಮಸಂದ್ರ ನಾಗರಾಜ್, ಮಹಿಳಾ ಮೋರ್ಚಾ ನಗರ ಘಟಕದ ಅಧ್ಯಕ್ಷೆ ಎನ್. ಶಕುಂತಲ ದೀಕ್ಷಿತ್, ನಗರ ಘಟಕದ ಅಧ್ಯಕ್ಷ ಜಯಂತಿಲಾಲ್, ಸುರೇಶ್ ಬಾಬು, ಜಗದೀಶ್ವರಾಚಾರಿ, ಪ್ರಮೀಳಾ ಮಲ್ಲಿಕಾರ್ಜುನ್, ರಾಜೇಶ್ವರಿ, ಚಂದ್ರಮ್ಮ, ಕೆ.ಎನ್. ಶಶಿಕಲಾ, ಕೆ. ಕಮಲ, ಜಿ. ರತ್ನಮ್ಮ, ಆರ್. ಉಮಾದೇವಿ ಇದ್ದರು.