ಸರ್ಕಾರದಿಂದ ಅನಗತ್ಯ ಗೊಂದಲ; ಪರಮಶಿವಯ್ಯ ವಿಷಾದ
ಚಿಕ್ಕಬಳ್ಳಾಪುರ: ವೈಜ್ಞಾನಿಕವಾಗಿ ಕಾರ್ಯ ರೂಪಕ್ಕೆ ತರಲು ಸಾಧ್ಯವಾಗುತ್ತಿದ್ದರೂ ತಮ್ಮ ನೀರಾವರಿ ವರದಿಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಸಮರ್ಪಕವಾಗಿ ಬದ್ಧತೆ ತೋರುತ್ತಿಲ್ಲ. ಅನವಶ್ಯಕ ವಿಳಂಬ, ಗೊಂದಲ ಉಂಟು ಮಾಡುತ್ತಿದೆ ಎಂದು ನೀರಾವರಿ ತಜ್ಞ ಡಾ. ಪರಮಶಿವಯ್ಯ ವಿಷಾದ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಅವರು ಪರಮಶಿವಯ್ಯನವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ತಾಂತ್ರಿಕ ಸಮಿತಿ ವರದಿಯನ್ನೇ ನೀಡಿಲ್ಲ ಎಂದು ಹೇಳಿದ್ದಾರೆ. ಆದರೆ, ಸಮಿತಿ ಸರ್ಕಾರಕ್ಕೆ ತನ್ನ ವರದಿಯನ್ನು ಈಗಾಗಲೇ ಸಲ್ಲಿಸಿದೆ. ಇದುವರೆಗೂ ವೀರಪ್ಪ ಮೊಯ್ಲಿ ಅವರು ತಮ್ಮನ್ನು ಕರೆದು ಮಾತುಕತೆ ನಡೆಸಿಯೇ ಇಲ್ಲ. ತಾವು ಮಾತನಾಡಲು ಬಯಸಿದ್ದರೂ ಅವರಿಗೆ ಮಾತನಾಡುವ ಸಮಯ ಇಲ್ಲ ಎಂದು ವ್ಯಂಗ್ಯವಾಡಿದರು. ತಾವು ತಯಾರಿಸಿದ ವರದಿ ವೈಜ್ಞಾನಿಕವಾಗಿದೆ. ಪಶ್ಚಿಮಘಟ್ಟಗಳಲ್ಲಿ ಹರಿದು ಸಮುದ್ರ ಸೇರುವ ನೀರನ್ನು ಪರಿಸರಕ್ಕೆ ಹಾನಿಕಾರವಾಗದಂತೆ ಬಯಲು ಸೀಮೆಯ ಜಿಲ್ಲೆಗಳಿಗೆ ಹರಿಸಬಹುದು. ಇದರಿಂದ ದೊರೆಯುವ 200 ಟಿಎಂಸಿ ನೀರಿನಿಂದ ಈ ಭಾಗಕ್ಕೆ ತುಂಬಾ ಅನುಕೂಲವಾಗುತ್ತದೆ. ತಮ್ಮ ವರದಿಯ ಬಗ್ಗೆ ಸರ್ಕಾರಕ್ಕೆ ಅನುಮಾನವಿದ್ದರೆ ನುರಿತ ತಜ್ಞರ ಸಮಿತಿ ರಚಿಸಿ ಸಾಧಕ ಬಾಧಕಗಳನ್ನು ತಿಳಿಸಲಿ, ಅದು ಬಿಟ್ಟು ರಾಜಕೀಯ ಕಾರಣಗಳಿಂದ ಅನವಶ್ಯಕ ಗೊಂದಲ ನೀಡುವುದು ಬೇಡ, ಈಗಾಗಲೇ ತಮಗೆ ತುಂಬಾ ಬೇಸರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸ್ತುತ ಎತ್ತಿನಹೊಳೆ ಯೋಜನೆಯಿಂದ ನೀರನ್ನು ಹರಿಸಲು ಮುಂದಾಗಿದ್ದು ಇದರಿಂದ ಈ ಭಾಗಕ್ಕೆ ಸಮರ್ಪಕವಾಗಿ ನೀರು ದೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕಳೆದ ಅನೇಕ ದಶಕಗಳಿಂದ ತಮ್ಮ ವರದಿಯ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತ ಬಂದಿದ್ದೇನೆ. ಇಲ್ಲಿಯವರೆಗೂ 6 ಮಂದಿ ಮುಖ್ಯಮಂತ್ರಿಗಳು ವರದಿಯ ಬಗ್ಗೆ ತಿಳಿದುಕೊಂಡರೂ ತಮ್ಮನ್ನು ಕರೆದು ಸರಿಯಾಗಿ ಚರ್ಚೆ ನಡೆಸಿಲ್ಲ ಎಂದರು.