ಸಿಎಂ ಆಪ್ತಕಾರ್ಯದರ್ಶಿ ಎಂದು ಹಣ ಸುಲಿಗೆ ಮಾಡುತ್ತಿದ್ದವನ ಬಂಧನ
ಚಿಕ್ಕಬಳ್ಳಾಪುರ: ತನ್ನನ್ನು ಮುಖ್ಯಮಂತ್ರಿಗಳ ಆಪ್ತಕಾರ್ಯದರ್ಶಿ ಎಂದು ಪರಿಚಯಿಸಿಕೊಂಡು ಕೆಲಸ ಕೊಡಿಸುವ ನೆಪದಲ್ಲಿ ಹಣ ಸುಲಿಗೆ ಮಾಡಿ ಹಲವರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಸ್ಥಳೀಯ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ತಾನು ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ, ಸರ್ಕಾರದ ಮಟ್ಟದಲ್ಲಿ ಏನೇ ಕೆಲಸ ಬೇಕಾದರೂ ಮಾಡಿಕೊಡುತ್ತೇನೆ, ನಿಮಗೆ ಸರ್ಕಾರಿ ಕೆಲಸ ಬೇಕಾ ಇಷ್ಟು ಅಂತಾ ಹಣವನ್ನು ಕೊಡಿ,ನಿಮಗೆ ಸರ್ಕಾರಿ ಕೆಲಸ ಸಿಗುತ್ತದೆ ಎಂದು ಆರೋಪಿ ಬುರುಡೆ ಬಿಟ್ಟು ಲಕ್ಷಾಂತರ ರು. ಹಣವನ್ನು ಅಮಾಯಕರಿಂದ ಪಡೆಯುತ್ತಿದ್ದ.ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಗ್ರಾಮ ಲೆಕ್ಕಿಗರ ಹುದ್ದೆ ಕೊಡಿಸುವುದಾಗಿ ಹೇಳಿ ಯುವಕ ಯುವತಿಯರನ್ನು ಇಲ್ಲಿಗೆ ಕಳುಹಿಸಿರುವ ಆರೋಪಿ ಪೊಲೀಸರ ಕಾರ್ಯಾಚರಣೆಯಿಂದ ಸಿಕ್ಕಿ ಬಿದ್ದಿದ್ದಾನೆ.
ಆರೋಪಿಯನ್ನು ಬಿಜಾಪುರ ಜಿಲ್ಲೆಯ ಮುದ್ದೆಬಿಹಾಳದ ಬಿ.ಎನ್. ಶಿವಾನಂದ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಸುರೇಶ್ ನಾಪತ್ತೆಯಾಗಿದ್ದು ಬಂಧಿತನಿಂದ ವಿಸ್ಟಿಂಗ್ ಕಾರ್ಡು, 4 ಲಕ್ಷ ರು.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ಕೆಲ ತಿಂಗಳ ಹಿಂದೆ ಬಿಜಾಪುರದ ಕೆಲ ಯುವಕರು ಜಿಲ್ಲಾಧಿಕಾರಿಗಳ ಕಚೇರಿಗೆ ಗ್ರಾಮ ಲೆಕ್ಕಿಗರ ನೇಮಕಾತಿಯ ಆದೇಶ ಪತ್ರವನ್ನು ತಂದಿದ್ದರು. ಕೆಲಸ ನಿರ್ವಹಿಸಲು ಸ್ಥಳ ನಿಯೋಜನೆ ಮಾಡುವಂತೆ ಒತ್ತಾಯಿಸಿದಾಗ ದಂಗಾದ ಇಲ್ಲಿನ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅನಾಮಿಕನಿಂದ ಸರ್ಕಾರದ ಉದ್ಯೋಗ ನೇಮಕಾತಿ ಪತ್ರವನ್ನು ತಂದಿದ್ದವರ ಬಳಿ ಇರುವುದು ನಕಲಿ ಪ್ರಮಾಣ ಪತ್ರಗಳು ಎನ್ನುವುದು ತಿಳಿದು ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡುವುದರ ಜೊತೆಗೆ ಸುಮಾರು 10 ಕ್ಕೂ ಹೆಚ್ಚು ಮಂದಿ ಯುವಕರು ಇಲ್ಲಿನ ಸ್ಥಳೀಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರಿಂದ ಕಾರ್ಯೋನ್ಮುಖರಾದ ಪೊಲೀಸರು ಕಾರ್ಯಾಚರಣೆ ಕೈಗೊಂಡು ಬೆಂಗಳೂರಿನಲ್ಲಿ ಶಿವಾನಂದ್ನನ್ನು ಬಂಧಿಸಿದ್ದಾರೆ. ವಂಚನೆಯ ಹಿಂದೆ ದೊಡ್ಡ ಜಾಲವಿರಬಹುದೆಂಬ ಶಂಕೆಯಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.