ಹಂಪ್ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ
ಕೋಲಾರ: ನಗರದ ಬೆಸ್ಕಾಂ ಬಳಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವುದರಿಂದ ಕೂಡಲೇ ರೋಡ್ ಹಂಪ್ ನಿರ್ಮಿಸಬೇಕೆಂದು ಒತ್ತಾಯಿಸಿ ನಾಗರಿಕರು ಬುಧವಾರ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು.
ನಗರದ ನಿವಾಸಿ, ರೇಷ್ಮೆ ನೂಲು ತಯಾರಕ ನಿಸಾರ್ ಎಂಬುವರು ಸೈಕಲ್ ಮೇಲೆ ಮನೆಗೆ ತೆರಳುತ್ತಿದ್ದಾಗ ಟವರ್ ಕ್ಲಾಕ್ ಬಳಿ ರೇಲ್ವೆ ಇಲಾಖೆಯವರು ಹೊಸದಾಗಿ ನಿರ್ಮಿಸಿರುವ ಮೇಲು ಸೇತುವೆಯ ಮೇಲೆ ವೇಗವಾಗಿ ಹೋಗುತ್ತಿದ್ದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದರಿಂದ ಸೈಕಲ್ ಸವಾರ ತೀವ್ರವಾಗಿ ಗಾಯಗೊಂಡಿರುವ ಹಿನ್ನಲೆಯಲ್ಲಿ ನಾಗರಿಕರು ದಿಢೀರ್ ರಸ್ತೆ ಬಂದ್ ಮಾಡಿ ರೋಡ್ ಹಂಪ್ಗಾಗಿ ಆಗ್ರಹಿಸಿದರು.
ಇದರಿಂದಾಗಿ ಮೇಲು ಸೇತುವೆ ಮೇಲೆ ಸಂಚಾರ ಸ್ಥಗಿತಗೊಂಡಿತು, ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಪಘಾತಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಸಂಚಾರಿ ಪೊಲೀಸರು ಭರವಸೆ ನೀಡಿದ ಮೇಲೆ ರಸ್ತೆ ಬಂದ್ ತೆರವುಗೊಳಿಸಲಾಯಿತು.
ಗಾಯಾಳು ಬೆಂಗಳೂರಿಗೆ: ಬೈಕ್ ಡಿಕ್ಕಿಯಿಂದ ತೀವ್ರವಾಗಿ ಗಾಯಗೊಂಡಿರುವ ನಿಸಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಸಂಚಾರಿ ಪೊಲೀಸರು ಅಪಘಾತಕ್ಕೆ ಕಾರಣನಾದ ಬೈಕ್ ಸವಾರ ವಿರುದ್ಧ ಪ್ರಕರಣ ದಾಖಲಾಗಿದೆ.
'ಲಲಿತಕಲೆ ಉಳಿವಿಗೆ ಮುಂದಾಗಿ'
ಮಾಲೂರು: ನಶಿಸಿ ಹೋಗುತ್ತಿರುವ ಲಲಿತಕಲೆಯನ್ನು ಉಳಿಸಿ ಬೆಳಸುವ ಜವಾಬ್ದಾರಿ ಇಂದಿನ ಯುವ ಪೀಳಿಗೆ ಮೇಲಿದೆ ಎಂದು ಇಂಚರ ಸಂಸ್ಥೆಯ ವ್ಯವಸ್ಥಾಪಕ ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಅರಳೇರಿ ರಸ್ತೆಯ ಶ್ರೀ ಶಿರಡಿ ಬಾಬಾ ದೇವಾಯದಲ್ಲಿ ಸ್ಥಳೀಯ ಲಲಿತಾ ಕಲಾ ಅಕಾಡಮಿ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಅಧುನೀಕತೆ ಜೀವನ ಶೈಲಿಗೆ ಒಗ್ಗಿಹೋಗುತ್ತಿರುವ ಇಂದಿನ ಸಮಾಜದಲ್ಲಿ ನಮ್ಮ ಸಂಸ್ಕೃತಿ-ಕಲೆಗಳು ನಶಿಸಿ ಹೋಗುತ್ತಿದೆ. ಉತ್ತಮ ಸಮಾಜಕ್ಕೆ ಲಲಿತಾ ಕಲೆ-ಸಂಸ್ಕೃತಿ ಉಳಿಸಿಕೊಳ್ಳಬೇಕಾಗಿದೆ ಎಂದರು.
ದೇವಾಲಯ ಕಾರ್ಯದರ್ಶಿ ಅಮರ್ಸಿಂಗ್, ಉದಯ್ ಸಿಂಗ್, ಕೆ. ಉಮೇಶ್, ಭಾಗ್ಯಲಕ್ಷ್ಮಿ, ನಟರಾಜ್, ನಿವೃತ್ತ ಶಿಕ್ಷಕ ಶ್ರೀನಿವಾಸಯ್ಯ ಇದ್ದರು.