ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕುಲುಮೆಕಾರರ ದೇಶ ಪರ್ಯಟನೆ

Mainashree
Updated On : 31 Jan 2014, 10:46 am

ಕೋಲಾರ: ಪ್ರಕೃತಿ ವಿಕೋಪದಿಂದ ಅತಿವೃಷ್ಟಿ- ಅನಾವೃಷ್ಟಿ ಹೆಚ್ಚಾದಾಗ ಜನರು ಹೊಟ್ಟೆಗಾಗಿ ವಲಸೆ ಹೋಗುವುದು ಸಾಮಾನ್ಯ. ವಿಚಿತ್ರವೆಂದರೆ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಕೋಲಾರ ಜಿಲ್ಲೆಗೆ ನೀರು ಮತ್ತು ಕೂಲಿಗಾಗಿ ನೂರಾರು ಕಿಮೀ ದೂರದ ಮಧ್ಯಪ್ರದೇಶದಿಂದ ವಲಸೆ ಬಂದಿರುವ ನಾಲ್ಕೈದು ಕುಲುಮೆಕಾರ ಕುಟುಂಬಗಳು ಕಳೆದ ಎರಡು ದಿನಗಳಿಂದ ನಗರದಲ್ಲಿ ಬೀಡುಬಿಟ್ಟು ಗಮನ ಸಳೆದಿವೆ.
ಕೋಲಾರದ ಜನರಿಗೆ ಶುದ್ಧವಾದ ನೀರಿಲ್ಲದೆ ಹಣಕೊಟ್ಟು ಮಿನರಲ್‌ವಾಟರ್ ಖರೀದಿ ಮಾಡಿ ಕುಡಿಯುವ ಪರಿಸ್ಥಿತಿ ಇದೆ. ಆದರೂ ವಲಸೆ ಬಂದಿರುವ ಮಧ್ಯಪ್ರದೇಶದ ಕೂಲಿಕಾರರಿಗೆ ಇಲ್ಲಿನ ಜನತೆ ಕೆಲ ದಿನ ಉಳಿದುಕೊಳ್ಳಲು, ತಮ್ಮ ಸಾಂಪ್ರದಾಯಿಕ ಕುಲ ಕಸುಬಾದ ಕುಲುಮೆಗಾರಿಕೆಯ ಮೂಲಕ ಒಂದಿಷ್ಟು ಹಣ ಸಂಪಾದಿಸಲು ಅವಕಾಶ ಮಾಡಿಕೊಟ್ಟಿರುವುದು ಜನತೆಯಲ್ಲಿನ ಹೃದಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ.
ನಗರದ ಸರ್ಕಾರಿ ಬಾಲಕರ ಕಾಲೇಜಿನ ಎದುರುಗಡೆ ಫುಟ್‌ಪಾತ್‌ನಲ್ಲಿ ಕುಲುಮೆಕಾರರ ನಾಲ್ಕೈದು ಕುಟುಂಬಗಳು ಪ್ರತ್ಯೇಕವಾಗಿ ಬಿಡಾರ ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಎರಡು ತಿಂಗಳ ಕಂದಮ್ಮ, 1 ವರ್ಷದಿಂದ 10 ವರ್ಷದ ಮಕ್ಕಳು ಸೇರಿದಂತೆ 60 ವರ್ಷ ದಾಟಿರುವವರು ಈ ಕ್ಯಾಂಪಿನಲ್ಲಿದ್ದಾರೆ.
ಬೆಳಿಗ್ಗೆ 5 ಗಂಟೆಗೆ ದೊಡ್ಡವರು ಎದ್ದು ಸುತ್ತಮುತ್ತಲ ಗಲ್ಲಿಗಳಿಗೆ ಹೋಗಿ ನಿತ್ಯಕರ್ಮಗಳನ್ನು ಮುಗಿಸುತ್ತಾರೆ, ಮಕ್ಕಳಿಗೆ ಕಾಲೇಜಿನ ಬಳಿ ಇರುವ ನಿರ್ಮಲ ಭಾರತ ಶೌಚೌಲಯಗಳಿಗೆ ಕರೆದೊಯ್ಯುತ್ತಾರೆ, ಸ್ನಾನಕ್ಕೆ ನೀರಿನ ಕೊರತೆ ಇರುವುದರಿಂದ ಪಕ್ಕದ ಸರ್ವಜ್ಞ ಪಾರ್ಕು, ಇಲ್ಲವೇ ಸಮೀಪದ ಕೆರೆಗಳಿಗೆ ಹೋಗಿ ದೇಹ ಸ್ವಚ್ಛಮಾಡಿಕೊಂಡು ಬಂದು ತಮ್ಮ ದೈನಂದಿನ ಚಟುವಟಿಕೆಗಳನ್ನು ಆರಂಭಿಸುತ್ತಾರೆ.
ಹೆಂಗಸರು ಕ್ಯಾಂಪಿನಲ್ಲೇ ಇದ್ದಿಲು ಬಳಸಿ ಚಹಾ ತಯಾರಿಸಿ ಕುಡಿಯುತ್ತಾರೆ, ಬೆಳಿಗ್ಗೆ 9 ಗಂಟೆ ಆಗುತ್ತಿದ್ದಂತೆ ಅಕ್ಕ-ಪಕ್ಕದ ಕೈಗಾಡಿಗಳಲ್ಲಿ ಸಿಗುವ ಇಡ್ಲಿ, ಪೂರಿಯನ್ನು ಖರೀದಿಸಿ ಉಪಹಾರ ಸೇವಿಸುತ್ತಾರೆ, ಈ ಕ್ಯಾಂಪಿನಲ್ಲಿರುವ ಕೆಲವರು ಹೋಟೆಲ್ ತಿಂಡಿಗೆ ಹಣ ಸುರಿಯಲು ಇಷ್ಟವಿಲ್ಲದೆ, ಕಮ್ಮಾರನ ಒಲೆಯ ಮೇಲೆ ರೋಟಿ, ದಾಲ್ ತಯಾರಿಸಿ ಹೊಟ್ಟೆ ತುಂಬ ತಿಂದು ಕಬ್ಬಿಣದ ಕೆಲಸ ಪ್ರಾರಂಭಿಸುತ್ತಾರೆ.
ಹಳೆ ಕಬ್ಬಿಣದ ತುಂಡುಗಳಿಂದ ಮಚ್ಚು, ಕತ್ತಿ, ಗುದ್ದಲಿ, ಸುತ್ತಿಗೆ, ಗಡಾರಿ, ನೇಗಿಲಿಗೆ ಕಟ್ಟುವ ಸಲಾಕೆ ಮುಂತಾದವುಗಳನ್ನು ತಯಾರಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ತಂಡದಲ್ಲಿನ ಯುವಕರು ಕುಲುಮೆಯಲ್ಲಿ ಕಾಯಿಸಿದ ಕಬ್ಬಿಣವನ್ನು ತಟ್ಟಿದರೆ, ಅದಕ್ಕೆ ವಿವಿಧ ಬಗೆಯ ರೂಪ, ವಿನ್ಯಾಸ ನೀಡಿ ಆಯುಧಗಳನ್ನು ದೊಡ್ಡವರು ನೀಡುತ್ತಾರೆ, ಹೆಂಸಗರು ತಯಾರಿಸಿದ ಉಪಕರಣಗಳನ್ನು ತಮ್ಮದೇ ಶೈಲಿಯಲ್ಲಿ ಗ್ರಾಹಕರನ್ನು ಆಕರ್ಷಣೆ ಮಾಡಿ ಮಾರಾಟ ಮಾಡುತ್ತಾರೆ.
ಅಲ್ಲಿಗೂ ಇಲ್ಲಿಗೂ ವ್ಯಾಪಾರದಲ್ಲಿ ವ್ಯತ್ಯಾಸವಿದೆಯೇ ಎಂದು ಕೇಳಿದಾಗ, ಇಲ್ಲಿನ ವ್ಯಾಪಾರದ ಬಗ್ಗೆ ನಾವು ತಿಳಿದುಕೊಂಡಿಲ್ಲ, ನಮ್ಮ ಬಳಿ ಬರುವ ಗ್ರಾಹಕರು ತಮಗೆ ಬೇಕಾದ ಉಪಕರಣಗಳನ್ನು ನಾವು ಕೇಳಿದಷ್ಟು ದುಡ್ಡಿಗೆ ಖರೀದಿ ಮಾಡಲು ಹಿಂದೇಟು ಹಾಕಿದಾಗ ನಾವೇ ರಿಯಾಯಿತಿ ನೀಡಿ ಕಡಿಮೆ ಬೆಲೆಗೆ ಮಾರುತ್ತೇವೆ. ದಿನಕ್ಕೆ 600 ರಿಂದ 900 ರು.ವ್ಯಾಪಾರ ಆಗುತ್ತದೆ ಕೆಲವು ಸರಿ ಅದಕ್ಕಿಂತಲೂ ಕಡಿಮೆ ಆಗುತ್ತದೆ, ಲಾಭಕ್ಕಿಂತ ನಮ್ಮ ಕ್ಯಾಂಪಿನಲ್ಲಿರುವ 20 ರಿಂದ 25 ಜನರಿಗೆ ದಿನದ ಊಟ-ತಿಂಡಿಗೆ ಆಗುವಷ್ಟು ಹಣ ಸಿಕ್ಕರೆ ಅಷ್ಟಕ್ಕೆ ಸಂತೃಪ್ತಿ ಪಡುತ್ತೇವೆ.
ನೀವು ಮತ್ತೆ ಮಧ್ಯಪ್ರದೇಶಕ್ಕೆ ಹೋಗುವುದು ಯಾವಾಗ ಎಂದು ಪ್ರಶ್ನಿಸಿದಾಗ ಹೋಳಿ ಹಬ್ಬದವರೆಗೆ ಬೇರೆ ಬೇರೆ ಊರುಗಳನ್ನು ಸುತ್ತಾಡಿ ನಂತರ ನಮ್ಮೂರು ಸೇರಿಕೊಳ್ಳುತ್ತೇವೆ. ಮಕ್ಕಳು ಹೆಚ್ಚಾಗಿರುವುದರಿಂದ ಇಲ್ಲಿನ ಜನ ನಮಗೆ ರಾತ್ರಿ ವೇಳೆ ತಂಗಲು ಸೂಕ್ತವಾದ ಜಾಗದಲ್ಲಿ ತಾತ್ಕಾಲಿಕವಾದ ಬಿಡಾರ ಹಾಕಿಕೊಳ್ಳುವುದಕ್ಕೆ ಅವಕಾಶ ಮಾಡಿದ್ರೆ ಒಳ್ಳೆಯದಾಗುತ್ತದೆ, ನಮ್ಮ ಮಕ್ಕಳನ್ನು ಇದೇ ಕಸುಬಿನಲ್ಲಿ ಮುಂದುವರೆಸುವುದಾಗಿಯೂ ಹೇಳಿದ.

ಪಾ.ಶ್ರೀ. ಅನಂತರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement