ಬೇಸಿಗೆ ಮುನ್ನವೇ ಕಲ್ಲಂಗಡಿ ದುಬಾರಿ
ಕೋಲಾರ: ಬೇಸಿಗೆ ಆರಂಭಕ್ಕೆ ಮುನ್ನವೇ ನಗರದಲ್ಲಿ ಕಲ್ಲಂಗಡಿ ಹಣ್ಣುಗಳ ಮಾರಾಟ ಶೂರುವಾಗಿದೆ. ದುಬಾರಿ ಬೆಲೆ ನಡುವೆಯೂ ದಾಹ ತೀರಿಸಿಕೊಳ್ಳಲು ಗ್ರಾಹಕರು ಕಲ್ಲಂಗಡಿ ಖರೀದಿಗೆ ಮುಗಿಬಿದ್ದಿದ್ದಾರೆ.
ಕೋಲಾರದಲ್ಲಿ ಕಲ್ಲಂಗಡಿ ಬೆಳೆಯುವುದು ಕಡಿಮೆ.ಹಾಗಾಗಿ ವ್ಯಾಪಾರಿಗಳು ಆಂಧ್ರ ಪ್ರದೇಶದ ಕದರಿ, ಅನಂತಪುರಂ ಮುಂತಾದ ಕಡೆಗಳಿಂದ ಮಾಲು ತರಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಜ್ಯೂಸ್ ಕಲ್ಲಂಗಡಿ ಹಣ್ಣು ಕೆಜಿಗೆ 20 ರಿಂದ 22, ಜ್ಯೂಸ್ ತಯಾರಿಗೆ ಯೋಗ್ಯವಲ್ಲದ ಹಣ್ಣಿಗೆ ಕೆಜಿಗೆ 12ರಿಂದ 15 ರು. ವರೆಗೆ ಮಾರಾಟ ಮಾಡುತ್ತಿದ್ದು ಫೆಬ್ರವರಿ 15 ನಂತರ ಬೆಲೆ ಮತ್ತಷ್ಟು ಏರಿಕೆ ಆಗಬಹುದೆಂದು ಹಣ್ಣಿನ ವ್ಯಾಪಾರಿ ಮಸ್ತಾಕ್ ತಿಳಿಸಿದರು.
ಸಾಮಾನ್ಯವಾಗಿ ಕಲ್ಲಂಗಡಿ ಮಾರುಕಟ್ಟೆಗೆ ಹೆಚ್ಚಾಗಿ ಬರುವುದು ಬೇಸಿಗೆಗಾಲದಲ್ಲಿ. ಈ ಬಾರಿ ಚಳಿ ಕಡಿಮೆ ಆಗುವ ಮುನ್ನವೇ ಹಣ್ಣು ಬಂದಿರುವುದರಿಂದ ವ್ಯಾಪಾರ ಅಷ್ಟೇನು ಜೋರಾಗಿಲ್ಲ. ಅಲ್ಲದೆ ಮಾಲು ಕಡಿಮೆ ಬರುತ್ತಿರುವುದರಿಂದ ಬೆಲೆಯು ದುಬಾರಿಯಾಗಿದೆ ಎಂದರು.
ಕಲ್ಲಂಗಡಿ ಹಣ್ಣು ಸೀಜನೆ ಕೇವಲ ಮೂರು ತಿಂಗಳು ಮಾತ್ರ, ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಬೆಳೆ ಬೆಳೆಯುತ್ತಿಲ್ಲ. ಅದಕ್ಕಾಗಿ ನಾವು ಹೊರಗಡೆಯಿಂದ ಮಾಲು ತರಿಸಿಕೊಳ್ಳಬೇಕಾಗಿದೆ. ಒಂದು ಟನ್ಗೆ 8ರಿಂದ 9 ಸಾವಿರ ಖರ್ಚು ಬರುತ್ತದೆ. ಬೇಸಿಗೆ ಕಾಲದಲ್ಲಿ ಚೆನ್ನಾಗಿ ವ್ಯಾಪಾರ ಅದರೆ ಲಾಭ ಸಿಗುವುದರಲ್ಲಿ ಅನುಮಾನವಿಲ್ಲವೆಂದು ತಿಳಿಸಿದರು.