ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವುದು ಎಲ್ಲರ ಕರ್ತವ್ಯ
ಕೋಲಾರ: ವಿದ್ಯಾರ್ಥಿಗಳಲ್ಲಿ ಶಿಸ್ತು, ನೈತಿಕತೆ ಬೆಳೆಸುವುದು ಎಲ್ಲರ ಕರ್ತವ್ಯ. ಶಾಲಾ ಕಾಲೇಜುಗಳು ಕೇವಲ ಸರ್ಕಾರದ ಸ್ವತ್ತು ಅಲ್ಲ, ವಿದ್ಯಾರ್ಥಿಗಳ ಆಸ್ತಿ ಆಗಿರುವುದರಿಂದ ಅದನ್ನು ಸಂರಕ್ಷಣೆ ಮಾಡುವುದು,ಪಾವಿತ್ರ್ಯತೆ ಕಾಪಾಡುವುದು ವಿದ್ಯಾರ್ಥಿಗಳ ಹೊಣೆ ಅಷ್ಟೇ ಅಲ್ಲ,ಕರ್ತವ್ಯವೂ ಹೌದು.
ಹೀಗೆಂದು ಅಭಿಪ್ರಾಯಪಟ್ಟವರು ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು.
ಮುಳಬಾಗಿಲು ಪಟ್ಟಣಕ್ಕೆ ಶುಕ್ರವಾರ ಭೇಟಿ ನೀಡಿದ್ದ ಅವರು ವಾಪಸ್ಬೆಂಗಳೂರಿಗೆ ಹೋಗುವಾಗ ಕೋಲಾರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಗೋಡೆ ಮತ್ತು ಡೆಸ್ಕ್ಗಳ ಮೇಲೆ ಬರೆದು ತರಗತಿಗಳನ್ನು ವಿಕೃತಗೊಳಿಸಿರುವ ಬಗ್ಗೆ ಕನ್ನಡಪ್ರಭ ದೂರವಾಣಿ ಮೂಲಕ ತಿಳಿಸಿದಾಗ, ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಕೇವಲ ಪಾಠ ಮಾಡಿದರೆ ಸಾಲದು, ಶಿಕ್ಷಕರು ಮಕ್ಕಳಿಗೆ ಶಿಸ್ತು, ನೀತಿ ಪಾಠವನ್ನು ಕಲಿಸುವ ಮೂಲಕ ಜ್ಞಾನದೇಗುಲ ಅಪವಿತ್ರಗೊಳ್ಳದಂತೆ ಎಚ್ಚರವಹಿಸಬೇಕೆಂದರು.
ನಾವು ಓದುವಾಗ ವಾರಕ್ಕೆ ಓಮ್ಮೆ ಎಲ್ಲ ವಿದ್ಯಾರ್ಥಿಗಳನ್ನು ಸೇರಿಸಿ ಶಿಕ್ಷಕರು ಮಕ್ಕಳಲ್ಲಿ ನೈತಿಕತೆ ಹಾಗೂ ನೀತಿಯನ್ನು ತುಂಬುತ್ತಿದ್ದರು.ಈಗ ಪರಿಸ್ಥಿತಿ ಬದಲಾಗಿದೆ.ಹಾಗಂತ ನಿರಾಸೆ ಪಡುವ ಅಗತ್ಯವಿಲ್ಲ. ಆಸೆ,ನಿರೀಕ್ಷೆ,ವಿಶ್ವಾಸದಿಂದ ಕಾರ್ಯನಿರ್ವಹಿಸುವ ಮೂಲಕ ಬದಲಾವಣೆ ತರಲು ಪ್ರಯತ್ನಿಸಬೇಕಾಗಿದ್ದು, ನಮ್ಮ ಇಲಾಖೆಯಲ್ಲಿ ಸುಧಾರಣೆ ತರಲು ಇದೇ ರೀತಿಯ ಭರವಸೆ ಹೊಂದಿರುವುದಾಗಿ ಹೇಳಿದರು.
ವಿವರ ಕೇಳಿದ್ದೇನೆ: ಮಾಲೂರಿನ ಶಿಕ್ಷಕರೊಬ್ಬರು ಸಿನಿಮಾ ತಯಾರಿಸಿ ಅದು ವಿಫಲವಾದ ಬಳಿಕ ಮಕ್ಕಳಿಗೆ ತೋರಿಸಿ ಹಣ ಮಾಡಲು ಹೊರಟಿರುವ ವಿಚಾರವಾಗಿ ಕನ್ನಡಪ್ರಭದಲ್ಲಿ ಜ.31ರಂದು ಪ್ರಕಟವಾಗಿರುವ ವರದಿ ಬಗ್ಗೆ ಕೇಳಿದಾಗ, ಕೋಲಾರ ಡಿಡಿಪಿಐ ಅವರಿಂದ ವರದಿ ತರಿಸಿಕೊಂಡು ಪರಿಶೀಲನೆ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಉತ್ತರಿಸಿದರು.
ಎಸ್ಎಫ್.ಐ ಬುದ್ಧಿವಾದ: ಕೋಲಾರದ ಸರ್ಕಾರಿ ಪದವಿಪೂರ್ವ ಕಾಲೇಜಿನ ತರಗತಿಗಳಲ್ಲಿ ಕೆಲ ವಿದ್ಯಾರ್ಥಿಗಳು ತಿಳುವಳಿಕೆ ಇಲ್ಲದೆ ಗೋಡೆ ಮತ್ತು ಡೆಸ್ಕ್ಗಳ ಮೇಲೆ ಆಶ್ಲೀಲವಾಗಿ ಬರೆದಿರುವುದಕ್ಕೆ ಸಂಬಂಧಿಸಿದಂತೆ ಕನ್ನಡಪ್ರಭದಲ್ಲಿ ಪ್ರಕಟವಾದ ವರದಿ ನೋಡಿದ ನಂತರ ಕಾಲೇಜಿಗೆ ಹೋಗಿ ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಲಾಗಿದೆ.
ಈ ರೀತಿಯ ವರ್ತನೆಯಿಂದ ಕಾಲೇಜಿಗೆ, ಊರಿಗೆ ಕೆಟ್ಟ ಹೆಸರು ಬರುತ್ತದೆ, ಶಾಲಾ-ಕಾಲೇಜುಗಳ ತರಗತಿಯಲ್ಲಿ ವಿದ್ಯಾರ್ಥಿಗಳು ಬೇಕಾದರೆ ದೇಶಕ್ಕಾಗಿ ಹೋರಾಡಿದ ಮಹಾಪುರುಷರ ಸಂದೇಶಗಳನ್ನು ಬರೆದರೆ ಮುಂದಿನ ಪೀಳಿಗೆಗೆ ಒಳ್ಳೆಯದಾಗುತ್ತದೆ, ಇನ್ನು ಮುಂದೆ ನಮ್ಮ ಸಂಘಟನೆ ತರಗತಿಗಳ ಪಾವಿತ್ರ್ಯತೆ ಹಾಳಾಗಲು ಅವಕಾಶ ನೀಡುವುದಿಲ್ಲವೆಂದು ಎಸ್ಎಫ್ಐ ಮುಖಂಡರು ಭರವಸೆ ನೀಡಿದ್ದಾರೆ.
ಶಿಸ್ತು ಇದ್ದರೆ ಕಲಿಕೆ ಸಾಧ್ಯ: ವಿದ್ಯಾರ್ಥಿಗಳಲ್ಲಿ ಶಿಸ್ತು ಇದ್ದರೆ ಕಲಿಕೆಯ ಪ್ರಗತಿ ಹೆಚ್ಚುತ್ತದೆ, ಇದರಿಂದ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಗೂ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಜೆ.ಜಿ. ನಾಗರಾಜ್ ತಿಳಿಸಿದರು.
ಕಾಲೇಜಿನ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಬರೆದಿರುವ ಆಶ್ಲೀಲವಾದ ಬರಹಗಳಿಂದ ಕಾಲೇಜಿನ ಘನತೆಗೆ ಧಕ್ಕೆಯಾಗಿದೆ. ಈ ಕಾರಣದಿಂದ ನಾವಿಂದು ವಿದ್ಯಾರ್ಥಿಗಳನ್ನು ಸೇರಿಸಿ ಬುದ್ಧಿ ಹೇಳಿದ್ದೇನೆ, ಪತ್ರಿಕೆಯಲ್ಲಿ ಪ್ರಕಟವಾದ ವರದಿಯಿಂದ ಎಚ್ಚರಗೊಳ್ಳಲು ಅವಕಾಶವಾಗಿದೆ. ಮಕ್ಕಳ ಪೋಷಕರು ಸಹ ಈ ಬಗ್ಗೆ ಗಮನ ಹರಿಸಿ ಮನೆಯೇ ಮೊದಲ ಪಾಠಶಾಲೆಯನ್ನಾಗಿ ಮಾಡಿ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಬೇಕಾಗಿದೆ.