ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಡಾ.ಪರಮಶಿವಯ್ಯ ವರದಿ ಜಾರಿಯಾಗಲಿ

Rashmi Kasaragodu
Updated On : 2 Jul 2014, 1:33 am

ಕೆಜಿಎಫ್: ಬರಪೀಡಿತ ಪ್ರದೇಶಗಳಾದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಳೆದ ಹತ್ತಾರು ವರ್ಷಗಳಿಂದ ಮಳೆಯಿಲ್ಲದೆ ರೈತರು ಬೆಳೆಗಳನ್ನು ಬೆಳೆಯಲು ನೀರಿಲ್ಲದೆ ಹಾಗೂ ಜಾನುವಾರುಗಳಿಗೆ ಮೇವಿಲ್ಲದೆ ಪರದಾಡುವಂತಹ ಪರಿಸ್ಥಿತಿ ಉಂಟಾಗಿದ್ದರೂ ರಾಜ್ಯ ಸರ್ಕಾರ ಹಾಗೂ ಕ್ಷೇತ್ರದ ಜನಪ್ರತಿನಿಧಿಗಳು ಮಾತ್ರ ರೈತರ ಸಂಕಷ್ಟದ ಕಡೆ ಗಮನ ಹರಿಸುತ್ತಿಲ್ಲ.
 ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಪಾತಾಳಕ್ಕೆ ಹೋಗಿದ್ದು 1500 ಅಡಿಗಳು ಕೊಳವೆ ಬಾವಿಯನ್ನು ಕೊರೆಸಿದರೂ ಒಂದು ಇಂಚು ನೀರು ಸಹ ಸಿಗುತ್ತಿಲ್ಲ.  ಇಂತಹ ಪರಿಸ್ಥಿತಿಯಲ್ಲಿ ಅಲ್ಪಸ್ವಲ್ಪ ನೀರನ್ನು ನಂಬಿಕೊಂಡು ರೈತರು ಬೆಳೆಯುವ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ರೈತರಿಗೆ ಬೆಳೆಗಳು ನಷ್ಟವಾದರೆ ಸರ್ಕಾರದ ವತಿಯಿಂದ ಯಾವುದೇ ಸಬ್ಸಿಡಿಗಳು ಸಿಗದ ಕಾರಣ ಸಾಲಬಾಧೆ ತಾಳಲಾರದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ಎದುರಾಗಿದೆ.
ವಿದ್ಯುತ್ ಕೊರತೆ: ಹತ್ತಾರು ಎಕರೆ ಜಮೀನುನಲ್ಲಿ ತರಕಾರಿ ಬೆಳೆಗಳು ಹಾಗೂ ಆಹಾರ ಬೆಳಗಳಾದ ರಾಗಿ, ಜೋಳ, ಬತ್ತ, ತೊಗರಿ, ಆಲುಗಡ್ಡೆ, ಈರುಲ್ಲಿ ಮುಂತಾದ ಬೆಳೆಗಳನ್ನು ಬೆಳೆದು ಈ ದೇಶಕ್ಕೆ ಹಾಗೂ ರಾಜ್ಯಕ್ಕೆ ಅನ್ನ ನೀಡುತ್ತಿದ್ದ ರೈತರಿಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಳೆದ 10 ವರ್ಷಗಳಿಂದ ಮಳೆಯಿಲ್ಲದೆ, ಅಂತರ್ಜಲಮಟ್ಟ ಕುಸಿದಿದ್ದು, ಬೆಸ್ಕಾಂ ಇಲಾಖೆಯವರು ಕೃಷಿಗೆ ಸರಿಯಾದ ವಿದ್ಯುತ್ ಸರಬರಾಜು ಪೂರೈಸುತ್ತಿಲ್ಲ. ರೈತರು ಮಳೆಯನ್ನು ನಂಭಿಕೊಂಡು ತರಕಾರಿಗಳು ಹಾಗೂ ಆಹಾರ ಧಾನ್ಯ ಬೆಳೆಯುತ್ತಿದ್ದದ್ದನ್ನು ಬಿಟ್ಟು ತಮ್ಮ ಸಂಸಾರವನ್ನು ಸಾಗಿಸಲು ಇದೀಗ ತಾತ್ಕಾಲಿಕ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ. ಬೆಳೆಯಿಲ್ಲದೆ ಜಾನುವಾರುಗಳನ್ನು ಸಂತೆಗಳಲ್ಲಿ ಮಾರಾಟ ಮಾಡಿ ಹಳ್ಳಿಗಳನ್ನು ತೊರೆದು ವಲಸೆ ಹೋಗುತ್ತಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ: ಈ ಹಿನ್ನೆಲೆಯಲ್ಲಿ ಬಂಗಾರಪೇಟೆ ತಾಲೂಕಿನ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ರೈತರು ಯಾವ ಬೆಳೆಗಳು ಬೆಳೆಯಬೇಕು, ಅವುಗಳಿಗೆ  ಯಾವ ಔಷಧ ನೀಡಬೇಕು, ಯಾವ ಗೊಬ್ಬರಗಳನ್ನು  ಹಾಕಬೇಕು ಎಂಬುದರ ಬಗ್ಗೆ ಮಾಹಿತಿಗಳನ್ನು ನೀಡುವುದಾಗಲೀ ಅಥವಾ ರೈತರ ಬೆಳೆಗಳಿಗೆ ಭೇಟಿ ನೀಡಿ ಪರಿಶೀಲಿಸುವುದಾಗಲೀ ಮಾಡುತ್ತಿಲ್ಲ ಎಂಬುದು ಅನ್ನದಾತರ ಆರೋಪವಾಗಿದೆ.  
 ಇನ್ನಾದರೂ ಸರ್ಕಾರ ಬರಪೀಡಿತ ಪ್ರದೇಶಗಳಾದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಬಗ್ಗೆ ಗಮನ ಹರಿಸಿ ಇಲ್ಲಿನ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಡಾ.ಪರಮಶಿವಯ್ಯ ವರದಿ ಜಾರಿಗೊಳಿಸಿ ಶಾಶ್ವತ ನೀರಾವರಿ ಯೋಜನೆಗೆ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂಬುದು ರೈತರ, ಯುವಕರ, ವಿದ್ಯಾರ್ಥಿಗಳ, ಜನಸಾಮಾನ್ಯರ ಬೇಡಿಕೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement