ಪಡಿತರ ಚೀಟಿ ನವೀಕರಣಕ್ಕೆ ಅವಕಾಶ
ಚಿಕ್ಕಬಳ್ಳಾಪುರ: ನಕಲಿ ಪಡಿತರ ಚೀಟಿಗೆ ಕಡಿವಾಣ ಹಾಕಿ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ನೀಡಲು ಆಹಾರ, ನಾಗರಿಕ ಸರಬರಾಜು ಇಲಾಖೆ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. 2010 ಕ್ಕಿಂತಲೂ ಹಿಂದಿನ ಕಾಯಂ ಪಡಿತರ ಚೀಟಿಗಳನ್ನು ನವೀಕರಿಸಲು ಹಾಗೂ ಚಾಲ್ತಿಯಲ್ಲಿರುವ ಎಲ್ಲಾ ಪಡಿತರ ಚೀಟಿ ಹೊಂದಿರುವವರು ಚೀಟಿಗಳಲ್ಲಿರುವ ಕುಟುಂಬದ ಎಲ್ಲಾ 21 ವರ್ಷ ಮೇಲ್ಪಟ್ಟ ಸದಸ್ಯರ ಚುನಾವಣಾ ಗುರುತಿನ ಚೀಟಿ ಸಂಖ್ಯೆ ಮತ್ತು ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಸಂಖ್ಯೆ ನೀಡಲು ಈಗಾಗಲೇ ತಿಳಿಸಲಾಗಿದೆ. ಈವರೆಗೆ ಸಂಖ್ಯೆ ಮಾಹಿತಿ ನೀಡದೆ ಇರುವ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಗಳನ್ನು ನವೀಕರಿಸಿಕೊಳ್ಳಬೇಕಾಗಿದೆ. ಈ ಮಾಹಿತಿಯನ್ನು ಎಸ್ ಎಂಎಸ್ ಮುಖಾಂತರ ಅಥವಾ ಮೊಬೈಲ್ ಇಲ್ಲದವರು ನೇರವಾಗಿ ಸಂಬಂಧಿಸಿದ ಗ್ರಾಪಂಗಳ ಅಟಲ್ ಜನಸ್ನೇಹಿ ಕೇಂದ್ರ ಹಾಗೂ ಪಟ್ಟಣ ಪ್ರದೇಶದ ಕಾರ್ಡುದಾರರು ಸೇವಾ ಕೇಂದ್ರಗಳಲ್ಲಿ ಮಾಹಿತಿ ಸಲ್ಲಿಸಬೇಕಾಗಿದೆ. 2010 ಕ್ಕಿಂತಲೂ ಹಿಂದೆ ಪಡಿತರ ಚೀಟಿ ಹೊಂದಿರುವ ಕಾರ್ಡುದಾರರು ಅವರ ಕಾರ್ಡುಗಳನ್ನು ನವೀಕರಿಸಿಕೊಳ್ಳಲು ಜೂ.30 ರವರೆಗೆ ಅವಕಾಶ ಒದಗಿಸಲಾಗಿತ್ತು. ಆದರೆ ಇನ್ನೂ ಕೆಲವು ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಗಳನ್ನು ನವೀಕರಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಪಡಿತರ ಚೀಟಿಗಳನ್ನು ನವೀಕರಿಸಿಕೊಳ್ಳಲು ಜು.15 ಕೊನೆಯ ದಿನವಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.