ಪ್ರತಿ ಕೆಜಿಗೆ ಮೀನನ್ನು 50ಗೆ ಖರೀದಿಸಿದರು!
ತುರುವೇಕೆರೆ: ತಾಲೂಕಿನ ಸಾರಿಗೇಹಳ್ಳಿ ಕೆರೆಯಲ್ಲಿ ಮೀನು ಸಂತಾನೋತ್ಪತ್ತಿ ವೇಳೆ ಮೀನನ್ನು ಹಿಡಿಯಬಾರದು ಎಂಬ ಆದೇಶವಿದ್ದರೂ ಆದೇಶವನ್ನು ಧಿಕ್ಕರಿಸಿ ಮೀನು ಹಿಡಿಯಲಾಗುತ್ತಿದೆ ಎಂದು ಆಪಾದಿಸಿದ ಗ್ರಾಹಕರು ಕೆರೆಯ ಬಳಿಯೇ ಜಮಾಯಿಸಿ ಕಡಿಮೆ ಬೆಲೆಗೆ ಮೀನು ಖರೀದಿಸಿದ ಘಟನೆ ನಡೆದಿದೆ. ಸಾರಿಗೇಹಳ್ಳಿ ಕೆರೆಯಲ್ಲಿ ಬಿಡಲಾಗಿದ್ದ ಮೀನುಗಳನ್ನು ಈ ಹಿಂದೆ ಗುತ್ತಿಗೆ ಪಡೆದಿದ್ದವರು ಹಿಡಿಯುತ್ತಿದ್ದರು. ಇದನ್ನು ಗಮನಿಸಿದ ಕೆಲವರು ಮೀನು ಹಿಡಿಯುವುದನ್ನು ಆಕ್ಷೇಪಿಸಿದರಲ್ಲದೇ ಕೆರೆಯಲ್ಲಿ ಹಿಡಿದಿರುವ ಮೀನನ್ನು ಕೆರೆಯ ಒಳಗೇ ಬಿಡಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ಗುತ್ತಿಗೆ ಪಡೆದಿದ್ದ ವ್ಯಕ್ತಿ ತಾನು ಹರಾಜಿನಲ್ಲಿ ಪಡೆದುಕೊಂಡಿರುವುದಾಗಿಯೂ ತಮಗೆ ನೀಡಿರುವ ಅವಧಿ ಇನ್ನೂ ಇರುವುದರಿಂದ ಹಿಡಿದೇ ತೀರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಇದೇ ವೇಳೆ ಕೆರೆಯಲ್ಲಿ ಭಾರಿ ಗಾತ್ರದ ಹಾಗೂ ಉತ್ತಮ ತಳಿಯ ಮೀನುಗಳು ಬಲೆಯೊಳಗೆ ಬಿದ್ದಿದ್ದವು ಎಂದು ಹೇಳಲಾಗಿದೆ. ಭಾರಿ ಗಾತ್ರದ ಮೀನುಗಳನ್ನು ಪಟ್ಟಣಕ್ಕೆ ತಂದು ಹೆಚ್ಚು ಬೆಲೆಗೆ ಮಾರಲು ಗುತ್ತಿಗೆ ಪಡೆದವರು ತಯಾರಿ ನಡೆಸಿದ್ದರು.