ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಧರಣಿ
ಕೆಜಿಎಫ್: ಇಲ್ಲಿಯ ಸಾರ್ವಜನಿಕ ಆಸ್ಪತ್ರೆಗೆ ವೈದ್ಯರನ್ನು ನೇಮಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ನಗರ ಘಟಕ ವತಿಯಿಂದ ಆಸ್ಪತ್ರೆ ಮುಂಭಾಗ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಎ.ಚಂದರ್, ಬಿಜಿಎಂಎಲ್ ಚಿನ್ನದ ಗಣಿಗಳು ಕಾರ್ಯನಿರ್ವಹಿಸುತ್ತಿದ್ದಾಗ ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಗೆ ಕೆಜಿಎಫ್ ನಗರ, ಚಿನ್ನದ ಗಣಿ ಕಾರ್ಮಿಕರ ಕುಟುಂಬ ವರ್ಗ ಮತ್ತು ಸುತ್ತಮುತ್ತಲಿನ 210 ಗ್ರಾಮಸ್ಥರು ಚಿಕಿತ್ಸೆಗಾಗಿ ಬರುತ್ತಿದ್ದರು. ಆಗ ಇಲ್ಲಿ ಚಿಕಿತ್ಸೆ ನೀಡಲು 18 ರಿಂದ 20 ವೈದ್ಯರು ಕಾರ್ಯನಿರ್ವಹಿಸುತ್ತಿದ್ದರು ಎಂದರು.
ಜಾನುವಾರುಗಳ ವಾಸಸ್ಥಾನ: ಆದರೆ ಈಗ ಆಸ್ಪತ್ರೆಯ ವ್ಯವಸ್ಥೆ ತೀರಾ ಹದೆಗೆಟ್ಟಿದ್ದು ರೋಗಿಗಳಿಗೆ ಮೂಲಭೂತ ಸೌಕರ್ಯವಿಲ್ಲ, ಭದ್ರತೆಯಿಲ್ಲ. ಆಸ್ಪತ್ರೆಯಲ್ಲಿ ಈಗ ಕೇವಲ 4 ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ರೋಗಿಗಳು ಇಲ್ಲದೆ ಬೆಡ್ಗಳು ಖಾಲಿ ಖಾಲಿ. ಕೊಠಡಿಗೆ ಬೀಗ ಹಾಕುತ್ತಿದ್ದು, ಆಸ್ಪತ್ರೆ ಜಾನುವಾರುಗಳು, ಬೀದಿ ನಾಯಿಗಳ ವಾಸಸ್ಥಳವಾಗಿ ಪರಿವರ್ತನೆಗೊಂಡಿದೆ.
ಆದರೆ ವೋಟಿಗಾಗಿ ಜನರ ಮುಂದೆ ಇಲ್ಲಸಲ್ಲದ ಆಶ್ವಾಸನೆಗಳನ್ನು ಮತಗಳನ್ನು ಪಡೆದು ಗೆದ್ದ ನಂತರ ಇತ್ತ ತಿರುಗಿಯೂ ನೋಡದ ಆರೋಗ್ಯ ಸಚಿವ ಯು.ಟಿ.ಖಾದರ್, ಲೋಕಸಭಾ ಸದಸ್ಯ ಕೆ.ಹೆಚ್.ಮುನಿಯಪ್ಪ ಹಾಗೂ ಕ್ಷೇತ್ರದ ಶಾಸಕಿ ವೈ.ರಾಮಕ್ಕ ಅವರುಗಳ ವಿರುದ್ದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.
ಸೌಲಭ್ಯ ಕಲ್ಪಿಸಲು ಆಗ್ರಹ: ಈ ಕೂಡಲೇ ಅಗತ್ಯವಿರುವ ವೈದ್ಯರನ್ನು ನೇಮಿಸಬೇಕು, ಆಸ್ಪತ್ರೆಗೆ ಮೂಲಭೂತ ಸೌಕರ್ಯ ಒದಗಿಸಬೇಕು, ರೋಗಿಗಳಿಗ ಬಳಿ ಲಂಚವನ್ನು ಕಿತ್ತು ತಿನ್ನುವ ವೈದ್ಯರು ಹಾಗೂ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಬೀಗ ಜಡಿದು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಧರಣಿಯಲ್ಲಿ ತಾಲೂಕು ಅಧ್ಯಕ್ಷ ಎಂ.ಶಶಿಧರ್, ನಗರಾಧ್ಯಕ್ಷ ಸೈಯದ್ ಅಸ್ಲಂ, ತಾಲೂಕು ಪ್ರಧಾನ ಕಾರ್ಯದರ್ಶಿ ಆನಂದಾಚಾರಿ, ಕುಮಾರ್, ಇರ್ಫಾನುಲ್ಲಾ, ಸುಂದರಾಜನ್, ಜಯಕುಮಾರ್, ಬಾಬು, ವಿಜಯಕುಮಾರ್, ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.