10ರಿಂದ ಸಂಗೀತೋತ್ಸವ
ಚಿಂತಾಮಣಿ: ಗುರು ಪೌರ್ಣಿಮೆ ವಿಶೇಷವಾಗಿ ಗುರುಪೂಜಾ ಮತ್ತು ಸಂಗೀತೋತ್ಸವವನ್ನು ಕೈವಾರದಲ್ಲಿ ಜು. 10ರಿಂದ ಮೂರು ದಿನ ಶ್ರದ್ಧಾಭಕ್ತಿಗಳಿಂದ ಮತ್ತು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಕೈವಾರ ಶ್ರೀ ಯೋಗಿ ನಾರೆಯಣ ಮಠದ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್ ತಿಳಿಸಿದ್ದಾರೆ. ಚಿಂತಾಮಣಿಯ ಪ್ರಸಿದ್ಧ ಶ್ರೀಕ್ಷೇತ್ರ ಕೈವಾರ ಗ್ರಾಮದಲ್ಲಿ ನೆಲೆಸಿರುವ ಯೋಗಿನಾರೇಯಣ ಮಠದಲ್ಲಿ ಜು.10 ಗುರುವಾರ ಬೆಳಿಗ್ಗೆ 6 ಗಂಟೆಗೆ ಸಂಗೀತೋತ್ಸವ ಆರಂಭವಾಗುತ್ತದೆ. ಅಂದು ಸಂಜೆ 5 ಗಂಟೆಗೆ ವಿಶೇಷ ಕಾರ್ಯಕ್ರಮಗಳಲ್ಲಿ ಚೆನ್ನೈನ ಚಿನ್ಮಯಾ ಸಿಸ್ಟರ್ಸ್ ಅವರಿಂದ ಗಾಯನ, ಚೆನ್ನೈ ಎ. ಕನ್ಯಾಕುಮಾರಿ ಪಿಟೀಲು ಸೋಲೋ, ಚೆನ್ನೈನ ಸಿಕ್ಕಿಲ್ ಗುರುಚರಣ್ ಗಾಯನ, ಬೆಂಗಳೂರು ರುದ್ರಪಟ್ನಂ ಎಸ್. ರಮಾಕಾಂತ್ ಗಾಯನ, ತುಮಕೂರು ಸಾಗರ್ ತಂಡದವರಿಂದ ಭರತನಾಟ್ಯ ಕಾರ್ಯಕ್ರಮಗಳಿರುತ್ತದೆ. ಇವರೊಂದಿಗೆ ಬೆಂಗಳೂರು ಸಿ.ಎನ್. ಚಂದ್ರಶೇಖರ್, ಚೆನ್ನೈನ ಶ್ರೀಮುಷ್ಣಂ ರಾಜರಾವ್, ತಿರುವಾರೂರು ಭಕ್ತವತ್ಸಲಂ, ವೈಕಂ ಗೋಪಾಲ ಕೃಷ್ಣ ಅವರು ಪಕ್ಕವಾದ್ಯಗಳಲ್ಲಿ ಭಾಗವಹಿಸುತ್ತಾರೆ.
ಸಂಗೀತ ಸಮರ್ಪಣೆ: ಜು. 11ಶುಕ್ರವಾರ ಚೆನ್ನೈನ ಎನ್.ವಿಶ್ವೇಶ್ವರ್ ಕೊಳಲು ವಾದನ, ಮನೋಜ್, ಅನನ್ಯ ಭಾರ್ಗವ, ವೆನ್ನಲಕಂಟಿ ಅಪರ್ಣ ಕೃಷ್ಣಕುಮಾರ್, ಪವನ್ ದೀಪ್, ಪಟ್ಟಾಭಿರಾಮ ಪಂಡಿತ್, ಸುಕನ್ಯಾ ಪ್ರಭಾಕರ್, ಅದಿತಿ ಪ್ರಹ್ಲಾದ್ ಅವರಿಂದ ಸಂಗೀತ ಸಮರ್ಪಣೆ ನಡೆಯಲಿದೆ. ಅಂದು ಸಂಜೆ ವಿಶೇಷ ಕಾರ್ಯಕ್ರಮದಲ್ಲಿ ಚೆನ್ನೈನ ಪ್ರಿಯಾ ಸಿಸ್ಟರ್ಸ್ ಗಾಯನ, ಬಾಲಸಾಯಿ ಚೆನ್ನೈ ಕೊಳಲು, ಯು.ಪಿ. ರಾಜು ಮ್ಯಾಂಡೋಲಿನ್ ವಾದನ, ಚೆನ್ನೈನ ಸುಧಾ ರಘುನಾಥನ್ ಗಾಯನ, ಡಾ. ಕದ್ರಿಗೋಪಾಲನಾಥನ್ ಸ್ಯಾಕ್ಸೋಪೋನ್, ನೂಪುರ ಫೈನ್ ಆರ್ಟ್ಸ್ ಅಕಾಡೆಮಿಯಿಂದ ಭರತನಾಟ್ಯ, ರಾತ್ರಿ ಎಂ.ಎಸ್.ಕೆ. ಶಂಕರ ನಾರಾಯಣ್, ಟಿ.ಆರ್. ಗೋವಿಂದ ರಾಜನ್ ತಂಡದವರಿಂದ ನಾದಸ್ವರ ವಾದನವಿರುತ್ತದೆ. ಜುಲೈ 12ಶನಿವಾರ ಗುರುಪೌರ್ಣಿಮೆ ದಿನದಂದು ಬೆಳಿಗ್ಗೆ 10.30ಕ್ಕೆ ಯೋಗಿ ನಾರೇಯಣ ತಾತಯ್ಯನವರ ಗುರುಪೂಜೆ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುವುದು.
ಗಾಯನ: ಬೆಂಗಳೂರಿನ ಬಿ.ಕೆ. ಚಂದ್ರಮೌಳಿ ನೇತೃತ್ವದಲ್ಲಿ ತಾಳವಾದ್ಯ ಕಚೇರಿ, ಡಾ. ಸುಮಾ ಸುಧೀಂದ್ರ ತಂಡದಿಂದ ವೀಣಾ ವಾದನ, ಎಂ.ಎಸ್. ವಿದ್ಯಾ, ವಿನಯ್ ಶರ್ವ ಗಾಯನ, ತಿರುಪತಿ ರಘುನಾಥ್, ಮೈಸೂರು ಚಂದನ್ ಕುಮಾರ್ ಕಾರ್ಯಕ್ರಮವಿರುತ್ತದೆ. ಸಂಜೆ ವಿಶೇಷ ಕಾರ್ಯಕ್ರಮದಲ್ಲಿ ದೆಹಲಿ ಸರಸ್ವತಿ ರಾಜಗೋಪಾಲನ್ರಿಂದ ವೀಣಾವಾದನ, ಬೆಂಗಳೂರಿನ ಆರ್.ಕೆ. ಪದ್ಮನಾಭ್, ನಾಗವಲ್ಲಿ ನಾಗರಾಜ್ ಗಾಯನ, ರುದ್ರಪಟ್ನಂ ಸಹೋದರರಿಂದ ಗಾಯನ, ಚೇತನಾ ನಾಟ್ಯಾನಿಕೇತನ್ ಬೆಂಗಳೂರು ಅವರಿಂದ ಭರತನಾಟ್ಯ ಕಾರ್ಯಕ್ರಮವಿರುತ್ತದೆ. ಮೂರು ದಿನಗಳಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕಲಾವಿದರಿಂದ ನಿರಂತರ 72 ಗಂಟೆಗಳ ಕಾಲ ಸಂಗೀತ ಕಚೇರಿ, ನಾದಸ್ವರ-ತಬಲ ವಾದನ, ಭರತನಾಟ್ಯ, ಹರಿಕಥೆ, ಬುರ್ರಕಥೆ ಕಾರ್ಯಕ್ರಮಗಳಿರುತ್ತದೆ.
ಪೊಲೀಸ್ ವೆಬ್ಸೈಟ್ ಆರಂಭ
ಕೆಜಿಎಫ್: ಕೆಜಿಎಫ್ ಪೊಲೀಸ್ ಜಿಲ್ಲೆಯ ಅಪರಾಧಗಳ ಬಗ್ಗೆ, ಪೊಲೀಸ್ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಆಗ್ಗಿಂದಾಗ್ಗೆ ಮಾಹಿತಿ ತಿಳಿದುಕೊಳ್ಳಲು ಕೆಜಿಎಫ್ ಜಿಲ್ಲಾ ಪೊಲೀಸ್ ವತಿಯಿಂದ ಪತ್ರಿಕಾ ಮಾಧ್ಯಮಗಳ ಅನುಕೂಲಕ್ಕಾಗಿ ಪೊಲೀಸ್ ಬ್ಲಾಕ್ ವರ್ಡ್ಪ್ರಸ್ ಡಾಟ್ ಕಾಂ ವೆಬ್ಸೈಟ್ ಹಾಗೂ ಫೇಸ್ಬುಕ್ನ್ನು ಪ್ರಾರಂಭಿಸಲಾಗಿದೆಯೆಂದು ಜಿಲ್ಲಾ ರಕ್ಷಣಾಧಿಕಾರಿ ಅಜಯ್ ಹಿಲೋರಿ ಅವರು ತಿಳಿಸಿದ್ದಾರೆ. ಅದೇ ರೀತಿ ಪೊಲೀಸ್ ಬ್ಲಾಗ್ ವೆಬ್ಸೈಟ್ ಪೊಲೀಸ್ನ್ಯೂಸ್ ಕೆಜಿಎಫ್.ವರ್ಡ್ಪ್ರೆಸ್.ಕಾಂ ಹಾಗೂ ಫೇಸ್ಬುಕ್ನಲ್ಲಿ ಕೆಜಿಎಫ್ಪೊಲೀಸ್ ಡಿಸ್ಟ್ರಿಕ್ಟ್ ಲಾಗಿನ್ ಆಗಿ ಮಾಹಿತಿಯನ್ನು ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.