ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಂಗವಿಕಲರಿಗೆ ಸೌಲಭ್ಯ

Rashmi Kasaragodu
Updated On : 3 Jul 2014, 1:39 am

ಕೊರಟಗೆರೆ: ತಾಲೂಕಿನ ಎಲ್ಲ ವಿಕಲಚೇತನ ಮಕ್ಕಳಿಗೆ ಸರ್ಕಾರದ ಸವಲತ್ತುಗಳನ್ನು ಅಧಿಕಾರಿಗಳೊಂದಿಗೆ ಮನೆ ಬಾಗಿಲಿಗೆ ತಲುಪಿಸುವುದಾಗಿ ಶಾಸಕ ಪಿ.ಆರ್. ಸುಧಾಕರಲಾಲ್ ತಿಳಿಸಿದರು. ತಾಲೂಕಿನ ಲಿಂಗದವೀರನಹಳ್ಳಿ ಗ್ರಾಮದ ಅಂಗವಿಕಲರ ಮನೆಗೆ ಭೇಟಿ ನೀಡಿ ಶೇ.3 ರ ಅನುದಾನದಲ್ಲಿ ಅಂಗವಿಕಲ ವಗುವಿಗೆ ಸರ್ವಶಿಕ್ಷಣ ಅಭಿಯಾನ ವತಿಯಿಂದ ತ್ರಿಚಕ್ರ ವಾಹನ ವಿತರಿಸಿ ಮಾತನಾಡಿ, ಶಿಕ್ಷಣ ಇಲಾಖೆ ಮೂಲಕ ವಿಕಲಚೇತನ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣೆ ಮಾಡಿಸುವುದರೊಂದಿಗೆ ಮುಂದಿನ ದಿನಗಳಲ್ಲಿ ಸೌಲಭ್ಯದಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ಧನಂಜಯ ಪಾಟೀಲ್, ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ, ಮಂಜುನಾಥ್, ಚಿಕ್ಕಪ್ಪಯ್ಯ, ದಾಸಪ್ಪ ಇದ್ದರು.


ಜನರ ಸೇವೆ ಮಾಡಲು ವೈದ್ಯ ವೃತ್ತಿ ಉತ್ತಮ ಅವಕಾಶ
ಗೌರಿಬಿದನೂರು: ವೈದ್ಯ ವೃತ್ತಿ ಜನರ ಸೇವೆ ಮಾಡಲು ಉತ್ತಮ ಅವಕಾಶವಾಗಿದೆ ಎಂದು ಲಯನ್ ಸಂಸ್ಥೆಯ ಅಧ್ಯಕ್ಷ ಡಾ. ಗುಂಡೂರಾವ್ ತಿಳಿಸಿದರು. ವೈದ್ಯರ ದಿನಾಚರಣೆ ಅಂಗವಾಗಿ ಸರ್ಕಾರಿ ಹಾಗು ಖಾಸಗಿ ವೈದ್ಯರನ್ನು ಅಭಿನಂದಿಸಿ ಮಾತನಾಡಿ, ಪಶ್ಚಿಮ ಬಂಗಾಳದ ಖ್ಯಾತ ವೈದ್ಯರಾದ ಬಿ.ಸಿ. ರಾಮ್ ಅವರು ಜನಿಸಿದ ದಿನವನ್ನು ವೈದ್ಯರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಶ್ಯಾಂಸುಂದರ್, ಡಾ. ತೇಜೋವತಿ, ಡಾ. ದೀಪಾರೆಡ್ಡಿ ಅವರನ್ನು ಅಭಿನಂದಿಸಿದ ಲಯನ್ ತಂಡ ಮಾನಸ ಆಸ್ಪತ್ರೆಗೆ ತೆರಳಿ ಡಾ. ಶಶಿಧರ್ ಹಾಗೂ ಡಾ. ರತ್ನಾ ಶಶಿಧರ್‌ರನ್ನು ಅಭಿನಂದಿಸಿದರು.
ಡೊನೇಷನ್ ವಿರುದ್ಧ ರೈತಸಂಘದ ಪ್ರತಿಭಟನೆ
ಕೋಲಾರ: ಜಿಲ್ಲೆಯಲ್ಲಿ ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ತಡೆಯಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆಂದು ಆರೋಪಿಸಿ ರೈತ ಸಂಘದಿಂದ ಮಂಗಳವಾರ ಡಿಡಿಪಿಐ ಕಚೇರಿ ಮುಂದೆ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು. ಖಾಸಗಿ ಶಾಲಾ ಆಡಳಿತ ಮಂಡಳಿಯವರು ಡೊನೇಷನ್ ವಸೂಲಿ ಮೂಲಕ ಬಡ ಪ್ರತಿಭಾವಂತ ಮಕ್ಕಳಿಗೆ ಶಿಕ್ಷಣ ಸಿಗದಂತೆ ಮಾಡುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದರೂ ಡಿಡಿಪಿಐ ಹಾಗೂ ಬಿಇಒಗಳು ಕ್ರಮ ಕೈಗೊಳ್ಳುತ್ತಿಲ್ಲವೆಂದು ರೈತ ಸಂಘದ ಮುಖಂಡರು ಆರೋಪಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿಡಿಪಿಐ ಪದ್ಮನಾಭ್ ಈಗಾಗಲೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶುಲ್ಕಗಳನ್ನು ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸುವಂತೆ ಸೂಚಿಸಲಾಗಿದೆ. ಮೂಲಭೂತ ಸೌಕರ್ಯಗಳ ಬಗ್ಗೆಯೂ ಮುಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗುವುದು ಎಂದು ಹೇಳಿದರು.  ಮುಖಂಡರಾದ ಶ್ರೀನಿವಾಸಗೌಡ, ನಾರಾಯಣಗೌಡ, ಹುಲ್ಕೂರು ಹರಿಕುಮಾರ್, ನಾರಾಯಣರೆಡ್ಡಿ, ಶಿವಾರೆಡ್ಡಿ, ಹೂವಳ್ಳಿ ನಾಗರಾಜ್, ವೆಂಕಟೇಶ್, ಮುನೇಗೌಡ, ಮಂಜುನಾಥ್, ರಂಜೀತ್, ರಮೇಶ್, ವೆಂಕಟಸ್ವಾಮಿಗೌಡ ಇದ್ದರು.
ಕ್ರಷರ್ ಅನುಮತಿಗೆ ವಿರೋಧ
ಕೋಲಾರ: ಜಲ್ಲಿ ಕ್ರಷರ್‌ಗಳನ್ನು ಸ್ಥಾಪಿಸುವುದಕ್ಕೆ ಅನುಮತಿ ನೀಡುವ ಮೂಲಕ ರಾಜ್ಯ ಸರ್ಕಾರ ಜನ-ಜಾನುವಾರುಗಳ ಗುಳೆಗೆ ಪ್ರೇರಣೆ ನೀಡುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಬಳಿಯಿಂದ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಕೋಲಾರ ತಾಲೂಕಿನ ಗ್ರಾಮಸ್ಥರು ತಾಲೂಕಿನಲ್ಲಿ ಸುಮಾರು 20ಕ್ಕೂ ಹೆಚ್ಚು ಕ್ರಷರ್‌ಗಳ ಸ್ಥಾಪನೆಗೆ ಅನುಮತಿ ನೀಡುವ ಮೂಲಕ ಜಿಲ್ಲಾ ಆಡಳಿತ ಗ್ರಾಮೀಣ ಜನತೆ ಊರು ಬಿಟ್ಟು ಹೋಗುವಂತೆ ಮಾಡುತ್ತಿದೆ ಎಂದು ದೂರಿದರು. ಗ್ರಾಮೀಣ ಜನರ ಬದುಕಿಗೆ ಮಾರಕವಾಗಿರುವ ಸೇಫರ್ ಝೋನ್‌ನ್ ಎಂಬ ಅವೈಜ್ಞಾನಿಕ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಗೋಪಾಲಕೃಷ್ಣ, ಗೋಪಾಲ್, ಮಂಜುನಾಥ್, ನಾರಾಯಣಸ್ವಾಮಿ, ನಸೀರ್, ಕೃಷ್ಣಪ್ಪ, ನರಸಿಂಹರಾಜು, ರಮೇಶ್ ಮೊದಲಾದವರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement