ಕಂದಾಯ ಕಟ್ಟಿ, ಸೌಲಭ್ಯ ಮಾತ್ರ ಕೇಳಬೇಡಿ!
ಬಾಗೇಪಲ್ಲಿ: ತಾಲೂಕಿನ ಘಂಟಂವಾರಿಪಲ್ಲಿ ಗ್ರಾಪಂ ವ್ಯಾಪ್ತಿಯ ಪಾತಬಾಗೇಪಲ್ಲಿ ಗ್ರಾಮ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ.
ಸುಮಾರು 300 ಮನೆಗಳಿರುವ ಪುಟ್ಟ ಗ್ರಾಮ ಪಾತಬಾಗೇಪಲ್ಲಿ. ಈ ಗ್ರಾಮದಲ್ಲಿ ಸರಿಯಾಗಿ ರಸ್ತೆ, ಬೀದಿ ದೀಪದ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಗ್ರಾಪಂ ಅಧಿಕಾರಿಗಳು ವಿಫಲರಾಗಿದ್ದಾರೆ. ಇಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆದು ಅನೇಕ ವರ್ಷಗಳಾಗಿವೆ.
ಕುಡಿಯುವ ನೀರಿನ ಮುಖ್ಯ ಪೈಪ್‌ಗಳನ್ನು ಚರಂಡಿಗಳಲ್ಲಿಯೇ ಅಳವಡಿಸಿ ಸರಬರಾಜು ಮಾಡುವ ಮೂಲಕ ಗ್ರಾಮಸ್ಥರಿಗೆ ಅಧಿಕಾರಿಗಳು ಕೊಳಚೆಯ ನೀರನ್ನು ಕುಡಿಸುತ್ತಿದ್ದಾರೆ. ಗ್ರಾಪಂ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಮನೆ, ನೀರು ಸೇರಿದಂತೆ ಜಮೀನುಗಳಿಗೆ ಕಂದಾಯ ವಸೂಲಿ ಮಾಡುವ ಗ್ರಾಪಂ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ಬೀದಿ ದೀಪದ ವ್ಯವಸ್ಥೆ ಕಲ್ಪಿಸುವ ಬಗ್ಗೆ ಯೋಚನೆಯೇ ಇಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿನ ಚರಂಡಿ ಮತ್ತು ರಸ್ತೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕಾಗಿರುವ ಗ್ರಾಪಂ ಅಧಿಕಾರಿಗಳು ನಮಗೂ ಗ್ರಾಮಕ್ಕೂ ಯಾವುದೇ ರೀತಿಯ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.
ಹಾರಿಕೆ ಉತ್ತರ ಕೊಡುವ ಅಧಿಕಾರಿಗಳು: ನಮ್ಮ ಗ್ರಾಮಗಳಲ್ಲಿನ ರಸ್ತೆ ಮತ್ತು ಚರಂಡಿಗಳಲ್ಲಿ ಸ್ವಚ್ಛತೆ ಕಾಪಾಡಲು ಪೌರ ಕಾರ್ಮಿಕರಿಲ್ಲ. ನಾವು ಕೂಲಿ ಕೊಟ್ಟು 6 ತಿಂಗಳಿಗೊಮ್ಮೆ ಕ್ಲೀನ್ ಮಾಡಿಸುತ್ತೇವೆ. ಆದರೆ, ಈ ಕೆಲಸ ಮಾಡಲು ಆಗುವುದಿಲ್ಲ. ನೀವೇ ಸ್ವಚ್ಛತೆ ಕಾಪಾಡಿಕೊಳ್ಳಿ ಇಲ್ಲ ಹೊಂದಾಣಿಕೆ ಮಾಡಿಕೊಳ್ಳಿ, ಎಲ್ಲವನ್ನು ಗ್ರಾಪಂ ವತಿಯಿಂದಲೇ ಮಾಡಲು ಸಾಧ್ಯವಿಲ್ಲ ಹಾಗೂ ಹೊಸದಾಗಿ ಚರಂಡಿಗಳನ್ನು ನಿರ್ಮಿಸಲು ಹಾಗೂ ಕುಡಿಯುವ ನೀರಿನ ಪೈಪ್‌ಗಳನ್ನು ಅಳವಡಿಸಲು ನಮ್ಮಲ್ಲಿ ಸಾಕಷ್ಟು ಹಣ ಇಲ್ಲ ಎಂದು ಗ್ರಾಪಂ ಪಿಡಿಒ ಮತ್ತು ಕಾರ್ಯದರ್ಶಿಗಳು ಹಾರಿಕೆ ಉತ್ತರವನ್ನು ನೀಡುತ್ತಾರೆ. ನಮ್ಮ ಗೋಳು ಯಾರ ಬಳಿ ಹೇಳಿಕೊಳ್ಳಬೇಕೋ ತಿಳಿಯುತ್ತಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೊಡಿಕೊಳ್ಳುತ್ತಿದ್ದಾರೆ.
ಈಗಲಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕೆಂದು ಗ್ರಾಮದ ಹರಿನಾಥರೆಡ್ಡಿ, ಶ್ರೀನಿವಾಸ್, ನಾಗರಾಜ್, ಚಂದ್ರಶೇಖರ್, ರಾಮಿರೆಡ್ಡಿ, ನರಸಿಂಹಪ್ಪ, ಶಿವಪ್ಪ, ನರಸಪ್ಪ, ಪ್ರಭಾಕರ್ ಒತ್ತಾಯಿಸಿದ್ದಾರೆ.