ಕಾಲಮಿತಿ ಮೀರಿದ ಕಾಮಗಾರಿ
ಮತ್ತೀಕೆರೆ ಜಯರಾಮ್
ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣ ಕಾಮಗಾರಿ ಕಾಲಮಿತಿ ಮುಗಿದು ಎಂಟು ತಿಂಗಳಾದರೂ ಇನ್ನೂ ಪೂರ್ಣಗೊಂಡಿಲ್ಲ.
ಅಪೂರ್ಣ ಕಾಮಗಾರಿ ಮತ್ತು ಸೌಲಭ್ಯಗಳ ಕೊರತೆ ನಡುವೆಯೂ ನಿಲ್ದಾಣ ಬಳಕೆಗೆ ಅರ್ಪಣೆಯಾಗಿದೆ. 2012ರ ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿತ್ತು. ರು.2.03 ಕೋಟಿ ವೆಚ್ಚದ ಕಾಮಗಾರಿಗೆ ಒಂದು ವರ್ಷದ ಕಾಲಮಿತಿಯನ್ನು ನಿಗದಿಪಡಿಸಲಾಗಿತ್ತಾದರೂ ಪೂರ್ಣಗೊಳ್ಳುವ ಮುನ್ನವೇ ನಿಲ್ದಾಣ ಹಸ್ತಾಂತರಿಸಿಕೊಳ್ಳಲಾಗಿದೆ.
ಕಾಮಗಾರಿ ಪ್ರಗತಿಯಲ್ಲಿರುವಾಗಲೇ ಮೂರು ತಿಂಗಳ ಹಿಂದೆ ನಿಗಮದ ಅಧಿಕಾರಿಗಳು ಗುತ್ತಿಗೆ ಬಿಲ್ ಪಾವತಿಸಿ, ಗುತ್ತಿಗೆದಾರರಿಂದ ನಿಲ್ದಾಣ ಹಸ್ತಾಂತರ ಮಾಡಿಕೊಂಡಿದ್ದಾರೆ. ಇಷ್ಟಲ್ಲದೆ ನಿಲ್ದಾಣವನ್ನು ಬಳಕೆಗೆ ಅರ್ಪಿಸಿರುವುದು ವಿಪರ್ಯಾಸದ ಸಂಗತಿ.
ಕಟ್ಟಡಕ್ಕಷ್ಟೇ ಟೆಂಡರ್: ರಾಜ್ಯ ರಸ್ತೆ ಸಾರಿಗೆ ನಿಗಮದ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಹೇಳುವ ಪ್ರಕಾರ, ರಾಮನಗರ ಬಸ್ ನಿಲ್ದಾಣದಲ್ಲಿ ಕಟ್ಟಡ ನಿರ್ಮಾಣಕ್ಕಷ್ಟೇ ರು.2.03 ಕೋಟಿ ವೆಚ್ಚದಲ್ಲಿ ಟೆಂಡರ್ ನೀಡಲಾಗಿದೆ. ಇದರಲ್ಲಿ ಇತರೆ ಯಾವ ಕಾಮಗಾರಿಯೂ ಸೇರಿಲ್ಲವಂತೆ.
ಒಂದು ಸುಸಜ್ಜಿತ ಬಸ್ ನಿಲ್ದಾಣ ಎನಿಸಿಕೊಳ್ಳಲು ಅದರಲ್ಲಿನ ನಿಲುಗಡೆ ಸ್ಥಳವು ಡಾಂಬರೀಕರಣ ಇಲ್ಲವೇ ಕಾಂಕ್ರಿಟ್ ಆಗಿರಬೇಕು. ಆದರೆ, ಈ ನಿಲ್ದಾಣದಲ್ಲಿ ಜಲ್ಲಿ ಹಾಕಿ ಬೇಕಾಬಿಟ್ಟಿಯಾಗಿ ರೋಡ್ ರೋಲರ್ ಅಡ್ಡಾಡಿಸಿ ಹಾಗೇ ಬಿಡಲಾಗಿದೆ. ಇನ್ನು, ನಿಲ್ದಾಣಕ್ಕೆ ಸುತ್ತಲೂ ಕಾಂಪೌಂಡ್ ವ್ಯವಸ್ಥೆ ಕಲ್ಪಿಸುವ ಕೆಲಸವೇ ಆಗಿಲ್ಲ. ಹೀಗಾಗಿ ಜನರು ಅಡ್ಡಾದಿಡ್ಡಿಯಾಗಿ ನಿಲ್ದಾಣ ಪ್ರವೇಶಿಸಬಹುದಾಗಿದೆ. ಜನರಷ್ಟೇ ಅಲ್ಲದೆ ನಾಯಿ, ಹಂದಿ, ಬಿಡಾಡಿ ದನಗಳ ಪ್ರವೇಶಕ್ಕೂ ಯಾವುದೇ ಅಡೆತಡೆ ಇಲ್ಲದಾಗಿದೆ.
ಶೌಚಾಲಯ ಅವ್ಯವಸ್ಥೆ: ಬಸ್ ನಿಲ್ದಾಣವೇನೋ ಹೊಸದು. ಆದರೆ, ಈ ನಿಲ್ದಾಣದಲ್ಲಿರುವ ಶೌಚಾಲಯ ಮಾತ್ರ ಪುರಾತನ ಕಾಲದ್ದೇ ಆಗಿದೆ. ಶೌಚಾಲಯದಲ್ಲಿ ನೀರು ಸಂಗ್ರಹಿಸುವ ಟ್ಯಾಂಕ್ ತೂತು ಬಿದ್ದಿದೆ. ಈ ಪರಿಣಾಮ ಆಗಾಗ್ಗೆ ನೀರಿಲ್ಲದೆ ಶೌಚಾಲಯ ಕದ ಮುಚ್ಚಿರುತ್ತದೆ. ಕಾಂಪೌಂಡ್ ನಿರ್ಮಾಣ, ಶೌಚಾಲಯ ವಿಸ್ತರಣೆ ಮತ್ತು ನಿಲ್ದಾಣ ಆವರಣದ ಕಾಂಕ್ರಿಟ್ ಕಾಮಗಾರಿಗೆ ಇದೀಗ ಪ್ರತ್ಯೇಕ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಹಣಕಾಸು ಮುಗ್ಗಟ್ಟಿನ ನೆಪವೊಡ್ಡಿ ಇನ್ನೂ ಅನುಮತಿ ನೀಡಲಾಗಿಲ್ಲ ಎನ್ನುವ ಅಧಿಕಾರಿಗಳ ಮಾತು ಹಾಸ್ಯಾಸ್ಪದವಾಗಿದೆ. ತಲೆಗೊಮ್ಮೆ, ಮೈಗೆ ಇನ್ನೊಮ್ಮೆ ಸೋಪು ಹಚ್ಚಿಕೊಂಡು ಸ್ನಾನ ಮಾಡಿದಂತೆ ಎನ್ನುವ ಮಾತು ಈ ನಿಲ್ದಾಣದ ಕಾಮಗಾರಿ ವಿಷಯದಲ್ಲಿ ಅನ್ವಯವಾಗುತ್ತದೆ. ಒಂದು ರೀತಿಯಲ್ಲಿ ಇದು ತುಂಡು ಗುತ್ತಿಗೆ ವ್ಯವಸ್ಥೆಯನ್ನು ಜಾರಿಗೊಳಿಸಿದಂತೆಯೂ ಆಗಿದೆ.
ಆಗಲೇ ಸೇರಿಸಿಲ್ಲವೇಕೆ: ಈ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಸೌಲಭ್ಯವಿದೆ. ಜಿಲ್ಲೆ ಘೋಷಣೆಯಾಗಿ 8 ವರ್ಷವಾದರೂ ರಾಮನಗರಕ್ಕೆ ಹೈಟೆಕ್ ಬಸ್ ನಿಲ್ದಾಣ ಸೌಲಭ್ಯ ಮರೀಚಿಕೆಯಾಗಿತ್ತು. ಈಗ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದ್ದರೂ ಮೂಲ ಸೌಲಭ್ಯಗಳು ಇಲ್ಲಿಲ್ಲ. ಒಂದು ಬಸ್ ನಿಲ್ದಾಣ ಎಂದ ಮೇಲೆ ಕಚೇರಿ ಕಟ್ಟಡ, ವಾಣಿಜ್ಯ ಮಳಿಗೆಗಳು, ಕಾಂಪೌಂಡ್, ಶೌಚಾಲಯ, ಕುಡಿಯುವ ನೀರು ಸಹಿತ ಮೂಲಭೂತ ಸೌಲಭ್ಯಗಳು ಕಡ್ಡಾಯವಾಗಿರಬೇಕು. ಆದರೆ, ಕಟ್ಟಡಕ್ಕಷ್ಟೇ ಟೆಂಡರ್ ಕರೆದು, ಉಳಿದ ಕೆಲಸಗಳನ್ನು ಹಾಗೇ ಬಿಟ್ಟಿರುವ ಬಗ್ಗೆ ಅನುಮಾನ ಮೂಡಿದೆ.
ಉದ್ಘಾಟನೆ ಭಾಗ್ಯವಿಲ್ಲ
ಬಸ್ ನಿಲ್ದಾಣ ಕಾಮಗಾರಿ ಮುಗಿದಿದ್ದು, ಬಳಕೆಗೂ ಅರ್ಪಣೆಯಾಗಿದೆ ಎಂದು ಹೇಳಿಕೊಳ್ಳುವ ಸಾರಿಗೆ ನಿಗಮದ ಅಧಿಕಾರಿಗಳು ಇನ್ನೂ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿಲ್ಲವೇಕೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಹೇಳಿ ಕೇಳಿ ರಾಮನಗರದಲ್ಲಿ ಶಿಷ್ಟಾಚಾರಕ್ಕೆ ಮೂರು ಕಾಸಿನ ಬೆಲೆ ಇಲ್ಲ. ರಾಜ್ಯದಲ್ಲಷ್ಟೇ ಅಲ್ಲದೆ ಜಿಲ್ಲೆಯಲ್ಲೂ ಕಾಂಗ್ರೆಸ್ ಕಾರುಬಾರು ಬಲು ಜೋರು. ರಾಮನಗರದಲ್ಲಿ ಜೆಡಿಎಸ್ ಶಾಸಕ ಇರುವ ಕಾರಣಕ್ಕೆ ಉದ್ಘಾಟನೆ ಬೇಡವೆಂದು ತಾತ್ಸರ ಮಾಡುತ್ತಿರುವ ಸಂದೇಹವೂ ಸ್ಥಳೀಯರನ್ನು ಬಲವಾಗಿ ಕಾಡುತ್ತಿದೆ.
ಧೂಳ್ ಮಗಾ ಧೂಳ್!
ರಾಮನಗರ ಬಸ್ ನಿಲ್ದಾಣವು ಹೇಳಿ ಕೇಳಿ ಕಿಷ್ಕಿಂದೆಯಂತಹ ಜಾಗದಲ್ಲಿದೆ. ಗ್ರಾಮೀಣ ಪ್ರದೇಶಕ್ಕೆ ತೆರಳುವ ಎಲ್ಲ ಬಸ್ಸುಗಳ ನಿಲುಗಡೆಗೆ ಸಾಕಾಗುವಷ್ಟು ಸ್ಥಳಾವಕಾಶ ಇಲ್ಲಿಲ್ಲ. ಇಷ್ಟಾಗಿಯೂ ಬೆಂಗಳೂರು ಕಡೆ ತೆರಳುವ ಎಲ್ಲ ಬಸ್ಸುಗಳು ಇಲ್ಲೇ ನಿಲುಗಡೆ ನೀಡಬೇಕಿದೆ. ನಿಲ್ದಾಣ ಆವರಣದಲ್ಲಿ ಕಾಂಕ್ರೀಟ್ ಕೆಲಸ ಮಾಡುವ ಮುನ್ನವೇ ಬಳಕೆ ಮಾಡುತ್ತಿರುವ ಪರಿಣಾಮ ಪ್ರಯಾಣಿಕರಿಗೆ ಮಾತ್ರವಲ್ಲ, ಸುತ್ತಮುತ್ತಲ ನಿವಾಸಿಗಳು, ವಾಣಿಜ್ಯ ಮಳಿಗೆ ಮತ್ತು ಕಚೇರಿಗಳಿಗೆ ಧೂಳಿನ ಅಭಿಷೇಕವಾಗುತ್ತಿದೆ.
ಬಗೆಹರಿಯದ ವಿವಾದ
ನಿಲ್ದಾಣದ ಉತ್ತರ ದಿಕ್ಕಿನಲ್ಲಿರುವ ಜಾಗದ ವಿವಾದವನ್ನು ನ್ಯಾಯಾಲಯ ಇಲ್ಲವೇ ಹೊರಗೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ನಿಗಮದ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಿಯೇ ಇಲ್ಲ. ಮದ್ದೂರು ಮಾದರಿಯಲ್ಲಿ ರಸ್ತೆಯ ಎರಡೂ ಕಡೆ ನಿಲ್ದಾಣ ನಿರ್ಮಿಸಬೇಕೆಂದು ಬಿಜೆಪಿ ಸರ್ಕಾರವಿದ್ದಾಗ ಸಭೆಯೊಂದರಲ್ಲಿ ಕುಮಾರಸ್ವಾಮಿ ಆಗ್ರಹಿಸಿದ್ದರಾದರೂ ಆಗಿನ ಉಸ್ತುವಾರಿ ಸಚಿವರು, ಅಧಿಕಾರಿಗಳು ಪ್ರಸ್ತಾವನೆಯನ್ನೇ ಸಲ್ಲಿಸಿಲ್ಲ.
ರಾಮನಗರದಲ್ಲಿ ಬಸ್ ನಿಲ್ದಾಣಕ್ಕೆ ಕಟ್ಟಡ ನಿರ್ಮಿಸಲು ರು.2.03 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿತ್ತು. ಆವರಣದ ಕಾಂಕ್ರಿಟ್, ಕಾಂಪೌಂಡ್, ಶೌಚಾಲಯ ವಿಸ್ತರಣೆ ಸಹಿತ ಅನ್ಯ ಕಾಮಗಾರಿಗಳು ಸೇರಿರಲಿಲ್ಲ. ನಿಲ್ದಾಣ ಪೂರ್ಣಗೊಂಡು, ಬಳಕೆಯೂ ಆಗುತ್ತಿದೆ.
-ಸೋಮಶೇಖರ್, ಎಇಇ, ಕೆಎಸ್‌ಆರ್‌ಟಿಸಿ.