ತೋಟಗಾರಿಕೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ
ಕೋಲಾರ: ಸಿಬ್ಬಂದಿ ಕೊರೆತೆಯಿಂದ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲಾಗುತ್ತಿಲ್ಲ. ಖಾಲಿ ಇರುವ ಹುದ್ದೆಗಳಿಗೆ ಸಿಬ್ಬಂದಿ ನೇಮಕ ಮಾಡುವಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಂ.ಆರ್.ಚಂದ್ರಶೇಖರ್ ಅಳಲು ತೋಡಿಕೊಂಡರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ಆನಂದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡಿದ ಚಂದ್ರಶೇಖರ್, ಇಲಾಖೆ ಕಚೇರಿಯಲ್ಲಿ 34 ಹುದ್ದೆಗಳ ಪೈಕಿ 9 ಮಂದಿ ಮಾತ್ರವೇ ಇದ್ದಾರೆ ಎಂದರು.
ಜಂಟಿ ಕೃಷಿ ನಿರ್ದೇಶಕ ಸಿ. ಚಿಕ್ಕಣ್ಣ ಮಾತನಾಡಿ, ಜೂನ್ ಆರಂಭದಲ್ಲಿ ಮಳೆಯಾಗಿತ್ತು. ನೆಲಗಡಲೆ, ತೊಗರಿ ಬಿತ್ತನೆ ಆರಂಭವಾಗಿತ್ತು. ತಿಂಗಳ ಮದ್ಯೆ ಭಾಗದಲ್ಲಿ ಮಳೆ ಬರದೆ ಬಿತ್ತನೆ ಸ್ಥಗಿತಗೊಂಡಿದೆ. 1.02 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಗೆ 6600 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ರಾಗಿ ಬಿತ್ತನೆ ಕಾರ್ಯ ಆರಂಭವಾಗಿಲ್ಲ. ಇನ್ನೂ ಕಾಲಾವಕಾಶ ಇರುವುದರಿಂದ ರೈತರು ಆಶಾಭಾವನೆಯಲ್ಲಿದ್ದಾರೆಂದರು. ರೇಷ್ಮೆ ಇಲಾಖೆ ಉಪ ನಿರ್ದೇಶಕ ಕುಮಾರ್ ಮಾತನಾಡಿ, ರಾಜ್ಯದಲ್ಲೇ ಕೋಲಾರದಲ್ಲಿ ಹೆಚ್ಚು ಬೈ ವೋಲ್ಟೇನ್ ರೇಷ್ಮೆ ಗೂಡು ಬೆಳೆಯುತ್ತಿದ್ದು, 900 ಮೆ. ಟನ್ವರೆಗೆ ಗುರಿ ಸಾಧಿಸಲಾಗಿದೆ ಎಂದು ತಿಳಿಸಿದರು.
ಸ್ಥಾಯಿ ಸಮಿತಿ ಸದಸ್ಯರಾದ ಚೌಡೇಶ್ವರಿ, ರತ್ನಮ್ಮ, ಜಿ.ಪಂ. ಉಪಕಾರ್ಯದರ್ಶಿ ಆರೋಕ್ಯಸ್ವಾಮಿ, ಸಹಾಯಕ ಯೋಜನಾಧಿಕಾರಿ ಮೋಹನ್ ಕುಮಾರ್ ಇದ್ದರು.