ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಳೆಗಾಲದಲ್ಲೂ ನೀರಿಗೆ ಬರ!

Rashmi Kasaragodu
Updated On : 3 Jul 2014, 1:36 am

ಎನ್ .ವೆಂಕಟೇಶ್  
ಚಿಕ್ಕಬಳ್ಳಾಪುರ: ಮಳೆ ಅವಕೃಪೆ ತೋರಿದ್ದರಿಂದ ರೈತರು ಆತಂಕದಲ್ಲಿರುವಾಗಲೇ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಮತ್ತೆ ಉಲ್ಬಣಗೊಂಡಿದೆ.
ಅನುದಾನ ಇದೆ. ಆದರೆ, ಕೊಳವೆ ಬಾವಿಗಳನ್ನು ಕೊರೆಸುತ್ತಿದ್ದರೂ ನೀರು ಸಿಗುತ್ತಿಲ್ಲ. ಮತ್ತೊಂದೆಡೆ ಮಳೆಯ ಕೊರತೆ ಎದುರಾಗಿರುವುದು ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ ಎಂದು ಅಧಿಕಾರಿಗಳೇ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಮತ್ತು ಗ್ರಾಪಂ ಕಚೇರಿಗಳಿಗೆ ಬರುತ್ತಿರುವ ನೀರಿನ ಸಮಸ್ಯೆ ದೂರುಗಳನ್ನು ಪರಿಹರಿಸಲು ಸಾಧ್ಯವಾಗದಿರುವುದರಿಂದ ದೊಡ್ಡ ತಲೆ ನೋವು ಎದುರಿಸಬೇಕಾಗಿದೆ.
ಚಿಕ್ಕಬಳ್ಳಾಪುರ ನಗರಕ್ಕೆ ಜಕ್ಕಲಮಡಗು ಜಲಾಶಯ, ಬಾಗೇಪಲ್ಲಿ ಪಟ್ಟಣಕ್ಕೆ ಚಿತ್ರಾವತಿ ಜಲಾಶಯ ಮತ್ತು ಚಿಂತಾಮಣಿ ನಗರಕ್ಕೆ ಕನ್ನಂಪಲ್ಲಿ ಕೆರೆ ಮತ್ತು ಕೊಳವೆ ಬಾವಿಗಳು ನೀರಿನ ಆಶ್ರಯವಾಗಿದೆ. ಈಗಾಗಲೇ ಜಲಾಶಯಗಳು ನೀರಿಲ್ಲದೇ ಖಾಲಿಯಾಗಿವೆ. ಇವುಗಳಿಂದ ಸದ್ಯಕ್ಕೆ ನೀರು ಸರಬರಾಜು ನಿಂತು ಹೋಗಿದ್ದು ಈಗ ಜಲಾಶಯಗಳ ಬದಲಿಗೆ ಹೆಚ್ಚಿಗೆ ಕೊಳವೆ ಬಾವಿಗಳನ್ನು ನಂಬಿಕೊಂಡೇ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಗುಡಿಬಂಡೆ ಪಟ್ಟಣದಲ್ಲಿ ಅಮಾನಿ ಭೈರಸಾಗರ ಕೆರೆಯಲ್ಲಿ ಇರುವ ನೀರಿನ ಜೊತೆಗೆ ಕೊರೆದಿರುವ ಕೊಳವೆ ಬಾವಿಗಳಿಂದ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ. ಉಳಿದಂತೆ ಶಿಡ್ಲಘಟ್ಟ ಮತ್ತು ಗೌರಿಬಿದನೂರಿನಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಕಷ್ಟಪಡಬೇಕಾಗಿದೆ.
ಎರಡ್ಮೂರು ವರ್ಷಗಳಿಂದಲೂ ಬರದ ವಾತಾವರಣವೇ ಕಂಡು ಬರುತ್ತಿದ್ದು, ನಾಲ್ಕೈದು ತಿಂಗಳ ಹಿಂದೆಯೇ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಹಾಹಾಕಾರ ಉಂಟಾಗಿತ್ತು. ಜೂನ್‌ನಲ್ಲಿ ಚೆನ್ನಾಗಿ ಮಳೆಯಾದ ನಂತರ ಸಮಸ್ಯೆ ಪರಿಹಾರ ಕಾಣಲಿದೆ ಎಂಬ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಹೊಂದಿತ್ತು. ಆದರೆ, ಇಲ್ಲಿಯವರೆಗೂ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ. ಹೀಗಾಗಿ ಜಿಲ್ಲೆಯಲ್ಲೂ ಪರಿಸ್ಥಿತಿ ಹದಗೆಟ್ಟಿದೆ.


ಆಗಾಗ ನೀರು ಪೂರೈಕೆ


ಚಿಕ್ಕಬಳ್ಳಾಪುರ ನಗರದ ಒಟ್ಟು 31 ವಾರ್ಡುಗಳಲ್ಲಿ 3 ದಿನಕ್ಕೊಮ್ಮೆ 6 ವಾರ್ಡುಗಳು, 5 ದಿನಕ್ಕೊಮ್ಮೆ 10 ಮತ್ತು ವಾರಕ್ಕೊಮ್ಮೆ 15 ವಾರ್ಡುಗಳಲ್ಲಿ (ಕೊಳವೆ ಬಾವಿ ಮೂಲಕ), ಉಳಿದಂತೆ 15 ವಾರ್ಡುಗಳಲ್ಲಿ ನೀರಿನ ಕೊರತೆ ಹೆಚ್ಚಾಗಿರುವುದರಿಂದ ಟ್ಯಾಂಕರ್‌ಗಳ ಮೂಲಕ ನೀರನ್ನು ಒದಗಿಸಲಾಗುತ್ತಿದೆ. ಚಿಂತಾಮಣಿ ನಗರದ 31 ವಾರ್ಡುಗಳಲ್ಲಿ ವಾರಕ್ಕೊಮ್ಮೆ 11 ಮತ್ತು ವಾರಕ್ಕೊಮ್ಮೆ 20, ಶಿಡ್ಲಘಟ್ಟ ಪಟ್ಟಣದ 27 ವಾರ್ಡುಗಳಲ್ಲಿ 5 ದಿನಕ್ಕೊಮ್ಮೆ 11 ಮತ್ತು ವಾರಕ್ಕೊಮ್ಮೆ 16, ಗೌರಿಬಿದನೂರಿನ 23 ವಾರ್ಡುಗಳಲ್ಲಿ 5 ದಿನಕ್ಕೊಮ್ಮೆ 11 ಮತ್ತು ವಾರಕ್ಕೊಮ್ಮೆ 12, ಉಳಿದಂತೆ 12 ವಾರ್ಡುಗಳಲ್ಲಿ ನೀರಿನ ಟ್ಯಾಂಕರ್‌ಗಳ ಮೂಲಕ ನೀರನ್ನು ಒದಗಿಸಲಾಗುತ್ತಿದೆ. ಬಾಗೇಪಲ್ಲಿ ಪಟ್ಟಣದ 23 ವಾರ್ಡ್‌ಗಳಲ್ಲಿ 3 ದಿನಕ್ಕೊಮ್ಮೆ 8, 5 ದಿನಕ್ಕೊಮ್ಮೆ 10 ಮತ್ತು ವಾರಕ್ಕೊಮ್ಮೆ 5 ಮತ್ತು ಗುಡಿಬಂಡೆ ಪಟ್ಟಣದ 11 ವಾರ್ಡ್‌ಗಳಲ್ಲಿ 3 ದಿನಕ್ಕೊಮ್ಮೆ 5 ಮತ್ತು 5 ದಿನಕ್ಕೊಮ್ಮೆ 6 ವಾರ್ಡ್‌ಗಳಲ್ಲಿ ನೀರು ಸರಬರಾಜಾಗುತ್ತಿದೆ. ಇದು ಅಧಿಕಾರಿಗಳು ತಿಳಿಸುವ ಲೆಕ್ಕಾಚಾರ. ಆದರೆ, ವಾಸ್ತವವೇ ಬೇರೆಯಾಗಿದೆ. ಅನೇಕ ವಾರ್ಡುಗಳಲ್ಲಿ ಅರ್ಧ ಗಂಟೆ ಸಹ ಸರಿಯಾಗಿ ನೀರು ಬರುವುದಿಲ್ಲ. ಗ್ರಾಮೀಣ ಭಾಗದಲ್ಲಿ  ಮಂಜೂರಾತಿಗೆ ಅನುಗುಣವಾಗಿ ಕೊಳವೆ ಬಾವಿಗಳನ್ನು ಕೊರೆಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಾಗುವ ಗ್ರಾಮಸ್ಥರ ಒತ್ತಡ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಒಂದೆರಡರ ಬದಲಿಗೆ ನಾಲ್ಕೈದು ಕಡೆ ಕೊರೆಯಬೇಕಾಗಿದೆ.



ಮಳೆಯೇ ಆಧಾರ



ಪ್ರಸ್ತುತ ಮಳೆಗಾಲದಲ್ಲಿಯೇ ನೀರಿಗೆ ಹಾಹಾಕಾರ ಎದುರಾಗಿರುವುದು ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎನ್ನುವುದು ಆತಂಕ ಮೂಡಿಸಿದೆ. ಹಿಂದೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಪರಿಹಾರಕ್ಕೆ 50 ಲಕ್ಷ ಅಂದಾಜಿಸಲಾಗಿತ್ತು. ಆದರೆ, ಹೆಚ್ಚಾಗುತ್ತಿರುವ ಸಮಸ್ಯೆಯಿಂದ ಅನುದಾನ ಸಾಕಾಗುವುದಿಲ್ಲ. ಮಳೆ ಕೊರತೆಗೆ ಇದು ಎರಡರಷ್ಟಾದರೂ ಕಷ್ಟವಾಗುತ್ತದೆ. ಇನ್ನೂ ಅನುದಾನವಿದ್ದರೂ ಸಹ ನೀರಿಲ್ಲದೇ ಇರುವಾಗ ಏನೂ ಮಾಡುವುದಕ್ಕೆ ಸಾಧ್ಯ ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 607 ಕೊಳವೆ ಬಾವಿಗಳಲ್ಲಿ 228 ಕೊಳವೆ ಬಾವಿಗಳು ಬತ್ತಿ ಹೋಗಿವೆ. ಕೇವಲ 346 ಕೊಳವೆ ಬಾವಿಗಳು ಕಾರ್ಯ ನಿರ್ವಹಿಸುತ್ತಿವೆ. ಸದ್ಯ ಮಳೆಯ ಕೊರತೆ ನೀಗದಿದ್ದರೆ ಇನ್ನೂ ಹೆಚ್ಚಿಗೆ ಕೊಳವೆ ಬಾವಿಗಳನ್ನು ಕೊರೆಸಬೇಕು. ಜುಲೈ ಮೊದಲ ವಾರದ ನಂತರ ಮಳೆ ಬೀಳುವ ನಿರೀಕ್ಷೆಯನ್ನು ಹೊಂದಿದ್ದು, ನೀರಿನ ಸಮಸ್ಯೆ ನಿವಾರಣೆ ಮಳೆಯನ್ನೇ ಆಧರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement