ಗಳಿಸಿದ್ದನ್ನು ಸಮಾಜಕ್ಕೆ ವಿನಿಯೋಗಿಸಿ
ಶಿಡ್ಲಘಟ್ಟ: ಸಮಾಜದಲ್ಲಿ ಗಳಿಸಿರುವುದನ್ನು ಸ್ವಾರ್ಥಕ್ಕಾಗಿ ಉಪಯೋಗ ಮಾಡಿಕೊಳ್ಳುವ ಬದಲು, ಸಮಾಜಕ್ಕೆ ಪುನಃ ವಿನಿಯೋಗ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಹೇಳಿದರು.
ಪಟ್ಟಣದ ಮಯೂರ ವೃತ್ತದಲ್ಲಿರುವ ಕೆಂಪೇಗೌಡ ಕರ್ಣಶ್ರೀ ಚಾರಿಟೆಬಲ್ ಟ್ರಸ್ಟಿನ ವತಿಯಿಂದ ಬಿಜೆಪಿ ಮುಖಂಡ ಡಿ.ಆರ್. ಶಿವಕುಮಾರಗೌಡ ಹುಟ್ಟುಹಬ್ಬದ ಅಂಗವಾಗಿ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಂಗವಿಕಲೆಗೆ ಉಚಿತ ನಿವೇಶನ ಹಂಚಿಕೆ ಸಮಾರಂಭದಲ್ಲಿ ಮಾತನಾಡಿದರು. ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಪೀಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ರವಿನಾರಾಯಣ ರೆಡ್ಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಯಿರಿ, ತಾಲೂಕು ಅಧ್ಯಕ್ಷ ಸುರೇಂದ್ರಗೌಡ, ಹನುಮೇಗೌಡ, ಬಳುವನಹಳ್ಳಿ ಲೋಕೇಶ್, ಎಸ್. ಸುಜಾತ, ದಾಮೋದರ್ ಮುಂತಾದವರು ಹಾಜರಿದ್ದರು.
ಬೆಸ್ಕಾಂನಿಂದ ಅನಧಿಕೃತ ವಿದ್ಯುತ್ ಸಂಪರ್ಕ ಕಡಿತ
ಶಿಡ್ಲಘಟ್ಟ: ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡು ಕಾರ್ಯನಿರ್ವಹಿಸುತ್ತಿದ್ದ ತಾಪಂ ಸಂಪರ್ಕವನ್ನು ಬೆಸ್ಕಾಂ ಇಲಾಖೆಯ ಗುಪ್ತದಳದ ಅಧಿಕಾರಿಗಳು ಕಡಿತಗೊಳಿಸಿದ್ದಾರೆ.
ಪಟ್ಟಣದ ತಾಲೂಕು ಪಂಚಾಯ್ತಿಯ ಹಿಂಭಾಗದಲ್ಲಿರುವ ಕಂಬದಿಂದ ಕಚೇರಿಗೆ ಕಳೆದ ನಾಲ್ಕು ವರ್ಷಗಳಿಂದ ಮೀಟರಿಲ್ಲದೆ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡು ಕಾರ್ವ ನಿರ್ವಹಿಸಲಾಗುತ್ತಿತ್ತು. ಕಳೆದ ಮೂರು ದಿನಗಳ ಹಿಂದೆ ಗುಪ್ತದಳದ ಅಧಿಕಾರಿಗಳು ಅನಧಿಕೃತವಾಗಿ ಪಡೆದುಕೊಂಡಿದ್ದ ಸಂಪರ್ಕ ಕಡಿತಗೊಳಿಸಿರುವುದರಿಂದ ತಾಪಂ ಕಚೇರಿಯಲ್ಲಿ ಕತ್ತಲು ಆವರಿಸಿದೆ. ಯಾವುದೇ ಕೆಲಸ ಕಾರ್ಯಗಳು ನಡೆಯದೆ ಗ್ರಾಪಂಗಳೂ ಸೇರಿದಂತೆ ನಾಗರೀಕರ ಕೆಲಸ ಕಾರ್ಯಗಳು ನೆನಗುದಿಗೆ ಬಿದ್ದಿವೆ.
ಚಿತ್ರ ಸುದ್ದಿ 1
ಶಿಡ್ಲಘಟ್ಟ ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ ಸಿಬ್ಬಂದಿಯಿಲ್ಲದೆ ಬಿಕೋ ಎನ್ನುತ್ತಿರುವ ಕಚೇರಿ.
ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರ ಆಯ್ಕೆ
ಗೌರಿಬಿದನೂರು: ನ್ಯಾಷನಲ್ ಕಾಲೇಜಿನ ಪದವಿ ವಿಭಾಗದ ಪ್ರಾಂಶುಪಾಲರಾಗಿ ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಎಂ.ವಿ. ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ. ತಾಲೂಕಿನ ಮರಳೂರು ಗ್ರಾಮದವರಾದ ಕೃಷ್ಣಮೂರ್ತಿ ಇದೇ ನ್ಯಾಷನಲ್ ಕಾಲೇಜಿನಲ್ಲಿ ಬಿಕಾಂ ಮಾಡಿ 1980ರಲ್ಲಿ ಇದೇ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕರಾಗಿ ಸೇವೆ ಆರಂಭಿಸಿದ್ದರು. ಇಲ್ಲಿ ಕಾರ್ಯನಿರ್ವಹಿಸುತ್ತಲೆ ಕ್ವಾಲಿಟಿ ಆಫ್ ವರ್ಕ್ ಲೈಫ್ ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪಡೆದಿದ್ದಾರೆ.
ವಿವಾಹ ನೋಂದಣಿ ಕಡ್ಡಾಯ
ಮುಳಬಾಗಲು: ವಿವಾಹ ನೋಂದಣೆ ಕಡ್ಡಾಯ ಎಂದು ಜಿಎಂಎಫ್ಸಿ ಪ್ರಧಾನ ಸಿವಿಲಲ್ನ್ಯಾಯಾಧೀಶ ಕೆ.ಎಂ.ಓಂಕಾರಮುರ್ತಿ ನುಡಿದರು. ಪಟ್ಟಣದ ವಿಠಲೇಶಪಾಳ್ಯದ ಸಮುದಾಯ ಭವನದಲ್ಲಿ ತಾಲ್ಲೂಕು ಆಡಳಿತ, ಕಾನೂನು ಸೇವಾ ಸಮಿತಿ, ವಕೀಲರ ಸಂಘ ಆಶ್ರಯದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಪಾಟಿಸಿ, ಕಾನೂನು ನೆರವು ಕಾರ್ಯಕ್ರಮದ ಪ್ರಯೋಜನ ಪಡೆಯಲು ಕರೆ ನೀಡಿದರು.
ಅಪೌಷ್ಟಿಕತೆ ನಿರ್ಮೂಲನೆಗೆ ಸರ್ಕಾರದ ಜತೆ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಕೈಜೋಡಿಸಬೇಕು ಎಂದು ಹಿರಿಯ ಶ್ರೇಣೆ ಸಿವಿಲ್ ನ್ಯಾಯಾಧೀಶ ಎಸ್.ಶ್ರೀಧರ್ ಹೇಳಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್. ಪ್ರಭಾಕರ್, ಆರೋಗ್ಯಾಧಿಕಾರಿ ಡಾ. ನಾರಾಯಣಸ್ವಾಮಿ, ನೋಂದಣಾಧಿಕಾರಿ ಕೃಷ್ಣನಾಯಕ್, ವಕೀಲ ಎಂ.ಎಸ್. ಶ್ರೀನಿವಾಸರೆಡ್ಡಿ, ವಿಜಯಮ್ಮ, ಅಮೃತಾ ಮುಂತಾದವರು ಭಾಗವಹಿಸಿದ್ದರು.
ಆತ್ಯಾಚಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಮುಳಬಾಗಲು: ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಕುಪ್ಪುರು ಮತ್ತು ಬಂಗಾರಪೇಟೆ ಮೋತಕಪಲ್ಲಿ ಗ್ರಾಮದ 7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಆತ್ಯಾಚಾರವೆಸಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ(ಅಂಬೇಡ್ಕರ್ ವಾದ) ಸಮಿತಿ ಸದಸ್ಯರು ಪಟ್ಟಣದ ಮಿನಿವಿಧಾನಸೌಧ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಆರೋಪಿಗಳಾದ ಮಾಲೂರು ತಾಲೂಕು ಕುಪ್ಪುರು ಗ್ರಾಮದ ಮುನಿಕೃಷ್ಣ, ನಾರಾಯಣಸ್ವಾಮಿ, ಕೃಷ್ಣ, ಅನಿಲ್ ಕುಮಾರ್ ಮತ್ತು ಮೋತಕಪಲ್ಲಿ ಗ್ರಾಮದ ಪ್ರಕಾಶ್ ಹಾಗೂ ಸಂತೋಷ್ ಅವರನ್ನು ಬಂಧಿಸಲು ಒತ್ತಾಯಿಸಿ,ತಹಸೀಲ್ದಾರ್ ಕೆ. ಏಕೇಶಬಾಬು ಅವರಿಗೆ ಮನವಿ ಪತ್ರ ಸಲ್ಲಿಸಿದರು. ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ವರದಗಾನಹಳ್ಳಿ ಮುನಿವೆಂಕಟಪ್ಪ, ಭೀಮಸೇನೆ ಜಿಲ್ಲಾಧ್ಯಕ್ಷ ಎಲ್. ಸತೀಶ್ ಕುಮಾರ್, ಪೆದ್ದೂರು ಶ್ರೀರಾಮ್, ಉತ್ತನೂರು ನಾಗೇಶ್, ಬಿಸನಹಳ್ಳಿ ಸುಬ್ರಮಣಿ, ಆರ್. ಶಂಕರ್, ಪ್ರಸಾದ ಕುಮಾರ್, ಡಿ.ಕೆ. ಶಂಕರ್ ಮುಂತಾದವರು ಭಾಗವಹಿಸಿದ್ದರು.