ಪಾಲ್ ಹೇಳಿಕೆ ಖಂಡಿಸಿ ಸಿಪಿಎಂ ಕಾರ್ಯಕರ್ತರ ಪ್ರತಿಭಟನೆ
ಬಾಗೇಪಲ್ಲಿ: ಪಶ್ಚಿಮ ಬಂಗಾಲದ ತೃಣಮೂಲ ಕಾಂಗ್ರೆಸ್ ಸಂಸದರೊಬ್ಬರು ಸಿಪಿಎಂ ಕಾರ್ಯಕರ್ತರ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವಂತೆ ಬಹಿರಂಗ ಸಭೆಯಲ್ಲಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಹಾಗೂ ರಾಜ್ಯದಲ್ಲಿ ಮಹಿಳೆಯರ ನಡೆಯುತ್ತಿರುವ ದೌರ್ಜನ್ಯ ಮತ್ತು ಅತ್ಯಾಚಾರಗಳನ್ನು ತಡೆಯುವಂತೆ ಸಿಪಿಎಂ ಕಾರ್ಯಕರ್ತರು ಇಲ್ಲಿನ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪಟ್ಟಣದ ಡಾ. ಎಚ್. ಎನ್. ವೃತ್ತದಿಂದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಹೊರಟ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಸಮಿತಿ ಹಾಗೂ ಸಿಪಿಎಂ ಮುಖಂಡರು ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ತಾಲೂಕು ಸಮಿತಿಯ ಕಾರ್ಯದರ್ಶಿ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷೆ ಬಿ.ಸಾವಿತ್ರಮ್ಮ ಮಾತನಾಡಿ, ಪಶ್ಚಿಮ ಬಂಗಾಳ ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ದಿನದಿಂದ ಸಿಪಿಎಂ ಕಾರ್ಯಕರ್ತರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ ಎಂದು ಆರೋಪಿಸಿದರು. ನಂತರ ಉಪತಹಸೀಲ್ದಾರ್ಮುನಿರಾಮಯ್ಯರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಪುರಸಭೆಯ ಸದಸ್ಯರಾದ ಮಹಮ್ಮದ್ ಆಕ್ರಂ, ಜ್ಯೋತಿ, ಮಹಮ್ಮದ್ ಆರೀಫ್, ಸಿಪಿಎಂ ಮಖಂಡರಾದ ರಾಮಲಿಂಗಪ್ಪ, ಗೋವರ್ಧನಾಚಾರಿ, ನರಸಿಂಹರೆಡ್ಡಿ, ಬಾಬು, ಹೇಮಚಂದ್ರ, ಮೂರ್ತಿ, ರಮೇಶ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಪಾತೀಮಂ ಭೀ, ತಾಪಂ ಮಾಜಿ ಅಧ್ಯಕ್ಷೆ ಶೋಭಾರಾಣಿ, ಮುಖಂಡರಾದ ಪದ್ಮ, ರಾಧಮ್ಮ, ಸುಶೀಲಮ್ಮ ಭಾಗವಹಿಸಿದ್ದರು.
ಸಿಎ ನಿವೇಶನಗಳ ದುರುಪಯೋಗ
ಗೌರಿಬಿದನೂರು: ಸರ್ಕಾರದ ನಿಯಮ ಗಾಳಿಗೆ ತೂರಿದ ಶಾಸಕ ಎನ್.ಎಚ್. ಶಿವಶಂಕರ ರೆಡ್ಡಿ ಮನಬಂದಂತೆ ಸಿಎ ನಿವೇಶನಗಳನ್ನು ಸಂಘ ಸಂಸ್ಥೆಗಳಿಗೆ ನೀಡಿ ಸರ್ವಾಧಿಕಾರಿ ಧೋರಣೆ ತೋರಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಂ. ರವಿನಾರಾಯಣ ರೆಡ್ಡಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಡಿಪಾಳ್ಯ ಹೋಬಳಿ ನಾಮಗೊಂಡ್ಲು ಪಂಚಾಯ್ತಿಯ ಸಾರಗೊಂಡ್ಲುವಿನಲ್ಲಿ ಬಡವರು ಮನೆಗಾಗಿ ತಾಪಂ ಧನ ಸಹಾಯಕ್ಕಾಗಿ ಅರ್ಜಿ ಸಲ್ಲಿಸಿದರೆ ಬಿಜೆಪಿ ಕಾರ್ಯಕರ್ತರು ಎಂಬ ಕಾರಣಕ್ಕೆ ತಡೆ ಹಿಡಿಯಲಾಗಿದೆ. ಆದರೆ ಮರಳೂರು ಗ್ರಾಮದಲ್ಲಿ ಶಾಸಕರ ಬೆಂಬಲಿಗ ಪ್ರಕಾಶ್ ರೆಡ್ಡಿ ಅವರ ಸಹೋದರನ ಹೆಸರಿನಲ್ಲಿ ಜಮೀನು ಒತ್ತುವರಿ ಮಾಡಿಕೊಂಡಿರುವ ಭೂಮಿಯಲ್ಲಿ ಮರಳೂರಿನಿಂದ ನಾಗಸಂದ್ರಕ್ಕೆ ಹೋಗುವ ದಾರಿ ಸರ್ವೆ ನಕಾಶೆಯಲ್ಲಿದ್ದರೂ ಅದನ್ನು ಒಂದೆಡೆ ಶಾಸಕರು ಮತ್ತೊಂದೆಡೆ ಪ್ರಕಾಶ್ರೆಡ್ಡಿ ಮುಚ್ಚಿದ್ದಾರೆ ಎಂದು ಆರೋಪಿಸಿದರು.
ನಗರಗೆರೆ ಹೋಬಳಿ ಚೋಳಶೆಟ್ಟಿಹಳ್ಳಿಯಲ್ಲಿ ದಾನಿಯೊಬ್ಬರು ಸರ್ಕಾರಿ ಶಾಲೆಗೆ ನೀಡಿದ್ದ 3ಎಕರೆ ಜಮೀನನ್ನು ಶಾಸಕರ ಬೆಂಬಲಿಗರೊಬ್ಬರು ಒತ್ತುವರಿ ಮಾಡಿಕೊಂಡಿದ್ದಾರೆ. ಪಟ್ಟಣದಲ್ಲಿ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಸಿಎ ನಿವೇಶನಗಳನ್ನು ಸರ್ಕಾರದ ನಿಯಮ ಗಾಳಿಗೆ ತೂರಿದ ಶಾಸಕರು ಅವುಗಳಿಗೆ ಸಂಸದ, ಶಾಸಕ, ವಿಧಾನಪರಿಷತ್ ಸದಸ್ಯ ನಿಧಿಗಳನ್ನೂ ಕೊಡಿಸಿದ್ದಾರೆ ಎಂದು ಆರೋಪಿಸಿದರು.
ಅರವಿಂದ ನಗರಕ್ಕೆ ಸೇರಿದ ಪ್ರತಾಪ್ ಲೇಔಟ್ನ ಸಿಎ ನಿವೇಶನದಲ್ಲಿ ನಿರ್ಮಿಸುತ್ತಿರುವ ಅಸಿಸ್ಮೆಂಟ್ ನಂ.3265ಬಿ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲು ಪರವಾನಿಗೆ ನೀಡಿಲ್ಲ. ಆರ್ಟಿಐ ಮಾಹಿತಿ ಪ್ರಕಾರ ಪುರಸಭೆಯಲ್ಲಿ ಪಟ್ಟಣದ ಯಾವುದೇ ಸಿಎ ನಿವೇಶನಗಳಿಗೆ ಪರವಾನಿಗೆ ನೀಡಿಲ್ಲ. ನಿಯಮಾವಳಿಯ ಪ್ರಕಾರ ಸಿಎ ಸೈಟುಗಳನ್ನು ಪಡೆಯಬೇಕಾದರೆ ಪುರಸಭೆಯಿಂದ ಅನುಮೋದನೆಗೊಂಡು ಜಿಲ್ಲಾಧಿಕಾರಿಗಳ ಶಿಫಾರಸಿನ ಮೇಲೆ ಸರ್ಕಾರದಿಂದ ಅನುಮತಿ ಪಡೆದು ಭೋಗ್ಯಕ್ಕಾಗಲೀ ಶೇ.50ರ ಮಾರುಕಟ್ಟೆ ಧರದಲ್ಲಿ ಹಣ ಪಡೆದು ನೀಡಬೇಕಾಗುತ್ತದೆ.
ಈ ಯಾವುದೇ ನಿಯಮ ಪಾಲಿಸದೇ ಮನ ಬಂದಂತೆ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಸಿಎ ನಿವೇಶನಗಳನ್ನು ನೀಡಿರುವುದು ಕೇವಲ ರಾಜಕೀಯ ಕಾರಣಕ್ಕಾಗಿ ಮಾತ್ರ ಎಂದರು. ಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಸಿ.ಆರ್. ನರಸಿಂಹಮೂರ್ತಿ, ತಾಲೂಕು ಬಿಜೆಪಿ ಅಧ್ಯಕ್ಷ ಗೋಪಿನಾಥ್, ನಾರಾಯಣ ರೆಡ್ಡಿ, ಮಾರ್ಕೆಟ್ ಮೋಹನ್, ವಕ್ತಾರ ಜಯಣ್ಣ ಇದ್ದರು.