ಎರಡು ವರ್ಷವಾದರೂ ಶುರುವಾಗದ ಕಾಮಗಾರಿ
ಬಂಗಾರಪೇಟೆ: ಪಟ್ಟಣದ ಬಸ್ ನಿಲ್ದಾಣದಲ್ಲಿರುವ ರಸ್ತೆ ತಿರುವು ವಿಸ್ತರಿಸಲು ಎರಡು ವರ್ಷಗಳ ಹಿಂದೆಯೇ ಕಾಮಗಾರಿಗೆ ಅಂದಿನ ಶಾಸಕರು ಚಾಲನೆ ನೀಡಿದ್ದರೂ ಕೆಲಸ ಮಾತ್ರ ಶುರುವಾಗಿಲ್ಲ. ಪುರಸಭೆ ಬಸ್ ನಿಲ್ದಾಣದ ಬಳಿ ಕೆಜಿಎಫ್ಗೆ ಹೋಗುವ ತಿರುವಿನಲ್ಲಿ ದಾರಿ ಕಿರಿದಾಗಿರುವುದರಿಂದ ಹಲವು ಬಾರಿ ಅಪಘಾತಗಳು ಸಂಭವಿಸಿವೆ. ಇದನ್ನು ತಪ್ಪಿಸುವ ಸಲುವಾಗಿ ಸಾರ್ವಜನಿಕರು ಅಂದಿನ ಶಾಸಕರಾಗಿದ್ದ ಎಂ.ನಾರಾಯಣಸ್ವಾಮಿ ಮೇಲೆ ಒತ್ತಡ ಹೇರಿದ್ದರು. ಇದಕ್ಕೆ ಸ್ಪಂದಿಸಿದ ನಾರಾಯಣಸ್ವಾಮಿ ರಸ್ತೆ ತಿರುವು ವಿಸ್ತರಿಸಲು ಲೋಕೋಪಯೋಗಿ ಇಲಾಖೆ ಮುಖಾಂತರ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಎರಡು ವರ್ಷಗಳಾದರೂ ಕಾಮಗಾರಿ ಮಾತ್ರ ಪ್ರಾರಂಭವಾಗೇ ಇಲ್ಲ. ಇದರಿಂದ ಈ ತಿರುವಿನಲ್ಲಿ ಸಂಚರಿಸುವ ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ಪ್ರತಿ ದಿನ ಕಿರಿಕಿರಿ ತಪ್ಪಿದ್ದಲ್ಲ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಕಾಮಗಾರಿ ಆರಂಭಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.