ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಸಮುಕ್ತ ಕೋಲಾರ ನಗರ ಕನಸು ಭಗ್ನ ಕರಗದ ಕಸ

Rashmi Kasaragodu
Updated On : 5 Jul 2014, 12:53 pm

ಕೋಲಾರ: ಕೋಲಾರ ನಗರವನ್ನು ಕಸ ಮುಕ್ತ ನಗರವನ್ನಾಗಿ ಮಾಡಬೇಕೆಂಬ ನಗರಸಭೆಯ ಕನಸು ಈಡೇರುವುದೇ ಎಂಬ ಅನುಮಾನ ಉಂಟಾಗಿದೆ.
ಪ್ಲಾಸ್ಟಿಕ್ ನಿಷೇಧ ಜು.1ರಿಂದ ಜಾರಿಗೆ ತರಲಾಗಿದ್ದರೂ ನಗರದ ಎಲ್ಲೆಡೆ ಉಪಯೋಗಿಸಿದ ಪ್ಲಾಸ್ಟಿಕ್ ಚೆಲ್ಲಾಪಿಲ್ಲಿಯಾಗಿ ಹಾರಾಡುತ್ತಿದೆ, ರಸ್ತೆ, ಚರಂಡಿ, ಖಾಲಿ ನಿವೇಶನ, ಕೆರೆ-ಕುಂಟೆ, ಸರ್ಕಾರಿ ಕಚೇರಿಗಳು, ಆಸ್ಪತ್ರೆಯ ಆವರಣದಲ್ಲಿ ಬಿದ್ದಿರುವುದರಿಂದ ಪೌರ ಕಾರ್ಮಿಕರಿಗೆ ಕಸ ವಿಲೇವಾರಿ ತಲೆ ನೋವಾಗಿ ಪರಿಣಮಿಸಿದೆ.
ಕೋಲಾರ ನಗರವನ್ನು ಕಸ ಮುಕ್ತ ನಗರವನ್ನಾಗಿ ಮಾಡಬೇಕೆಂಬ ಆಸೆಯಿಂದ ಮಾರ್ಗದರ್ಶನ ಪಡೆಯಲು ನಗರಸಭೆಯ ಅಧ್ಯಕ್ಷ ಮುಬಾರಕ್ ಹಾಗೂ ಆಯುಕ್ತ ಜಗದೀಶ್ ಅವರು ಆಂಧ್ರ ಪ್ರದೇಶದಿಂದ ಖಾದರ್ ಎಂಬ ಅಧಿಕಾರಿಯನ್ನು ಕರೆಸಿಕೊಂಡು ಕಸ ವಿಲೇವಾರಿಗೆ ಸಂಬಂಧಿಸಿದಂತೆ ಸೂಕ್ತ ಮಾರ್ಗದರ್ಶನ ಪಡೆದುಕೊಂಡಿದ್ದಾರೆ.
ಪೌರ ಕಾರ್ಮಿಕರಿಗೆ ತರಬೇತಿ ನೀಡಲಾಗಿದೆ. ಎಲ್ಲಾ 35 ವಾರ್ಡುಗಳಿಗೆ ಅಗತ್ಯವಿರುವಷ್ಟು ಕೈಗಾಡಿ, ಪ್ಲಾಸ್ಟಿಕ್ ಬಕೆಟ್, ಪೌರ ಕಾರ್ಮಿಕರಿಗೆ ಕೈ ಗ್ಲೌಸ್ ಇತ್ಯಾದಿ ಸಲಕರಣೆಗಳನ್ನು ಒದಗಿಸಲಾಗಿದೆ.
ಜೂ.30ರಂದು ಕ್ಲೀನ್ ಸಿಟಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಿ.ಕೆ. ರವಿ ಚಾಲನೆ ನೀಡಿದ್ದಾರೆ. ಆಂಧ್ರದಿಂದ ಬಂದಿರುವ ಅಧಿಕಾರಿ ಖಾದರ್ ಅವರು ಒಂದು ತಿಂಗಳಲ್ಲಿ ಕೋಲಾರವನ್ನು ರಾಜ್ಯದಲ್ಲೇ ಮಾದರಿ ನಗರವನ್ನಾಗಿ ಮಾಡುವೆ, ಕಸ ಮುಕ್ತ ಕೋಲಾರವನ್ನಾಗಿ ಪರಿವರ್ತಿಸುವೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಆದರೆ, ಪ್ಲಾಸ್ಟಿಕ್ ನಿಷೇಧಕ್ಕೆ ವ್ಯಾಪಾರಿಗಳು ಒಪ್ಪುತ್ತಿಲ್ಲ, 40 ಮೈಕ್ರಾನ್ ಪ್ಲಾಸ್ಟಿಕ್ ಬಳಕೆಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ. ಸುಪ್ರೀಂ ಕೋರ್ಟ್ ಸಹ 40 ಮೈಕ್ರಾನ್ ಪ್ಲಾಸ್ಟಿಕ್ ಬಳಕೆಗೆ ಅನುಮತಿ ನೀಡಿರುವುದರಿಂದ ನಗರಸಭೆಗೆ ಪ್ಲಾಸ್ಟಿಕ್ ನಿಷೇಧ ಕಗ್ಗಂಟಾಗಿದೆ. ಇನ್ನು ಕಸ ವಿಲೇವಾರಿಗೆ ನಿಯೋಜನೆಗೊಂಡಿರುವ ಪೌರ ಕಾರ್ಮಿಕರು ಮನೆಗಳ ಬಳಿ ಹೋಗಿ ವಿಂಗಡಿಸಿರುವ ಕಸ ಪಡೆಯಲು ಕಷ್ಟವಾಗುತ್ತಿದೆ. ಸಾರ್ವಜನಿಕರು ಸಹ ಪ್ರತ್ಯೇಕವಾಗಿ ಒಣಕಸ, ಗಟ್ಟಿ ಕಸವನ್ನು ಬೇರ್ಪಡಿಸಿ ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಅನೇಕ ಕಡೆ ಮಾರ್ಗಸೂಚಿ ಪಾಲಿಸಲಾಗದೆ ಮಾಮೂಲಿಯಂತೆ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಡುವ ಕಸವನ್ನು ಪೌರ ಕಾರ್ಮಿಕರು ಸಂಗ್ರಹಣೆ ಮಾಡಿ ವಿಲೇವಾರಿಗೆ ಜಾಗವಿಲ್ಲದೆ ಯಥಾಪ್ರಕಾರ ತಮಗೆ ಕಾಣಿಸುವ ಜಾಗದಲ್ಲಿ ಸುರಿಯುತ್ತಿದ್ದಾರೆ.
ಶಾಲಾ-ಕಾಲೇಜುಗಳ ಸಂದು-ಗೊಂದಿ, ಸಾರ್ವಜನಿಕರು ಓಡಾಡುವ ರಸ್ತೆಗಳ ಆಜುಬಾಜುಗಳಲ್ಲಿ ಕಸ ಸುರಿಯುತ್ತಿರುವುದರಿಂದ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಪಾಠ-ಪ್ರವಚನ ಕೇಳಲು ಕಷ್ಟವಾಗುತ್ತಿದೆ.
ನಗರಸಭೆಯ ಎಲ್ಲಾ ವಾರ್ಡುಗಳಲ್ಲಿ ಆಯಾ ವಾರ್ಡುಗಳ ಸದಸ್ಯರ ನೇತೃತ್ವದಲ್ಲಿ ನಾಗರೀಕರ ಸಭೆಗಳನ್ನು ಏರ್ಪಡಿಸಿ ಜನರಿಗೆ ತಿಳಿವಳಿಕೆ ನೀಡಬೇಕು, ಸಂಗ್ರಹಿಸುವ ಕಸವನ್ನು ವಿಲೇವಾರಿ ಮಾಡಲು ಸೂಕ್ತವಾದ ಜಾಗ ನಿಗದಿ ಮಾಡಬೇಕು, ಆಯಾ ದಿನದ ಕಸವನ್ನು ಆಯಾ ದಿನವೇ ಸಾಗಾಣೆ ಮಾಡುವ ಮೂಲಕ ಕಸ ಮುಕ್ತ ಕೋಲಾರದ ಕನಸು-ಉದ್ದೇಶಗಳನ್ನು ಸಕಾರಗೊಳಿಸದಿದ್ದರೆ ಯೋಜನೆ ನಗೆಪಾಟಲಿಗೆ ಗುರಿಯಾಗುತ್ತದೆ ಎಂಬುದು ಪ್ರಜ್ಞಾವಂತ ಜನತೆಯ ಸಲಹೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement