ಇಒ ಅಂಕಪಟ್ಟಿ ನಕಲಿ: ತನಿಖೆಗೆ ಮಾಹಿತಿ ಹಕ್ಕು ಕಾರ್ಯಕರ್ತನ ಪಟ್ಟು
ಮುಳಬಾಗಲು: ನಕಲಿ ಅಂಕಪಟ್ಟಿ ವಂಶವೃಕ್ಷ ಸಲ್ಲಿಸಿ ಟಿ.ವಿ. ಅರುಣಕುಮಾರ್ ಮುಳಬಾಗಲು ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಗಿಟ್ಟಿಕೊಂಡಿದ್ದಾರೆಂದು ಮಾಹಿತಿ ಹಕ್ಕು ಕಾರ್ಯಕರ್ತ ಮಂಡಿಕಲ್ ನಾಗರಾಜ್ ದೂರಿದ್ದಾರೆ. ಇಒ ಅವರ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ನೋಂದಣಿಯೂ ನಕಲಿ ಎಂಬುದು ಪ್ರೌಢಶಿಕ್ಷಣ ಮಂಡಳಿ ದಾಖಲೆಯಿಂದ ತಿಳಿದುಬಂದಿದೆ. ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದರೂ, ತಾಪಂ ಇಒಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಗ್ರಾಮೀಣ ಪಂಚಾಯತ್ ಇಲಾಖೆ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಈ ಹಿಂದೆ ಅರುಣ್ ಕುಮಾರ್ ಜೈವಿಕ ಅನಿಲ ಮೇಲ್ವಿಚಾರಕರಾಗಿದ್ದಾಗ ಕೂಲಿಗಾಗಿ ಕಾಳು ಯೋಜನೆಯಡಿ ಬಿಡುಗಡೆಯಾದ ಆಹಾರ ಧಾನ್ಯ ಕಳವು ಮಾಡಿ, ಹುಬ್ಬಳ್ಳಿ ಉಪನಗರದ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ನಂತರ ಸೇವೆಯಿಂದ ಅಮಾನತುಗೊಂಡಿದ್ದರು ಎಂಬ ಮಾಹಿತಿ ಸಿಕ್ಕಿದ್ದು, ನಕಲಿ ದಾಖಲೆ ಸೃಷ್ಟಿಸಿ ಉದ್ಯೋಗ ಗಿಟ್ಟಿಸಿಕೊಂಡಿರುವ ಪ್ರಕರಣ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಇಒ ಅವರನ್ನು ಹೆಚ್ಚಿನ ತನಿಖೆಗೆ ಒಳಪಡಿಸಬೇಕು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೇ ಇಒ ಕರ್ತವ್ಯಕ್ಕೆ ಅಡ್ಡಿಪಡಿಸುವುದಾಗಿ ಅವರು ಎಚ್ಚರಿಸಿದ್ದಾರೆ.