ಕಸಮುಕ್ತ ಕೋಲಾರಕ್ಕೆ ಸಹಕರಿಸಲು ಮನವಿ
ಕೋಲಾರ: ನಗರಸಭೆಯಿಂದ ಹಮ್ಮಿಕೊಂಡಿರುವ ಕಸ ಮುಕ್ತ ಕೋಲಾರ ಯೋಜನೆ ಯಶಸ್ವಿಗೆ ಕನಿಷ್ಠ ಒಂದುವರೆ ತಿಂಗಳು ಬೇಕಾಗುವುದರಿಂದ ಸಾರ್ವಜನಿಕರು ಸಹಕಾರ ನೀಡಬೇಕೆಂದು ನಗರಸಭೆ ಅಧ್ಯಕ್ಷ ಮುಬಾರಕ್ ತಿಳಿಸಿದ್ದಾರೆ.
ಕರಗದ ಕಸ ಶೀರ್ಷಿಕೆಯಡಿ ಕನ್ನಡಪ್ರಭದಲ್ಲಿ ಜು.5ರಂದು ಪ್ರಕಟವಾಗಿರುವ ವರದಿಗೆ ಪ್ರತಿಕ್ರಿಯೆ ನೀಡಿರುವ ಅವರು, ಕ್ರಮಬದ್ಧವಾಗಿ ಕಸ ವಿಲೇವಾರಿ ಮಾಡಲು ಸಾಕಷ್ಟು ಸಮಸ್ಯೆ ಇದೆ. ಜನತೆ ಕಸವನ್ನು ವಿಂಗಡಣೆ ಮಾಡಿ ನೀಡದಿದ್ದರೆ ಯೋಜನೆ ಫಲಪ್ರದವಾಗುವುದಿಲ್ಲವೆಂದು ತಿಳಿಸಿದರು. ಕಸ ಮುಕ್ತ ಕೋಲಾರ ಯೋಜನೆ ಕಳೆದ ಜೂ.30ರಿಂದ ಜಾರಿಗೆ ಬಂದಿದೆ. ಸಂಗ್ರಹಿಸುವ ಕಸವನ್ನು ಪರಿಸರಕ್ಕೆ ಹಾನಿ ಆಗದಂತೆ ಸೂಕ್ತವಾದ ಜಾಗದಲ್ಲಿ ಸುರಿಯಲು ಪೌರ ಕಾರ್ಮಿಕರಿಗೆ ಸೂಚಿಸಲಾಗಿದೆ. ಕೈಗಾಡಿಗಳ ಜೊತೆ ಹೋಗುವ ಪೌರ ಕಾರ್ಮಿಕರು ಪ್ರತಿಯೊಂದು ಬೀದಿಯಲ್ಲಿ ಜನರಿಗೆ ಕೇಳಿಸುವ ರೀತಿಯಲ್ಲಿ ವಿಜಲ್ ಹಾಕಬೇಕು ಎಂದು ಹೇಳಿತ್ತು. ಇದು ಪ್ರಯೋಜನಕ್ಕೆ ಬಾರದಿರುವುದರಿಂದ ಹಾರನ್ ಮಾಡಿ ಕಸದೊಂದಿಗೆ ಜನ ಹೊರ ಬರುವಂತೆ ಮಾಡಲು ನಿರ್ಧರಿಸಲಾಗಿದೆ ಎಂದರು. ವಿಂಗಡಿಸಿರುವ ಕಸವನ್ನು ನೀಡಿದರೆ ಕಸ ಮುಕ್ತ ಕೋಲಾರದ ಕನಸು ಸಕಾರಗೊಳ್ಳುತ್ತದೆ. ಕೆಲಮೊಂದು ಸಮಸ್ಯೆಗಳ ಬಗ್ಗೆ ಮಹಿಳೆಯರು ದೂರು ನೀಡಿದ್ದು ಅದನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಕೈಗಾಡಿಗಳ ಜೊತೆ ಬರುವ ಮಹಿಳೆಯರು ಆ ಸಮಸ್ಯೆಯನ್ನು ನಿವಾರಿಸಲಿದ್ದಾರೆಂದರು. ಪೌರ ಕಾರ್ಮಿಕರಿಗೆ ಉತ್ತೇಜನ ನೀಡಲು ಗುಂಪು ಆರೋಗ್ಯ ವಿಮೆ, ಸಮವಸ್ತ್ರ, ವಸತಿ ಸೌಕರ್ಯ ಇನ್ನಿತರ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಕಸ ವಿಲೇವಾರಿ ನಂತರ ಪೌರ ಕಾರ್ಮಿಕರಿಗೆ ಕಡಿಮೆ ದರದಲ್ಲಿ ತಿಂಡಿ ವ್ಯವಸ್ಥೆಗೂ ಚಿಂತನೆ ನಡೆದಿದೆ. ಇದರಿಂದ ಕಸ ಸಂಗ್ರಹಣೆಗೆ ಪೌರ ಕಾರ್ಮಿಕರು ಆಸಕ್ತಿ ತೋರುತ್ತಿದ್ದಾರೆಂದು ತಿಳಿಸಿದರು. ಕಸವನ್ನು ಶಾಲಾ-ಕಾಲೇಜುಗಳ ಬಳಿ ಎಸೆಯಂತೆ ಎಚ್ಚರ ವಹಿಸುತ್ತೇವೆ. ಪ್ಲಾಸ್ಟಿಕ್ ವ್ಯಾಪಾರಿಗಳು ಉಡುಪಿ,ಚಿಂತಾಮಣಿ ಇನ್ನಿತರ ಕಡೆಗಳ ರೀತಿಯಲ್ಲಿ ಎಲ್ಲಾ ರೀತಿಯ ಪ್ಲಾಸ್ಟಿಕ್ ವ್ಯಾಪಾರಿಗಳನ್ನು ನಿಷೇಧಿಸುವ ಮೂಲಕ ನಗರಸಭೆಯ ಆಶಯಗಳಿಗೆ ಸಹಕಾರ ನೀಡಬೇಕೆಂದರು.
ವಿಂಗಡಿಸುವ ಕಸವನ್ನು ಖರೀದಿ ಮಾಡಲು ಕೆಲ ರೈತರು ಮುಂದೆ ಬಂದಿದ್ದಾರೆ. ಒಟ್ಟಿನಲ್ಲಿ ಕೋಲಾರವನ್ನು ಕ್ಲೀನ್ ಸಿಟಿ ಮಾಡುವುದಕ್ಕೆ ಕೈಗೊಂಡಿರುವ ಕಾರ್ಯಕ್ರಮಗಳಿಗೆ ಜನತೆಯ ಸಹಕಾರ ಮುಖ್ಯ. ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಎಲ್ಲಾ ವಾರ್ಡುಗಳಲ್ಲಿ ಸೋಮವಾರದ ನಂತರ ಜನಜಾಗೃತಿ ಸಭೆಗಳನ್ನು ಹಮ್ಮಿಕೊಳ್ಳಲಾಗುವುದೆಂದು ನಗರಸಭೆ ಅಧ್ಯಕ್ಷ ಮುಬಾರಕ್ ತಿಳಿಸಿದ್ದಾರೆ.
ಅಂಗಡಿ ಕಳ್ಳತನಕ್ಕೆ ಯತ್ನ
ಚಿಂತಾಮಣಿ: ಅಂಗಡಿಯೊಂದರ ರೋಲಿಂಗ್ ಶೆಟರ್ ಮುರಿದು ಕಳ್ಳತನಕ್ಕೆ ಯತ್ನಿಸಿ ವಿಫಲಗೊಂಡಿರುವ ಘಟಣೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕೈವಾರ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕೈವಾರ ಗ್ರಾಮದ ಮುಖ್ಯ ರಸ್ತೆ ಬಳಿಯಿರುವ ಕೃಷ್ಣಪ್ಪ ಎಂಬವರಿಗೆ ಸೇರಿದ ಹಾರ್ಡ್ವೇರ್ ಅಂಗಡಿಗೆ ಕಳ್ಳರ ಗುಂಪು ಶುಕ್ರವಾರ ಮಧ್ಯರಾತ್ರಿ ಕಬ್ಬಿಣದ ರಾಡು ಹಾಗೂ ಗಡಾರಿಯಿಂದ ರೋಲಿಂಗ್ ಶೆಟಕರ್ನ್ನು ಮೀಟಿ ಒಳ ನುಗ್ಗಲು ಯತ್ನಿಸಿದ್ದಾರೆ. ಶಬ್ದವನ್ನು ಗ್ರಹಿಸಿದ ನೆರೆಹೊರೆಯವರು ತಕ್ಷಣ ಎಚ್ಚೆತ್ತಿಕೊಂಡು ಜೋರಾಗಿ ಕೂಗಾಡಿದ್ದರಿಂದ ಪರಾರಿ ಆಗಿದ್ದಾರೆ.