ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಘನತೆ ಕಳೆದುಕೊಳ್ಳುತ್ತಿರುವ ಸಭೆಗಳು: ಜಿಲ್ಲಾ ಪಂಚಾಯ್ತಿ ಸಭೆಗಳ ಪ್ರಗತಿಪರ ಸಂಘಟನೆಗಳಿಂದ ಟೀಕೆ

Rashmi Kasaragodu
Updated On : 6 Jul 2014, 1:18 am

ಚಿಕ್ಕಬಳ್ಳಾಪುರ: ಜಿ.ಪಂ. ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿ.ಪಂ. ಸಾಮಾನ್ಯ ಸಭೆಯನ್ನು ರಾಹುಕಾಲ ನೋಡಿಕೊಂಡು ಪ್ರಾರಂಭಿಸಿರುವುದು ಖಂಡನೀಯ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಜಿಲ್ಲಾ ಪಂಚಾಯ್ತಿಯಲ್ಲಿ ನಡೆಸುತ್ತಿರುವ ಬಹುತೇಕ ಸಭೆಗಳು ಕಾಲಹರಣದಿಂದ ಘನತೆಯನ್ನು ಕಳೆದುಕೊಳ್ಳುತ್ತಿವೆ ಎಂದು ಪ್ರಗತಿಪರ ಸಂಘಟನೆಗಳು ಟೀಕಿಸಿವೆ.  ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು, ರೈತವರ್ಗ ಆತಂಕಕ್ಕೊಳಗಾಗಿದ್ದಾರೆ. ಅಕ್ರಮ ಸಕ್ರಮ ಯೋಜನೆಯಲ್ಲಿ ರೈತರು ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿಕೊಳ್ಳಲು ಹಣ ಕಟ್ಟಿ ಎರಡು ವರ್ಷವಾದರೂ ಸಮಸ್ಯೆ ಪರಿಹಾರವಾಗಿಲ್ಲ. ತಾಲೂಕು ಕಚೇರಿಗಳಲ್ಲಿ ಖಾತೆ ವರ್ಗಾವಣೆ, ಖಾತೆ ತಿದ್ದುಪಡಿ, 111 ಇ ನಕ್ಷೆ, ಹದ್ದುಬಸ್ತು, ಪೋಡಿ, ಭೂಮಾಪನ ಮತ್ತಿತರೆ ಕಾರ್ಯಗಳಿಗಾಗಿ ವರ್ಷಾನುಗಟ್ಟಲೇ ಅಲೆಯುತ್ತಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ. ಅನೈರ್ಮಲ್ಯದಿಂದ ಡೆಂಘೀ, ಮಲೇರಿಯಾ ಮುಂತಾದ ರೋಗಗಳ ಉಲ್ಬಣದ ಭೀತಿ ಉಂಟಾಗಿದೆ. ಗುಡಿಬಂಡೆ ತಾಲೂಕಿನ ನಂಜನಚೆರ್ಲು ಗ್ರಾಮದಲ್ಲಿ ಒಂದು ತಿಂಗಳಿಂದಲೂ ಊರಿನ ಜನತೆ ಜ್ವರದಿಂದ ನರಳುತ್ತಿದ್ದಾರೆ.  ಯಾವುದೇ ಜನಪ್ರತಿನಿಧಿಯಾಗಲೀ, ಉನ್ನತ ಮಟ್ಟದ ಅಧಿಕಾರಿಗಳಾಗಲೀ ಭೇಟಿ ನೀಡಿಲ್ಲ. ಮರಳು ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಅವ್ಯಾಹತವಾಗಿ ರಾಜಾರೋಷವಾಗಿ ನಡೆಯುತ್ತಿದ್ದರೂ, ಸಭೆಗಳಲ್ಲಿ ಚರ್ಚೆಯಾದ ಉದಾಹರಣೆಗಳಿಲ್ಲ. ಪರಿಸ್ಥಿತಿ ಹೀಗಿರುವಾಗ ಊಟದ ಸಮಯ, ಟೋಲ್ ರಿಯಾಯ್ತಿ, ಅನುದಾನ ಹಂಚಿಕೆ, ವಿಧಾನಸೌಧದಲ್ಲಿ ಪ್ರವೇಶಿಸಲು ಪಾಸ್ವಿತರಣೆ ಮುಂತಾದ ಸ್ವಹಿತಾಸಕ್ತಿಯ ಬೇಡಿಕೆಗಳಲ್ಲಿಯೇ ಜಿಪಂ ಸಭೆಗಳು ಮುಕ್ತಾಯವಾಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಸಿ ಬಳಿಯುವಂತಾಗಿದೆ ಎಂದು ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ, ಸಂಘಟನಾ ಕಾರ್ಯದರ್ಶಿ ಮಳ್ಳೂರು ಹರೀಶ್, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಹಾಗೂ ಅಜಾದ್ ಫೌಂಡೇಷನ್ನ ವರದರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಾದರೂ ಅಧಿಕಾರಿಗಳ ಸಮಯವನ್ನು ವ್ಯರ್ಥ ಮಾಡದೇ ರೈತವರ್ಗದ, ಜನ ಸಾಮಾನ್ಯರ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಜಿ.ಪಂ. ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.


ಕಚೇರಿ ಸ್ಥಳಾಂತರ

ಚಿಕ್ಕಬಳ್ಳಾಪುರ: ಜಿಲ್ಲಾ ತರಬೇತಿ ಸಂಸ್ಥೆಯ ಕಚೇರಿಯನ್ನು ಸ್ಥಳಾಂತರಿಸಲಾಗಿದೆ. ಜಿಲ್ಲಾ ತರಬೇತಿ ಸಂಸ್ಥೆ, ಪಟ್ರೇನಹಳ್ಳಿ (ಅಂಚೆ), ಅಗ್ನಿಶಾಮಕ ದಳದ ನೂತನ ಕಚೇರಿ ಕಟ್ಟಡದ ಪಕ್ಕ ಜಿಲ್ಲಾ ಕಾರಾಗೃಹ ರಸ್ತೆ, ಅಣಕನೂರು ಗ್ರಾಮ, ಚಿಕ್ಕಬಳ್ಳಾಪುರ-562101 ವಿಳಾಸದಲ್ಲಿ ಕಚೇರಿ ಕಾರ್ಯ ನಿರ್ವಹಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement