ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದುಸ್ಥಿತಿ ಬರದಂತೆ ಪ್ರಸ್ತಾವನೆ

Rashmi Kasaragodu
Updated On : 6 Jul 2014, 1:16 am

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವರುಣನ ಅವಕೃಪೆಯಿಂದ ಎದುರಾಗುತ್ತಿರುವ ಬರಕ್ಕೆ ಅನುಗುಣವಾಗಿ ತುರ್ತು ಪರಿಹಾರ ಕಾರ್ಯಗಳನ್ನು ಸಮರ್ಥವಾಗಿ ಕೈಗೊಳ್ಳುವ ಸಲುವಾಗಿ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರವನ್ನು ಕೋರಲು ಜಿಲ್ಲಾಡಳಿತ ಮತ್ತು ಜಿಪಂ ಮುಂದಾಗಿದೆ. ಆದಷ್ಟು ಬೇಗ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂಬ ನಿರ್ಧಾರವನ್ನು ಈಗಾಗಲೇ ಜಿಪಂ ಕೈಗೊಂಡಿದೆ.
ಮೇ ತಿಂಗಳಾಂತ್ಯ, ಜೂನ್ ತಿಂಗಳು, ಆ ನಂತರ ಜುಲೈ ತಿಂಗಳ ಮೊದಲ ವಾರದಲ್ಲಿ ಮುಂಗಾರು ಮಳೆ ಬೀಳುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಮುಂದಿನ ದಿನಗಳಲ್ಲಿ ಮಳೆ ಬಿದ್ದರೂ ಸಮಸ್ಯೆಗಳು ದೂರವಾಗುವುದಿಲ್ಲ ಎನ್ನುವ ರೀತಿಯಲ್ಲಿ ವಾತಾವರಣವಿದ್ದು ಜಿಲ್ಲೆಯಲ್ಲಿ ಹಿಂದೆಂದಿಗಿಂತ ಈ ಬಾರಿ ಬರದಿಂದ ದೊಡ್ಡ ಹೊಡೆತವೇ ಬೀಳಲಿದೆ ಎನ್ನುವುದು ಸ್ಪಷ್ಟವಾಗುತ್ತಿದೆ.
ಜನವರಿಯಲ್ಲಿಯೇ ಜಿಲ್ಲೆಯ ಒಟ್ಟು 750ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವುದನ್ನು ಗುರುತಿಸಲಾಗಿತ್ತು. ತಾತ್ಕಾಲಿಕವಾಗಿ ಕೊಳವೆ ಬಾವಿ ಕೊರೆಸಿ ನೀರನ್ನು ಒದಗಿಸಲು ಮುಂದಾದರೂ ಸುಮಾರು 300ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಮಸ್ಯೆ ಪೂರ್ಣವಾಗಿ ಬಗೆಹರಿಯಲಿಲ್ಲ. ಕೊಳವೆ ಬಾವಿ ಕೊರೆಸಿದರೂ ಸಮರ್ಪಕವಾಗಿ ನೀರು ಸಿಗದಿರುವುದು, ಮತ್ತೆ ಕೆಲವಡೆ ಕೊರೆಸಿದ ಕೆಲವೇ ದಿನಗಳಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗುತ್ತಿದ್ದದ್ದು ಇದಕ್ಕೆ ಕಾರಣವಾಗಿತ್ತು. ಇನ್ನೂ ನಗರ, ಪಟ್ಟಣ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಜಲಾಶಯಗಳು ಸಂಪೂರ್ಣವಾಗಿ ಖಾಲಿಯಾಗಿದ್ದು ಮಳೆಗೆ ಎದುರು ನೋಡಲಾಗುತ್ತಿದೆ. ಇದರ ಮಧ್ಯೆ ವರುಣರಾಯ ಕೈ ಕೊಟ್ಟಿರುವುದರಿಂದ 51 ಸಾವಿರ ಹೆಕ್ಟೇರ್ ಪ್ರದೇಶದಲ್ಲಿಟ್ಟುಕೊಂಡಿದ್ದ ಬಿತ್ತನೆ ಗುರಿಯಲ್ಲಿ ತೀರಾ ಹಿನ್ನಡೆಯಾಗಿದೆ. ಕೃಷಿ ಚಟುವಟಿಕೆಗಳು ಬಿರುಸುತನವನ್ನು ಕಳೆದುಕೊಂಡು ರೈತರು ತಲೆಯ ಮೇಲೆ ಕೈಹೊತ್ತು ಕೂರುವಂತಾಗಿದೆ. ಮತ್ತೊಂದೆಡೆ ಖಾಲಿಯಾಗಿರುವ ಕುಡಿಯುವ ನೀರಿನ ಮೂಲಗಳಾದ ಜಲಾಶಯಗಳು ಮತ್ತು ಕೊಳವೆ ಬಾವಿಗಳಲ್ಲಿ ನೀರು ಸಿಗದಂತಹ ಪರಿಸ್ಥಿತಿಯಿಂದ ಆತಂಕ ಎಲ್ಲರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಕಾಯುತ್ತ ಕುಳಿತುಕೊಳ್ಳುವುದರ ಬದಲು ಈಗಿನಿಂದಲೇ ಬರವನ್ನು ಎದುರಿಸಲು ದಿಟ್ಟ ಕ್ರಮ ಕೈಗೊಳ್ಳಲು ಮುಂದಾಗಬೇಕೆಂಬ ಒತ್ತಾಯಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.
ಜಿಪಂ ಸಾಮಾನ್ಯ ಸಭೆಯಲ್ಲಿ ಜಿಪಂ ಅಧ್ಯಕ್ಷರು ಮತ್ತು ಸದಸ್ಯರ ಒತ್ತಾಯದಂತೆ ಬರ ಪರಿಹಾರಕ್ಕಾಗಿ ಹೆಚ್ಚಿನ ಅನುದಾನವನ್ನು ಸರ್ಕಾರದಿಂದ ಪಡೆದುಕೊಳ್ಳಲು ಪ್ರಯತ್ನಿಸಬೇಕೆಂಬ ನಿರ್ಧಾರ ಕೈಗೊಳ್ಳಲಾಗಿದೆ. ಸದಸ್ಯರಾದ ರಾಘವೇಂದ್ರ ಹನುಮಾನ್, ಚಿನ್ನಪ್ಪಯ್ಯ, ನಾರಾಯಣಸ್ವಾಮಿ, ಚಿನ್ನಪ್ಪ ಸೇರಿದಂತೆ ಹಲವರು ಈ ಬಗ್ಗೆ ಗಮನ ಸೆಳೆದರು. ಇದರಿಂದ ಸಭೆಯಲ್ಲಿ ಗಂಭೀರ ಚರ್ಚೆ ನಡೆದು ಕೊನೆಗೆ ಮಳೆಯ ಕೊರತೆ ಹಿನ್ನೆಲೆಯಲ್ಲಿ ಪ್ರಸ್ತುತ ಉಂಟಾಗಿರುವ ಸಮಸ್ಯೆಗಳು, ನಷ್ಟ, ಇದಕ್ಕಾಗಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಅಗತ್ಯವಿರುವ ಹೆಚ್ಚುವರಿ ಅನುದಾನದ ಬಗ್ಗೆ ಲೆಕ್ಕಾಚಾರ ಹಾಕಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕೆಂದು ಜಿಪಂ ಸಿಇಒಗೆ ಸಭೆ ತಿಳಿಸಿತು.
ಅಗತ್ಯ ಬಿದ್ದಲ್ಲಿ ಶಾಸಕರು, ಸಚಿವರ ಮೂಲಕ ಸರ್ಕಾರದ ಮೇಲೆ ಒತ್ತಡವನ್ನು ಹಾಕಿಸುತ್ತೇವೆ ಎಂದು ಅಧ್ಯಕ್ಷರು ಮತ್ತು ಸದಸ್ಯರು ಭರವಸೆ ನೀಡಿದರು. ಏನೇ ಆಗಲಿ ಜಿಲ್ಲಾಡಳಿತ ಮತ್ತು ಜಿಪಂ ಪರಸ್ಪರ ಸಮನ್ವಯದಿಂದ ಹೆಚ್ಚಿನ ಅನುದಾನ ತರುವಲ್ಲಿ ಯಶಸ್ಸನ್ನು ಕಾಣಬೇಕು. ತ್ವರಿತವಾಗಿ ಪರಿಹಾರ ಕಾರ್ಯಗಳನ್ನು ಕೈಗೊಂಡು ಜನರು ಸಮಸ್ಯೆಗಳಿಗೆ ತುತ್ತಾಗುವುದನ್ನು ತಪ್ಪಿಸಬೇಕೆಂಬ ಒತ್ತಾಯ ಸಭೆಯಲ್ಲಿ ಕೇಳಿ ಬಂತು.



ಶಿಕ್ಷಕರ ಚುನಾವಣೆ
ಚಿಂತಾಮಣಿ: ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಚುನಾವಣೆಗಾಗಿ ಶಿಕ್ಷಕರಲ್ಲಿ ಪೈಪೋಟಿ ನಡೆದಿದೆ. ನಗರದ ಗುರುಭವನ ಮುಂಭಾಗದಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶನಿವಾರ ಮಧ್ಯಾಹ್ನ ರಾಜ್ಯ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ಆರ್. ವೆಂಕಟರಮಣಾ ರೆಡ್ಡಿ ಹಾಗೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಜನಾರ್ದನರೆಡ್ಡಿ ಸಮಕ್ಷದಲ್ಲಿ ಹಾಲಿ ಇರುವ ತಾಲೂಕು ಅಧ್ಯಕ್ಷ ಬಿ.ಎಚ್. ಮಂಜುನಾಥ್ ಅಧ್ಯಕ್ಷ ಸ್ಥಾನ ವೇಳಾ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಮುಂದಿನ 2014ನೇ ಸಾಲಿನ ನೂತನ ಅಧ್ಯಕ್ಷ ಸ್ಥಾನಕ್ಕೆ ಪ್ರೌಢಶಾಲಾ ಸಹ ಶಿಕ್ಷಕರಲ್ಲಿ ತೀವ್ರ ಪೈಪೋಟಿ ಎದುರಾಗಿದೆ. ಅಧ್ಯಕ್ಷ ಸ್ಥಾನಕ್ಕಾಗಿ ಮಾಜಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾರಾಯಣ ರೆಡ್ಡಿ ಗುಂಪಿಗೂ ಹಾಗೂ ಬಿ.ಎಚ್. ಮಂಜುನಾಥ್ ಗುಂಪಿಗೂ ಲಾಭಿ ಎದುರಾಗಿದೆ. ಶಿಕ್ಷಕರ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ 1ವರ್ಷದಿಂದ ಕಾರ್ಯನಿರ್ವಹಿಸಿಕೊಂಡು ಬಂದಿದ್ದ ಶಿಕ್ಷಕ ಬಿ.ಎಚ್. ಮಂಜುನಾಥ್ ಮತ್ತೊಮ್ಮೆ ಅಧ್ಯಕ್ಷರಾಗಲು ಹಲವು ಶಿಕ್ಷಕರು ಒತ್ತಡ ಹೇರಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement